ಬಂದ್'ಗೆ ಬೆಂಬಲಿಸಿ ಬಿಜೆಪಿ ಕಾರ್ಯಕರ್ತರು ಮತ್ತು ರೈತರು ಮುಂಜಾನೆಯಿಂದಲೇ ರಸ್ತೆಗಿಳಿದು, ಅಂಗಡಿಗಳನ್ನು ಮುಚ್ಚಿಸಲು ಮನವಿ ಮಾಡಿದರು. ಕೆಲವೆಡೆ ರಸ್ತೆಗಳಲ್ಲಿ ಟೈರ್'ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಕಚೇರಿಗಳು, ಶಾಲೆ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದರೂ, ಜನಸಂಚಾರ ವಿರಳವಾಗಿತ್ತು. ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದಾಗ, ಕೆಲವು ಕಡೆ ಮಾತಿನ ಚಕಮಕಿ ನಡೆಯಿತು.ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಪ್ರಮುಖ ಗ್ರಾಮಗಳ ರೈತರು ಕೂಡ ಈ ಬಂದ್'ನಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಕ್ವಿಂಟಾಲ್'ಗೆ 2,400 ರೂ. ಬೆಂಬಲ ಬೆಲೆ ನಿಗದಿ ಮಾಡಿದ್ದರೂ, ರಾಜ್ಯದಲ್ಲಿ ಕ್ವಿಂಟಾಲ್'ಗೆ 1,600 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆದು, ನ್ಯಾಯಯುತ ಬೆಲೆ ನೀಡಬೇಕೆಂದು ಅವರು ಒತ್ತಾಯಿಸಿದರು.
ಅಕ್ಕಿ ವಿಚಾರದಲ್ಲಿ ತೆಲಂಗಾಣದಲ್ಲಿ ಕ್ವಿಂಟಾಲ್'ಗೆ 500 ರೂ. ಬೋನಸ್ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ, ಅಕ್ಕಿಗೆ ನಿಗದಿಪಡಿಸಿದ 2,389 ರೂ. ಬೆಂಬಲ ಬೆಲೆಯ ಜೊತೆಗೆ ಹೆಚ್ಚುವರಿಯಾಗಿ 1,000 ರೂ. ಬೋನಸ್ ನೀಡಬೇಕೆಂದು ರೈತರು ಆಗ್ರಹಿಸಿದರು.
ಇದೇ ವೇಳೆ, ಬಂದ್'ಗೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಕಾರ್ಯಕರ್ತರು ಹೊನ್ನಾಳಿ ಪಟ್ಟಣದ ಟಿಬಿ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಮತ್ತು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ನಡುವೆ ಮಾತಿನ ಚಕಮಕಿ ನಡೆಯಿತು.
ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಂದ್'ನಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ವ್ಯಾಪಾರಸ್ಥರು ಕೂಡ ಬಂದ್'ಗೆ ಬೆಂಬಲ ಸೂಚಿಸಿ, ತಮ್ಮ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಸಹಕಾರ ನೀಡಿದರು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಬಿಗಿ ಭದ್ರತೆ ಕೈಗೊಂಡಿದ್ದರು. ಈ ಬಂದ್'ನಿಂದಾಗಿ ಜಿಲ್ಲೆಯ ರೈತರ ಸಮಸ್ಯೆಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.

