ವಿಕ ಸುದ್ದಿಲೋಕ ಉಜಿರೆ
ಭಾರತದ 140 ಕೋಟಿ ಜನಸಂಖ್ಯೆಯಲ್ಲಿಶೇ. 60 ರಷ್ಟು ಇರುವ ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು, ತಮ್ಮ ಶಕ್ತಿ-ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಸಮಾಜದ ಸರ್ವತೋಮುಖ ಪ್ರಗತಿಗೆ ವಿನಿಯೋಗಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಹೇಳಿದರು.
ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಪೊಲೀಸ್ ಇಲಾಖೆಯ ಆಶ್ರಯದಲ್ಲಿಬೆಳ್ತಂಗಡಿ ತಾಲೂಕಿನ ನಾನಾ ಸಂಘಟನೆಗಳು ಹಾಗೂ ಕಾಲೇಜುಗಳ ಎನ್ .ಸಿ.ಸಿ. ಕೆಡೆಟ್ ಗಳು ಮತ್ತು ರಾಷ್ಟ್ರೀಯ ಸೇವಾಯೋಜನೆಯ ಸ್ವಯಂ-ಸೇವಕರ ಆಶ್ರಯದಲ್ಲಿಶುಕ್ರವಾರ ಆಯೋಜಿಸಿದ ಏಕತಾ ಓಟ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ವಕೀಲ ಬಿ.ಕೆ. ಧನಂಜಯ ರಾವ್ ಮಾತನಾಡಿ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ದೇಶಪ್ರೇಮ, ತ್ಯಾಗ ಮತ್ತು ಆದರ್ಶಗಳ ಅನುಷ್ಠಾನದೊಂದಿಗೆ ನಾವು ಅಖಂಡ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಬೇಕು. ಜಾತಿ-ಮತ, ಧರ್ಮ, ಭಾಷೆಯ ನೆಪದಲ್ಲಿಭಿನ್ನಾಭಿಪ್ರಾಯದಿಂದ ದೇಶದ ವಿಭಜನೆ ಸಲ್ಲದು ಎಂದು ಹೇಳಿದರು.
ಬೆಳ್ತಂಗಡಿ ಪಿ.ಎಸ್ .ಐ. ಸುಬ್ಬಾಪುರ ಮಠ್ ಪ್ರತಿಜ್ಞಾವಿಧಿ ಬೋಧಿಸಿದರು. ಬದುಕುಕಟ್ಟೋಣ ತಂಡದ ಸಂಚಾಲಕ ಮೋಹನಕುಮಾರ್ ಮತ್ತು ರಾಜೇಶ್ ಪೈ, ಎಸ್ ಡಿಎಂ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಬಿ. ಪ್ರಮೋದ್ ಕುಮಾರ್ , ನಿವೃತ್ತ ಯೋಧ ಎಂ.ವಿ. ಭಟ್ ಮುಂಡಾಜೆ, ಎಸ್ ಡಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ. ಮಹೇಶ್ ಕುಮಾರ್ ಶೆಟ್ಟಿ ಮತ್ತು ಮಾಲಿನಿ ಅಂಚನ್ ಉಪಸ್ಥಿತರಿದ್ದರು.
ಎಸ್ ಡಿಎಂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಶ್ಮಿ ಸ್ವಾಗತಿಸಿದರು. ವೇಣೂರು ಪೊಲೀಸ್ ಠಾಣಾ ಉಪನಿರೀಕ್ಷಕ ಅಕ್ಷಯ್ ವಂದಿಸಿದರು. ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದಿಂದ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದವರೆಗೆ ನಡೆದ ಏಕತಾ ಓಟ ನಡೆಯಿತು.
31ಎಂಜೆ ಏಕತಾ.
ಚಿತ್ರ ವಿವರ-
1.ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿದರು.
2.ದೇಶದ ಐಕ್ಯತೆ ಮತ್ತು ಸಮಗ್ರತೆ ಕಾಪಾಡುವುದಾಗಿ ಎಲ್ಲರೂ ಸಾಮೂಹಿಕವಾಗಿ ದೃಢಸಂಕಲ್ಪ ಮಾಡಿದರು.

