ಕಳೆದ ಖಾರಿಫ್ ಹಂಗಾಮಿನಲ್ಲಿ ಅತಿಯಾದ ಮಳೆಯಿಂದಾಗಿ ಭತ್ತದ ಬೆಳೆ ಹಾನಿಗೊಳಗಾಗಿತ್ತು. ಈಗ ಬೇಸಿಗೆ ಬೆಳೆಗೂ ನೀರು ಸಿಗದಿದ್ದರೆ, ಭತ್ತದ ಉತ್ಪಾದನೆಯಲ್ಲಿ ಶೇ.25ರಷ್ಟು ಕುಸಿತ ಕಾಣುವ ಸಾಧ್ಯತೆ ಇದೆ ಎಂದು ರೈತರು ಮತ್ತು ವ್ಯಾಪಾರಿಗಳು ಎಚ್ಚರಿಸಿದ್ದಾರೆ. ರಾಜ್ಯ ವಾರ್ಷಿಕ ಸುಮಾರು 80 ಲಕ್ಷ ಟನ್ ಭತ್ತ ಉತ್ಪಾದಿಸುತ್ತದೆ. ಆದರೆ, ಈ ರಬಿ ಹಂಗಾಮಿನ ಅಂತ್ಯದ ವೇಳೆಗೆ ಉತ್ಪಾದನೆ 60 ಲಕ್ಷ ಟನ್ ಗೆ ಕುಸಿಯುವ ನಿರೀಕ್ಷೆಯಿದೆ. ಕಲ್ಯಾಣ ಕರ್ನಾಟಕ ಭಾಗದ ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳು ಅತಿ ಹೆಚ್ಚು ಬಾಧಿತವಾಗಲಿವೆ. ಈ ಪ್ರದೇಶಗಳನ್ನು ರಾಜ್ಯದ 'ಅಕ್ಕಿ ಕಣಜ' ಎಂದೇ ಕರೆಯಲಾಗುತ್ತದೆ.ಬೆಳೆಗಳಿಗೆ ನೀರು ಹರಿಸದಿರುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡು, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ, ತುಂಗಭದ್ರಾ ಜಲಾಶಯ ಸಲಹಾ ಸಮಿತಿ ಅಧ್ಯಕ್ಷರೂ ಆದ ಶಿವಾನಂದ್ ತಂಗಡಗಿ ಅವರು, "ಕಳೆದ ವರ್ಷ 19ನೇ ನಂಬರ್ ಗೇಟ್ ಕುಸಿದಿದ್ದು ಒಂದು ಎಚ್ಚರಿಕೆಯಾಗಿತ್ತು. ಎಲ್ಲ ಗೇಟ್ ಗಳನ್ನು ಬದಲಾಯಿಸುವುದು ಅನಿವಾರ್ಯ. ಜನರಿಗೆ ಮೊದಲೇ ಎಚ್ಚರಿಕೆ ನೀಡಲಾಗಿದೆ. ಕೆಲಸವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು. ಮುಂದಿನ ಮಳೆಗಾಲ ಬರುವ ಮುನ್ನವೇ ಕೆಲಸ ಮುಗಿಯಲಿದೆ," ಎಂದು ತಿಳಿಸಿದರು.
ಈ ನಿರ್ಧಾರದಿಂದ ಬಳ್ಳಾರಿ, ರಾಯಚೂರು, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿರುವ 250ಕ್ಕೂ ಹೆಚ್ಚು ಅಕ್ಕಿ ಗಿರಣಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಲಿವೆ. ಇದು ರೈತರು ಮತ್ತು ಅಕ್ಕಿ ಉದ್ಯಮದ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎಕ್ಸ್ (X) ನಲ್ಲಿ, "ಈ ನಿರ್ಧಾರದಿಂದ ಸುಮಾರು 20 ಲಕ್ಷ ಟನ್ ಅಕ್ಕಿ ಉತ್ಪಾದನೆ ನಷ್ಟವಾಗುವ ಅಂದಾಜಿದೆ," ಎಂದು ಹೇಳಿದ್ದಾರೆ.
ಈ ನಿರ್ಧಾರದ ಪರಿಣಾಮಗಳು ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಬಳ್ಳಾರಿಯ ಸಿರುಗುಪ್ಪದ ಅಕ್ಕಿ ವ್ಯಾಪಾರಿ ದೊಡ್ಡಪ್ಪಗೌಡ ಪಾಟೀಲ್ ಅವರ ಪ್ರಕಾರ, ಸರ್ಕಾರ ನೀರು ಹರಿಸುವುದಿಲ್ಲ ಎಂದು ಘೋಷಿಸಿದ ತಕ್ಷಣವೇ ಜನಪ್ರಿಯ RNR ಭತ್ತದ ತಳಿಯ ಬೆಲೆ 75 ಕೆಜಿ ಬ್ಯಾಗ್ ಗೆ 1,950 ರೂ.ನಿಂದ 2,000 ರೂ.ಗೆ ಏರಿದೆ. ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಬೇಡಿಕೆಯಿರುವ ಸೋನಾ ಮಸೂರಿ ತಳಿಯ ಬೆಲೆಯೂ ಹೆಚ್ಚಾಗುವ ನಿರೀಕ್ಷೆಯಿದೆ.
ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷೆ ಸಾವಿತ್ರಿ ಪುರುಷೋತ್ತಮ್ ಅವರು ಕೂಡ ಇದೇ ಕಳವಳ ವ್ಯಕ್ತಪಡಿಸಿದ್ದಾರೆ. "ಅಕ್ಕಿ ಬೆಲೆ ಏರಿಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ," ಎಂದರು. ಅಲ್ಲದೆ, ಈ ಪ್ರದೇಶದಲ್ಲಿ ನೀರಾವರಿ ಸಮಸ್ಯೆಗಳಿಗೆ ಸೂಕ್ತ ಗಮನ ಹರಿಸುತ್ತಿಲ್ಲ ಎಂದು ಅವರು ಟೀಕಿಸಿದರು. "ಮಂಡ್ಯ-ಮೈಸೂರು ಭಾಗದಲ್ಲಿ ಚುನಾಯಿತ ಪ್ರತಿನಿಧಿಗಳು ನೀರಾವರಿ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಾರೆ. ಆದರೆ, ನಮ್ಮ ಪ್ರದೇಶಕ್ಕೆ ಅಂತಹ ಗಮನ ಸಿಗುತ್ತಿಲ್ಲ," ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಅಕ್ಕಿ ಗಿರಣಿ ಸಂಘದ ಕಾರ್ಯದರ್ಶಿ ಎಸ್. ರಮೇಶ್ ಅವರು, ಉತ್ತಮ ಮಳೆಯಾದರೂ, ವ್ಯಾಪಾರಿಗಳು ಹೊರ ರಾಜ್ಯಗಳಿಂದ ಅಕ್ಕಿ ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಇದರಿಂದ ಚಿಲ್ಲರೆ ಬೆಲೆ ಪ್ರತಿ ಕೆಜಿಗೆ ಕನಿಷ್ಠ 8 ರೂ. ಏರಿಕೆಯಾಗುವ ನಿರೀಕ್ಷೆಯಿದೆ. "ರಾಯಚೂರು ಎಪಿಎಂಸಿಗೆ ದಿನನಿತ್ಯ ಸರಾಸರಿ 50,000 ಬ್ಯಾಗ್ ಗಳ (75 ಕೆಜಿ) ಬದಲಿಗೆ ಸುಮಾರು 30,000 ಬ್ಯಾಗ್ ಗಳು ಮಾತ್ರ ಬರುತ್ತಿವೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ, ಆದರೆ ಚಳಿಗಾಲದ ಅಂತ್ಯದ ವೇಳೆಗೆ ಇದು ಗಂಭೀರವಾಗಲಿದೆ," ಎಂದು ರಮೇಶ್ ತಿಳಿಸಿದರು.
ಇದೇ ವೇಳೆ, ರೈತರು ಖಾರಿಫ್ ಬೆಳೆ ನಷ್ಟ ಪರಿಹಾರದ ಮಾದರಿಯಲ್ಲಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಖಾರಿಫ್ ಬೆಳೆ ನಷ್ಟಕ್ಕೆ ಪ್ರತಿ ಹೆಕ್ಟೇರ್ ಗೆ 8,500 ರೂ. ಹೆಚ್ಚುವರಿ ಪರಿಹಾರ ಮತ್ತು ಎನ್ ಡಿಆರ್ ಎಫ್ (NDRF) ನೆರವು ನೀಡಲಾಗಿತ್ತು. ಕರ್ನಾಟಕ ರೈತ ಸಂಘ-ಹಸಿರು ಸೇನೆಯ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಅವರು, "ನವೆಂಬರ್ 26ರಂದು ಬೆಂಗಳೂರಿನಲ್ಲಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಪ್ರತಿಭಟನೆ ನಡೆಸುತ್ತೇವೆ. ಸರ್ಕಾರ ಸ್ಪಂದಿಸದಿದ್ದರೆ, ಡಿ.8ರಂದು ಆರಂಭವಾಗಲಿರುವ ಶಾಸನಸಭೆಯ ಚಳಿಗಾಲದ ಅಧಿವೇಶನ ನಡೆಯಲಿರುವ ಬೆಳಗಾವಿಗೆ ಪ್ರತಿಭಟನೆಯನ್ನು ಸ್ಥಳಾಂತರಿಸುತ್ತೇವೆ," ಎಂದು ಹೇಳಿದರು.
ಇನ್ನು, ದಲ್ಲಾಳಿಗಳು ಕೃತಕ ಅಭಾವ ಸೃಷ್ಟಿಸಲು ಅಕ್ಕಿಯನ್ನು ಕಪ್ಪು ಮಾರುಕಟ್ಟೆಯಲ್ಲಿ ದಾಸ್ತಾನು ಮಾಡಬಹುದು. ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಇದು ಬೆಲೆ ಏರಿಕೆಯನ್ನು ಮತ್ತಷ್ಟು ತೀವ್ರಗೊಳಿಸಬಹುದು.

