ವಿಕ ಸುದ್ದಿಲೋಕ ಬೆಂಗಳೂರು
ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿಮಂಗಳವಾರವೂ ಸಾವಿರಾರು ಸಂಖ್ಯೆಯಲ್ಲಿಭಾಗವಹಿಸಿದ್ದರು.
ಸಂಜೆಯಾಗುತ್ತದ್ದಂತೆ ರಸ್ತೆಗಳು ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದ್ದವು. ಕಡಲೆಕಾಯಿ, ಆಟಿಕೆಗಳು, ತಿಂಡಿಗಳು, ಗೃಹೋಪಯೋಗಿ ವಸ್ತುಗಳೂ ಸೇರಿದಂತೆ ವ್ಯಾಪಾರ ವಹಿವಾಟು ಬಿರುಸಾಗಿ ಸಾಗಿತ್ತು.
ರಾಮಕೃಷ್ಣ ಆಶ್ರಮದ ವೃತ್ತದಿಂದ ಹಿಡಿದು ಎನ್ ಆರ್ ಕಾಲೊನಿವರೆಗಿನ ರಸ್ತೆ ತುಂಬ ವ್ಯಾಪಾರ ವಹಿವಾಟು ಜೋರಾಗಿತ್ತು. ಪುಟ್ಟಮಕ್ಕಳ ದೃಷ್ಟಿ ಬಲೂನು, ಮಿಠಾಯಿ ಕಡೆ ಹಾಯ್ದರೆ, ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರು ಬಜ್ಜಿ, ಬೋಂಡ, ಕಬ್ಬಿನಹಾಲು, ಗೋಬಿ ಮಂಚೂರಿ, ಬೇಲ್ ಪುರಿ, ಮಸಾಲೆಪುರಿ ಅಂಗಡಿಗಳ ಮುಂದೆ ನಿಂತು ಬಾಯಿ ಚಪ್ಪರಿಸುತ್ತ ತಿನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪರಿಷೆಯಲ್ಲಿಗೃಹಾಲಂಕಾರಿಕ ವಸ್ತುಗಳಿಗೆ ಮನಸೋತ ಮಹಿಳೆಯರು ಬಾಗಿಲು, ಕಿಟಕಿ, ಗೋಡೆಗಳನ್ನು ಅಲಂಕರಿಸುವ ವಸ್ತುಗಳ ಖರೀದಿಯಲ್ಲಿನಿರತರಾಗಿದ್ದರು.
ಯುವತಿಯರು ಉಡುಗೆ ತೊಡುಗೆಯೊಂದಿಗೆ ಬಳೆ, ಸರ ಸೇರಿದಂತೆ ಅಲಂಕಾರಿಕ ವಸ್ತುಗಳನ್ನು ಕೊಳ್ಳುವುದರಲ್ಲಿಮಗ್ನರಾಗಿದ್ದರು. ಶಾಲಾ- ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರು ಸಂಜೆ ಕುಟುಂಬ ಸಮೇತರಾಗಿ ಪರಿಷೆಗೆ ಆಗಮಿಸಿದ್ದರಿಂದ ಸಂಜೆಯಾಗುತ್ತಲೇ ವ್ಯಾಪಾರ ಮತ್ತಷ್ಟು ಚುರುಕಾಗಿತ್ತು.
ಈ ಬಾರಿ ಐದು ದಿನ ಪರಿಷೆ ಆಯೋಜಿಸಿದ್ದು, ನ.21ರವರೆಗೆ ನಡೆಯಲಿದೆ.

