ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಲೋಹಾ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಒಂದೇ ಕುಟುಂಬದ ಆರು ಮಂದಿಯನ್ನು ಕಣಕ್ಕಿಳಿಸಿ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಗಜಾನನ್ ಸೂರ್ಯವಂಶಿ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಿದ್ದು, ಅವರ ಪತ್ನಿ ಗೋದಾವರಿ, ಸಹೋದರ ಸಚಿನ್, ಸೋದರಳಿಯರಾದ ಸುಪ್ರಿಯಾ, ಯುವರಾಜ್ ವಾಗ್ಮಾರೆ ಮತ್ತು ಅವರ ಸೋದರಳಿಯನ ಪತ್ನಿ ರೀನಾ ಅವರು ಸದಸ್ಯರಾಗಿ ಸ್ಪರ್ಧಿಸುತ್ತಿದ್ದಾರೆ. ಈ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್, ಬಿಜೆಪಿ ಕುಟುಂಬ ರಾಜಕಾರಣವನ್ನು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿದೆ.ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ದೇಹಡೆ ಅವರು ಮಾತನಾಡಿ, "ಬಿಜೆಪಿ ಪಕ್ಷವು ಇತರ ಪಕ್ಷಗಳ ಮೇಲೆ ಕುಟುಂಬ ರಾಜಕಾರಣ ಮಾಡುತ್ತಿದೆ ಎಂದು ಪದೇ ಪದೇ ಆರೋಪಿಸುತ್ತದೆ. ಆದರೆ, ಇದೀಗ ಅವರೇ ಈ ಪದ್ಧತಿಯಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ" ಎಂದು ಟೀಕಿಸಿದರು. ಲೋಹಾ ಪುರಸಭೆ ಚುನಾವಣೆಯಲ್ಲಿ ಬಿಜೆಪಿ, ಎನ್ ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹಿರಿಯ ಬಿಜೆಪಿ ನಾಯಕರಾದ ರಾಜ್ಯಸಭಾ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಹಾಗೂ ಸಂಸದ ಅಜೀತ್ ಗೋಪಾಚಾಡೆ ಅವರು ನಾಂದೇಡ್ ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಈ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಪ್ರಾದೇಶಿಕ ಕಾರ್ಯದರ್ಶಿ ಕಿರಣ್ ಪಾಟೀಲ್, "ಇವು ಸ್ಥಳೀಯ ಚುನಾವಣೆಗಳಾಗಿವೆ. ರಾಜ್ಯ ನಾಯಕರ ಹೆಚ್ಚಿನ ಹಸ್ತಕ್ಷೇಪವಿಲ್ಲದೆ ಸ್ಥಳೀಯ ಮಟ್ಟದಲ್ಲಿಯೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ" ಎಂದು ಸ್ಪಷ್ಟಪಡಿಸಿದರು.
ಇತ್ತ, ಬೀಡ್ ಜಿಲ್ಲೆಯ ಪರ್ಲಿ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯ ಪಂಕಜಾ ಮುಂಡೆ ಮತ್ತು ಎನ್ ಸಿಪಿಯ ಧನಂಜಯ ಮುಂಡೆ ಅವರು ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಊಹಾಪೋಹಗಳು ಹಬ್ಬಿವೆ. ಈ ಮೈತ್ರಿ ಅಂತಿಮಗೊಂಡರೆ, ಸುಮಾರು 15 ವರ್ಷಗಳ ನಂತರ ಇವರಿಬ್ಬರು ಒಟ್ಟಾಗಿ ಕೆಲಸ ಮಾಡಿದಂತಾಗುತ್ತದೆ. ಈ ಮೈತ್ರಿ ಏರ್ಪಟ್ಟರೆ, ಎನ್ ಸಿಪಿಗೆ ಸ್ವಲ್ಪ ಹೆಚ್ಚಿನ ಸ್ಥಾನಗಳು ದೊರೆಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಈ ಎಲ್ಲಾ ಬೆಳವಣಿಗೆಗಳು ಮಹಾರಾಷ್ಟ್ರದ ರಾಜಕೀಯದಲ್ಲಿ ಕುತೂಹಲ ಮೂಡಿಸಿವೆ.

