ಅತಿವೃಷ್ಟಿ, ವೈಜ್ಞಾನಿಕ ಪರಿಹಾರಕ್ಕೆ ಆಗ್ರಹ
ವಿಕ ಸುದ್ದಿಲೋಕ ಚಿಕ್ಕಮಗಳೂರು
ಜಿಲ್ಲೆಯಲ್ಲಿಅತಿವೃಷ್ಟಿಯಿಂದ ಆಗಿರುವ ಬೆಳೆಹಾನಿ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿ ಶೀಘ್ರ ವೈಜ್ಞಾನಿಕವಾದ ಪರಿಹಾರ ನೀಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್ ಒತ್ತಾಯಿಸಿದರು.
ಪ್ರಸಕ್ತ ವರ್ಷದಲ್ಲಿಮುಂಗಾರು ಮತ್ತು ಹಿಂಗಾರು ಮಳೆಯಿಂದಾಗಿ ಅತಿವೃಷ್ಟಿಯಾಗಿದ್ದು, ರೈತರ ಹಾಗೂ ಜನಸಾಮಾನ್ಯರ ಬದುಕು ಸಂಕಷ್ಟಕ್ಕಿಡಾಗಿದೆ. ಪ್ರಾಣ ಹಾನಿ, ಮನೆಗಳ ಕುಸಿತ, ಜನ, ಜಾನುವಾರುಗಳು ನದಿಯಲ್ಲಿಕೊಚ್ಚಿಹೋಗಿದ್ದು, ಜಮೀನುಗಳಿಗೆ ಮಳೆ ನೀರು ನುಗ್ಗಿ ಬೆಳೆ ನಾಶವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿಬೇಸರ ವ್ಯಕ್ತಪಡಿಸಿದರು.
ಸಾವಿರಾರು ಹೆಕ್ಟೆರ್ ಪ್ರದೇಶದಲ್ಲಿಬೆಳೆಯಲಾಗಿದ್ದ ಮೆಕ್ಕೆಜೋಳ, ಆಲೂಗೆಡ್ಡೆ, ಬೀನ್ಸ್ , ಟೊಮೆಟೊ, ಮೆಣಸಿನ ಗಿಡ, ಬಟಾಣಿ ಮತ್ತಿತರೆ ಬೆಳೆಗಳು ನೆಲಕಚ್ಚಿದ್ದು, ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ಬೆಳೆ ಸಮೀಕ್ಷೆ ಮಾಡಿ ಸಮಗ್ರ ವರದಿಯನ್ನು ಸರಕಾರಕ್ಕೆ ನೀಡಬೇಕು. ಅದೇ ರೀತಿ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಚಿಕ್ಕಮಗಳೂರು ತಾಲೂಕಿನ ಕಸಬಾ, ಅಂಬಳೆ, ಲಕ್ಯಾ ಹೋಬಳಿಯಲ್ಲಿಅನಾವೃಷ್ಟಿಯಾಗಿದ್ದರೆ, ಇನ್ನೊಂದೆಡೆ ಅತಿವೃಷ್ಟಿಯಾಗಿ ರೈತರು ತೊಂದರೆ ಅನುಭವಿಸುವಂತಾಗಿದೆ. ತರೀಕೆರೆ, ಕಡೂರು ತಾಲೂಕುಗಳಲ್ಲಿಈರುಳ್ಳಿ ಬೆಳೆ ಭೂಮಿಯಲ್ಲೇ ಕರಗಿದೆ. ಮಲೆನಾಡಿನಲ್ಲಿಕಾಫಿ, ಅಡಕೆ, ಕಾಳುಮೆಣಸು ಬೆಳೆಗಳು ಶೇ.50ರಷ್ಟು ಉದುರಿ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ ಎಂದರು.
ಮಳೆಯಿಂದ ಹಾನಿಗೊಳಗಾಗಿರುವ ಮನೆಗಳನ್ನು ಪುನರ್ ನಿರ್ಮಾಣ ಮಾಡಬೇಕು, ಬೆಳೆ ಕಳೆದುಕೊಂಡ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ 30 ಸಾವಿರ ರೂ. ಪರಿಹಾರ ನೀಡಬೇಕು. ಪ್ರವಾಹದಿಂದ ಹಾನಿಯಾಗಿರುವ ಜಮೀನನ್ನು ಸರಿಪಡಿಸಲು ಸರಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಅಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ಸರಕಾರ ವೈಜ್ಞಾನಿಕ ಪರಿಹಾರ ನೀಡಿ ರೈತರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸಂಘದ ಮುಖಂಡರಾದ ಎಂ.ಸಿ.ಬಸವರಾಜ್ , ಎಂ.ಬಿ.ಚಂದ್ರಶೇಖರ್ , ದೇವರಾಜು, ಕುಮಾರಸ್ವಾಮಿ, ಯುವರಾಜ್ , ಕೃಷ್ಣೇಗೌಡ, ಪದ್ಮನಾಭ ಹಾಗೂ ಇತರರಿದ್ದರು.
31ರುದ್ರಯ್ಯ-ಪಿ2
ಮಹೇಶ್

