ಹಗಲಲ್ಲಿಬಿರಿಯಾನಿ ಮಾರಾಟ, ರಾತ್ರಿಯಾದರೆ ಬೈಕ್ ಕಳವು ! (ಫೋಟೊ ಇದೆ )
Contributed by: MANJUNATHA S|Vijaya Karnataka•
Subscribe
ಬೆಂಗಳೂರಿನಲ್ಲಿಹಗಲಿನಲ್ಲಿಬಿರಿಯಾನಿ ಮಾರಾಟ ಮಾಡಿ ರಾತ್ರಿ ವೇಳೆ ಬೈಕ್ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ 20 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ, ಬೈಕ್ ಕಳವು ಮಾಡುತ್ತಿದ್ದ ಎಂ.ಟೆಕ್ ಪದವೀಧರ ಸೇರಿದಂತೆ ಮೂವರನ್ನು ಬಂಧಿಸಿ 18 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕದ್ದ ಬೈಕ್‌ಗಳನ್ನು ಬೇರೆಡೆ ಮಾರಾಟ ಮಾಡುತ್ತಿದ್ದರು.
ಬೆಂಗಳೂರಿನಲ್ಲಿ ಬೈಕ್ ಕಳ್ಳರ ಅಟ್ಟಹಾಸಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಹಗಲಲ್ಲಿ ಬಿರಿಯಾನಿ ಮಾರಾಟ ಮಾಡಿ, ರಾತ್ರಿ ವೇಳೆ ನಕಲಿ ಕೀ ಬಳಸಿ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಸೋದರ ಸಂಬಂಧಿ (ಷಡ್ಗರು)ಗಳಾದ ಇಬ್ಬರನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಮೂಲದ ಸಚಿನ್ (23) ಮತ್ತು ಮಂಡ್ಯದ ಮನುಕುಮಾರ್ ಅಲಿಯಾಸ್ ಮನು (35) ಬಂಧಿತ ಆರೋಪಿಗಳು. ಇವರಿಂದ 37.50 ಲಕ್ಷ ರೂ. ಮೌಲ್ಯದ 20 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು, ಕೇವಲ ಶೋಕಿಗಾಗಿ ಬೈಕ್ ಕಳವು ಮಾಡುತ್ತಿದ್ದ ಎಂ.ಟೆಕ್ ಪದವೀಧರ ಸೇರಿದಂತೆ ಮೂವರನ್ನು ಬಂಡೆಪಾಳ್ಯ ಠಾಣೆ ಪೊಲೀಸರು ಬಂಧಿಸಿ, 15 ಲಕ್ಷ ರೂ. ಮೌಲ್ಯದ 18 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹದೇವಪುರ ಠಾಣೆ ಪೊಲೀಸರು, ಹೂಡಿಯ ಬಸವಣ್ಣನಗರದಲ್ಲಿ ಇತ್ತೀಚೆಗೆ ಕಳವಾಗಿದ್ದ ಬೈಕ್ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಸಿಸಿಟಿವಿ ದೃಶ್ಯಾವಳಿಗಳು ಮತ್ತು ತಾಂತ್ರಿಕ ಅಂಶಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಾದ ಮನು ಮತ್ತು ಸಚಿನ್ ಅಕ್ಕ-ತಂಗಿಯರನ್ನು ಮದುವೆಯಾಗಿದ್ದು, ರಾಮಮೂರ್ತಿನಗರದಲ್ಲಿ ವಾಸಿಸುತ್ತಿದ್ದರು. ಹಗಲಿನಲ್ಲಿ ತಳ್ಳುಗಾಡಿಯಲ್ಲಿ ಬಿರಿಯಾನಿ ಹೋಟೆಲ್ ನಡೆಸುತ್ತಿದ್ದರು. ಹೆಚ್ಚಿನ ಹಣ ಗಳಿಸುವ ಆಸೆಯಿಂದ ರಾತ್ರಿ ವೇಳೆ ಮನೆ ಮುಂದೆ ಮತ್ತು ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ಗಳನ್ನು ನಕಲಿ ಕೀ ಬಳಸಿ ಕಳವು ಮಾಡುತ್ತಿದ್ದರು. ಕದ್ದ ಬೈಕ್‌ಗಳನ್ನು ಶಿವಮೊಗ್ಗ, ಮಂಡ್ಯ, ಹಾಸನ ಸೇರಿದಂತೆ ಬೇರೆಡೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು.ಇನ್ನೊಂದು ಪ್ರಕರಣದಲ್ಲಿ, ಬಂಡೆಪಾಳ್ಯ ಠಾಣೆ ಪೊಲೀಸರು ಎಂ.ಟೆಕ್ ಪದವೀಧರನೊಬ್ಬನನ್ನೂ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಕೇವಲ ಬೈಕ್ ಓಡಿಸುವ ಶೋಕಿಗಾಗಿ ಕಳವು ಮಾಡುತ್ತಿದ್ದ ಎಂ.ಟೆಕ್ ಪದವೀಧರ ರಿಷವ್ ಚಕ್ರವರ್ತಿ (30) ಎಂಬಾತನನ್ನು ಬಂಧಿಸಲಾಗಿದೆ. ಈತ ಈ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಕೆಲ ವರ್ಷಗಳಿಂದ ಕೆಲಸ ಬಿಟ್ಟು ಮನೆಯಲ್ಲೇ ಇದ್ದು, ಬೈಕ್ ಕಳವು ಮಾಡುತ್ತಿದ್ದ. ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ಗಳನ್ನು ನಕಲಿ ಕೀ ಬಳಸಿ ಕದ್ದು, ಓಡಾಡಿ, ನಂತರ ಎಲ್ಲೆಂದರಲ್ಲಿ ಬಿಟ್ಟು ಪರಾರಿಯಾಗುತ್ತಿದ್ದ. ಈತನಿಂದ ಎಂಟು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ಬಂಡೆಪಾಳ್ಯ ಠಾಣೆ ಪೊಲೀಸರು, ಪ್ರತ್ಯೇಕ ಪ್ರಕರಣಗಳಲ್ಲಿ ತಮಿಳುನಾಡು ಮೂಲದ ನಜೀಮ್‌ಮುಲ್ಲಾ ಅಲಿಯಾಸ್ ಜೋಕರ್ (19) ಮತ್ತು ಅಜೀಮುಲ್ಲಾ (19) ಎಂಬುವರನ್ನು ಬಂಧಿಸಿ, ಹತ್ತು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಆರೋಪಿಗಳು ಬೆಂಗಳೂರಿನಲ್ಲಿ ಬೈಕ್‌ಗಳನ್ನು ಕದ್ದು ಚೆನ್ನೈನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಈ ಎರಡು ಪ್ರಕರಣಗಳಲ್ಲಿ ಪೊಲೀಸರು ಒಟ್ಟು 38 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್ ಮಾಡಿಕೊಳ್ಳಿ ಹಾಗೂ ರಿಪೋರ್ಟ್ ಕಳಿಸಿಲೇಟೆಸ್ಟ್ ನ್ಯೂಸ್ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್ ಲೈಕ್ ಮಾಡಿರಿ