ನಗರಸಭೆ ಸಾಮಾನ್ಯ ಸಭೆಯಲ್ಲಿಆಯುಕ್ತ ಜಗದೀಶ ಹುಲಗೆಜ್ಜಿ
‘ನಮ್ಮ ಕಾರವಾರ’ ಮೊಬೈಲ್ ಆ್ಯಪ್ ಸಿದ್ಧ
ವಿಕ ಸುದ್ದಿಲೋಕ ಕಾರವಾರ
ನಗರದ ಸಮಸ್ಯೆಗಳನ್ನು ನಿಗದಿತ ಸಮಯದಲ್ಲಿಬಗೆಹರಿಸಲು ಹಾಗೂ ಕಚೇರಿಯ ಆಡಳಿತವನ್ನು ಪಾರದರ್ಶಕವಾಗಿಡಲು ಮೊಬೈಲ್ ಆ್ಯಪ್ ಸಿದ್ಧಪಡಿಸಿದ್ದು ಕೆಲವೇ ದಿನಗಳಲ್ಲಿಈ ಆ್ಯಪ್ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಇಲ್ಲಿನ ನಗರಸಭೆಯ ಆವರಣದಲ್ಲಿಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿನಗರಸಭೆಯ ಆಯುಕ್ತ ಜಗದೀಶ ಹುಲಗೆಜ್ಜಿ ಈ ಬಗ್ಗೆ ವಿವರಿಸಿದರು.
‘‘ಖಾಸಗಿ ಕಂಪನಿಯೊಂದರಿಂದ ‘ನಮ್ಮ ಕಾರವಾರ’ ಹೆಸರಿನ ಆ್ಯಪ್ ಸಿದ್ಧಪಡಿಸಲಾಗಿದೆ. ಈ ಆ್ಯಪ್ ನಲ್ಲಿನಗರದ ಸಾರ್ವಜನಿಕರು ಮೊಬೈಲ್ ಸಂಖ್ಯೆಯಿಂದ ನೋಂದಣಿ ಮಾಡಿಕೊಳ್ಳಬಹುದು. ಬಳಿಕ ನಗರ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಫೋಟೊ ಅಥವಾ ವೀಡಿಯೊ ಚಿತ್ರೀಕರಿಸಿ ಅಪ್ ಲೋಡ್ ಮಾಡಬೇಕು. ಯಾವ ಅಧಿಕಾರಿ ಅಥವಾ ಸಿಬ್ಬಂದಿ ಸಮಸ್ಯೆಯನ್ನು ಪರಿಹರಿಸಲಿದ್ದಾರೆ. ಎಷ್ಟು ಸಮಯದಲ್ಲಿಸಮಸ್ಯೆ ಬಗೆಹರಿಯಲಿದೆ’’ ಎಂದು ನೋಡಬಹುದು.
‘‘ಈಗಾಗಲೇ ಈ ಆ್ಯಪ್ ಪ್ರಾಯೋಗಿಕ ಹಂತದಲ್ಲಿದೆ. ಇದೀಗ ಗೂಗಲ್ ಪ್ಲೇಸ್ಟೋರ್ ಗೂ ನೀಡಲಾಗಿದ್ದು ಮೂರು ದಿನಗಳಲ್ಲಿಸಾರ್ವಜನಿಕರಿಗೆ ಲಭ್ಯವಾಗಲಿದೆ’’ ಎಂದರು.
ಸದಸ್ಯ ನಿತಿನ ಪಿಕಳೆ ಮಾತನಾಡಿ, ‘‘ಮೀನು ಮಾರುಕಟ್ಟೆಯಲ್ಲಿಸಂಜೆ 7 ಗಂಟೆಯಾದ ಬಳಿಕ ಒಂದು ಬಾಗಿಲು ಬಂದ್ ಮಾಡಲಾಗುತ್ತದೆ. ಅಲ್ಲದೇ ಈಚೆಗೆ ಮೀನು ಶುಚಿಗೊಳಿಸುವ ಮಹಿಳೆಯರ ಸಲಕರಣೆಗಳನ್ನು ಗುತ್ತಿಗೆದಾರರು ವಶಕ್ಕೆ ಪಡೆದಿದ್ದಾರೆ. ಇದರಿಂದ ಗ್ರಾಹಕರು ಹಾಗೂ ಮೀನು ಮಾರಾಟ ಮಹಿಳೆಯರಿಗೆ ಸಮಸ್ಯೆಯಾಗುತ್ತಿದೆ’’ ಎಂದು ದೂರಿದರು.
ಬಳಿಕ ಈ ಸಮಸ್ಯೆಗೆ ದನಿಗೂಡಿಸಿದ ಇತರ ಸದಸ್ಯರು ಮೀನು ಮಾರುಕಟ್ಟೆಯಲ್ಲಿಇರುವ ನೀರಿನ ಹಾಗೂ ಸ್ವಚ್ಛತೆಯ ಸಮಸ್ಯೆಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಸದ್ಯ ಎಂಜಿ ರಸ್ತೆಯಲ್ಲಿಕಬ್ಬು ಮಾರಾಟಕ್ಕೆ ಇಡುತ್ತಿದ್ದಾರೆ. ಅವರನ್ನು ಮುಖ್ಯ ರಸ್ತೆಯ ಬದಲು ಹೆದ್ದಾರಿಯ ಮೇಲ್ಸೇತುವೆ ಕೆಳಗೆ ಇಡಲು ಅವಕಾಶ ನೀಡುವ ಕುರಿತು ಚರ್ಚೆ ನಡೆಯಿತು.
ನಗರಸಭೆಯ ಅಧ್ಯಕ್ಷ ರವಿರಾಜ ಅಂಕೋಲೆಕರ ಮಾತನಾಡಿ,‘‘ಮೀನು ಮಾರುಕಟ್ಟೆಯ ಗುತ್ತಿಗೆಯನ್ನು ಸದ್ಯ ಹೊಸ ಗುತ್ತಿಗೆದಾರರಿಗೆ ನೀಡಲಾಗಿದೆ. ಹೀಗಾಗಿ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಗಮನಹರಿಸುತ್ತೇವೆ. ಜತೆಗೆ ನೀರಿನ ಸಮಸ್ಯೆ ನಿವಾರಣೆಗೆ ಒಂದು ಬೋರ್ ವೆಲ್ ಕೊರೆಸಬೇಕಿದೆ’’ ಎಂದರು.
ನಗರಸಭೆಯ ಆಯುಕ್ತ ಜಗದೀಶ ಹುಲಗೆಜ್ಜಿ ಮಾತನಾಡಿ, ‘‘ಹೆದ್ದಾರಿಯ ಮೇಲ್ಸೇತುವೆಯ ಕೆಳಭಾಗವನ್ನು ಬಳಕೆ ನೀಡಲು ಈಗಾಗಲೇ ಸಚಿವರು ಹಾಗೂ ಜಿಲ್ಲಾಧಿಕಾರಿಯವರೊಂದಿಗೆ ಚರ್ಚೆ ನಡೆದಿದೆ. ಇದೀಗ ಬಂದ ಕಬ್ಬಿನ ವ್ಯಾಪಾರಿಗಳಿಗೆ ಎಂಜಿ ರಸ್ತೆಯಲ್ಲಿಯೇ ಅವಕಾಶ ನೀಡಲಾಗಿದ್ದು, ರೊಟೇಷನ್ ಮೂಲಕ ಸರ್ವಿಸ್ ರಸ್ತೆಯ ಬದಿಯಲ್ಲಿಅವಕಾಶ ಕೊಡುತ್ತೇವೆ ’’ ಎಂದರು.
ನಗರಸಭೆಯ ಉಪಾಧ್ಯಕ್ಷೆ ಪ್ರೀತಿ ಜೋಶಿ, ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಬಾಕ್ಸ್
ಬಿಜೆಪಿನೋ, ಬಿಜಾಪುರನೋ ?
ನಗರಸಭೆಯ ಸದಸ್ಯ ಗಣಪತಿ ನಾಯ್ಕ ಅವರ ಹಾಸ್ಯಪ್ರಜ್ಞೆಯಿಂದ ಸಭೆಯು ಕೆಲಕಾಲ ನಗೆಗಡಲಲ್ಲಿತೇಲಿತು. ನಮ್ಮ ಕಾರವಾರ ಆ್ಯಪ್ ಬಗ್ಗೆ ಕಂಪೆನಿಯ ಸಿಬ್ಬಂದಿ ಪ್ರಾತ್ಯಕ್ಷಿಕತೆ ನೀಡುವ ವೇಳೆ ಅವರ ವಿಳಾಸವನ್ನು ಬಿಜಾಪುರ ಎನ್ನುವುದರ ಬದಲಾಗಿ ಸಂಕ್ಷಪ್ತವಾಗಿ ಬಿಜೆಪಿ ಎಂದು ನಮೂದಿಸಲಾಗಿತ್ತು. ಇದನ್ನು ಗಮನಿಸಿದ ಸದಸ್ಯ ಗಣಪತಿ ನಾಯ್ಕ ಅವರು, ಈ ಆ್ಯಪ್ ಬಿಜೆಪಿಯದ್ದಾ? ಅಥವಾ ನೀವು ಬಿಜೆಪಿಯವರಾ ಎಂದು ಪ್ರಶ್ನಿಸಿದರು. ಬಳಿಕ ಬಿಜಾಪುರದ ವಿಳಾಸವನ್ನು ಬಿಜೆಪಿ ಎಂದು ಬರೆದಿರುವುದುದಾಗಿ ತಿಳಿಸಿದ ಬಳಿಕ ಸಭೆಯಲ್ಲಿನಗೆ ಉಕ್ಕಿತು.
ಬಾಕ್ಸ್
ಅನಿಸಿಕೆ ಹಂಚಿಕೊಂಡ ಸದಸ್ಯರು
ನಗರಸಭೆಯ ಸದಸ್ಯರ ಅಧಿಕಾರ ಅವಧಿಯು ಕೊನೆಯ ದಿನ ಹಾಗೂ ಕೊನೆಯ ಸಭೆಯಾದ ಕಾರಣ ಎಲ್ಲರೂ ತಮ್ಮ ಅನಿಸಿಕೆ ಹಂಚಿಕೊಂಡರು. ಈ ವೇಳೆ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ ಮಾತನಾಡಿ, ‘‘31 ವಾರ್ಡಿನ ಸದಸ್ಯರು ತಮ್ಮ ಅಧಿಕಾರ ಅವಧಿಯಲ್ಲಿಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡು ಸಾಕಷ್ಟು ಅಭಿವೃದ್ಧಿಯ ಕಾರ್ಯ ನಡೆಸಿದ್ದಾರೆ. ಮುಂದೆಯೂ ಮತ್ತೆ ಆಯ್ಕೆಯಾಗಿ ಕಾರವಾರ ನಗರಸಭೆಯನ್ನು ರಾಜ್ಯಮಟ್ಟದಲ್ಲಿಗುರುತಿಸುವಂತೆ ಮಾಡಬೇಕು’’ ಎಂದರು.
31ಕೆಆರ್ ಡಬ್ಲೂ1
ಕಾರವಾರದ ನಗರಸಭೆಯಲ್ಲಿಸಾಮಾನ್ಯ ಸಭೆ ನಡೆಯಿತು.

