*ಪಿಜಿ ಸೆಂಟರ್ ಬದಲು ಹಾವೇರಿ ವಿವಿ ಕೆರಿಮತ್ತಿಹಳ್ಳಿ ಬೋರ್ಡ್
ವಿವಿ ಬಸ್ ಬೋರ್ಡ್ ಬದಲು
ವಿಕ ಸುದ್ದಿಲೋಕ ಹಾವೇರಿ
ಇಲ್ಲಿಯ ಕೆರಿಮತ್ತಿಹಳ್ಳಿಯಲ್ಲಿರುವ ಹಾವೇರಿ ವಿಶ್ವವಿದ್ಯಾಲಯಕ್ಕೆ ಸಂಚರಿಸುವ ಪಿಜಿ ಸೆಂಟರ್ ಹಾವೇರಿ ಹೆಸರಿನ ಬೋರ್ಡ್ ನ್ನು ಕೆಎಸ್ ಆರ್ ಟಿಸಿ ಹಾವೇರಿ ವಿಭಾಗೀಯ ಘಟಕದ ನಿಯಂತ್ರಣಾಧಿಕಾರಿಗಳು ಹಾವೇರಿ ವಿ.ವಿ ಕೆರಿಮತ್ತಿಹಳ್ಳಿ ಎಂದು ಕೊನೆಗೂ ಬೋರ್ಡ್ ನ್ನು ಬದಲಾಯಿಸುವ ಮೂಲಕ ವಿಕ ವರದಿಗೆ ಸ್ಪಂದಿಸಿದ್ದಾರೆ.
ಹಾವೇರಿ ವಿಶ್ವವಿದ್ಯಾಲಯ ಪ್ರಾರಂಭವಾಗಿ ಎರಡು ವರ್ಷ ಕಳೆದರೂ ಕೆರಿಮತ್ತಿಹಳ್ಳಿಯ ವಿಶ್ವ ವಿದ್ಯಾಲಯಕ್ಕೆ ತೆರಳುವ ಬಸ್ ಗಳ ಬೋರ್ಡ್ ಮಾತ್ರ ಬದಲಾಗದಿರುವುದು ವಿವಿ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ದೂರದ ತಾಲೂಕು ಹಾಗೂ ಹಳ್ಳಿಗಳ ವಿದ್ಯಾರ್ಥಿಗಳು ಪಿಜಿ ಸೆಂಟರ್ ಹೆಸರಿನ ಬಸ್ ಹಾವೇರಿ ವಿವಿಗೆ ಹೋಗದೇ ಬೇರೆ ಎಲ್ಲೋ ಹೋಗಬಹುದು ಎಂಬ ಗೊಂದಲಕ್ಕೆ ಒಳಗಾಗಿ ಯೂನಿವರ್ಸಿಟಿ ಬಸ್ ಕಣ್ಣೇದುರೇ ಹೋದರೂ ಗೊತ್ತಾಗದ ಸ್ಥಿತಿ ನಿರ್ಮಾಣವಾಗಿತ್ತು. ಹಲವಾರು ಅಪರಿಚಿತ ವಿದ್ಯಾರ್ಥಿಗಳು ಬಸ್ ಗಳನ್ನು ತಪ್ಪಿಸಿಕೊಂಡು ಪರದಾಡಿದ ಉದಾಹರಣೆಗಳು ಇವೆ.
ಈ ಹಿನ್ನೆಲೆ ವಿಜಯ ಕರ್ನಾಟಕ ಅ.26ರಂದು ‘ಬದಲಾಗದ ಬಸ್ ಬೋರ್ಡ್ ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟ ಮಾಡಿತ್ತು. ವರದಿಯಿಂದ ಎಚ್ಚೆತ್ತುಕೊಂಡ ಹಾವೇರಿ ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪಿ.ಜಿ ಸೆಂಟರ್ ಹೆಸರಿನ ಬದಲಾಗಿ ಹಾವೇರಿ ವಿವಿ ಕೆರಿಮತ್ತಿಹಳ್ಳಿ ಎಂಬುದಾಗಿ ಹೊಸ ಬೋರ್ಡ್ ನ್ನು ಬರೆಯಿಸಿ ಬಸ್ ಗಳನ್ನು ಕಾರ್ಯಾಚರಣೆಗೊಳಿಸಿದ್ದಾರೆ. ಆದರೂ ಹಾವೇರಿ ವಿವಿ ಎಂದು ಶಾರ್ಟ್ ಕಟ್ ಆಗಿ ಬರೆಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹಲವು ವಿದ್ಯಾರ್ಥಿಗಳು ಹಾವೇರಿ ವಿಶ್ವ ವಿದ್ಯಾಲಯ ಎಂಬುದಾಗಿ ಪೂರ್ಣ ಪ್ರಮಾಣದಲ್ಲಿಬರೆಯಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಪೋಟೋ 31 ಮಂಜು 2
ಹಾವೇರಿ ವಿವಿ ಕೆರಿಮತ್ತಿಹಳ್ಳಿ ಎಂದು ಬರೆಯಿಸಿರುವ ಬೋರ್ಡ್ .

