ಈ ನಕಲಿ ಉದ್ಯೋಗ ಪ್ರಕಟಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವೃತ್ತಿಪರ ನೆಟ್‌ವರ್ಕ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. "ಉದ್ಯೋಗಿಗಳು ಬೇಕಾಗಿದ್ದಾರೆ... ಹುದ್ದೆಗಳ ಭರ್ತಿಗೆ ಅಭ್ಯರ್ಥಿಗಳು ‘ಸಿವಿ’ ಕಳುಹಿಸಬೇಕು," ಎಂಬ ಆಕರ್ಷಕ ಸಂದೇಶಗಳು ಎಲ್ಲೆಡೆ ರಾರಾಜಿಸುತ್ತಿವೆ. ಆದರೆ, ವಾಸ್ತವದಲ್ಲಿ ಆ ಹುದ್ದೆಗಳು ಖಾಲಿಯೇ ಇರುವುದಿಲ್ಲ. ಇದು ಕೇವಲ ಕಾಗದದ ಮೇಲೆ ಅಥವಾ ಕಂಪ್ಯೂಟರ್ ಪರದೆಯ ಮೇಲೆ ಮಾತ್ರ ಕಾಣಿಸಿಕೊಳ್ಳುವ ಉದ್ಯೋಗಗಳು.ಈ ಘೋಸ್ಟ್ ಜಾಬ್ ಪೋಸ್ಟಿಂಗ್‌ಗಳ ಹಿಂದಿನ ಉದ್ದೇಶಗಳು ಹಲವಾರಿವೆ. ಕೆಲವು ಕಂಪನಿಗಳು ಭವಿಷ್ಯದಲ್ಲಿ ತಮ್ಮ ಸಂಸ್ಥೆಗೆ ಬೇಕಾಗಬಹುದಾದ ಅರ್ಹ ಅಭ್ಯರ್ಥಿಗಳನ್ನು ಈಗಲೇ ಗುರುತಿಸಿ, ಅವರನ್ನು ಕಾಯ್ದಿಟ್ಟುಕೊಳ್ಳುವ ಲೆಕ್ಕಾಚಾರದಲ್ಲಿ ಇರುತ್ತವೆ. ಸಿಐಇಎಲ್ ಎಚ್‌ಆರ್ ಸವೀರ್‍ಸಸ್‌ನ ಮುಖ್ಯ ಕಾರ್ಯ ನಿರ್ವಾಹಕ ಆದಿತ್ಯ ಮಿಶ್ರಾ ಹೇಳುವಂತೆ, "ಇದು ಪ್ರತಿಭೆಯ ಹೊಸ ಪ್ರವೃತ್ತಿಗಳನ್ನು ಅರ್ಥಮಾಡಿಕೊಳ್ಳಲು, ಹಾಲಿ ಇರುವ ಉದ್ಯೋಗಿಗಳು ಮತ್ತು ಉದ್ಯೋಗ ನಿರೀಕ್ಷೆಯಲ್ಲಿರುವ ಉದ್ಯೋಗಿಗಳ ಸಾಮರ್ಥ್ಯವನ್ನು ಹೋಲಿಕೆ ಮಾಡಲು, ನುರಿತ ಪ್ರತಿಭೆಗಳ ಲಭ್ಯತೆಯ ಪ್ರಮಾಣವನ್ನು ಅಳೆಯಲು, ಭವಿಷ್ಯದಲ್ಲಿ ನೇಮಕಾತಿ ಬಜೆಟ್ ಸಜ್ಜುಗೊಳಿಸಲು ಘೋಸ್ಟ್ ಜಾಬ್ ಪ್ರವೃತ್ತಿ ಹೆಚ್ಚುತ್ತಿದೆ."
ಇನ್ನು, ನವೋದ್ಯಮಗಳು ತಮ್ಮ ಸಂಸ್ಥೆಯ ಖ್ಯಾತಿ ಹೆಚ್ಚಿಸಿಕೊಳ್ಳಲು ಈ ತಂತ್ರವನ್ನು ಬಳಸುತ್ತವೆ. ಇದರಿಂದ ಉದ್ಯೋಗದಾತರ ಬ್ರ್ಯಾಂಡ್ ಜನಪ್ರಿಯವಾಗುತ್ತದೆ ಮತ್ತು ನಿರುದ್ಯೋಗಿ ವಲಯದಲ್ಲಿ ಕಂಪನಿಯ ಹೆಸರು ಪದೇ ಪದೇ ಕೇಳಿಬರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಣೆಗಳು, ಹಂಚಿಕೆಗಳು, ಮತ್ತು ಲೈಕ್‌ಗಳು ಹೆಚ್ಚಾಗುತ್ತವೆ. ಹೆಸರು ಬಹಿರಂಗಪಡಿಸಲು ಇಚ್ಛಿಸದ ಒಂದು ಮಧ್ಯಮ ಗಾತ್ರದ ಕಂಪನಿಯ ಪ್ರಮುಖರು ಹೇಳುವಂತೆ, "ಹುದ್ದೆಗಳಿಗೆ ಅರ್ಜಿ ಆಹ್ವಾನಿಸುವ ಪೋಸ್ಟ್‌ಗಳನ್ನು ಹಾಕುವುದು ನಮ್ಮ ಇಮೇಜ್ ಬಿಲ್ಡಿಂಗ್‌ಗೆ ನೆರವಾಗುತ್ತದೆ. ನಾವು ತುಂಬ ವೇಗವಾಗಿ ಬೆಳೆಯುತ್ತಿದ್ದೇವೆ ಎಂದು ಉದ್ಯಮ ವಲಯ ಹೆಚ್ಚು ನಂಬುತ್ತದೆ." ಅವರು ಮುಂದುವರಿದು, "ನಮ್ಮಲ್ಲಿ ಹುದ್ದೆಗಳು ಖಾಲಿ ಬಿದ್ದಾಗ ಅವುಗಳನ್ನು ಆಂತರಿಕವಾಗಿ ತುಂಬಿಕೊಳ್ಳುತ್ತೇವೆ. ಇದು ಯಾರಿಗೂ ಗೊತ್ತಾಗುವುದಿಲ್ಲ," ಎಂದು ನಿಜವನ್ನೂ ಅನಾವರಣಗೊಳಿಸಿದರು.
ಕೆಲವು ಸಂದರ್ಭಗಳಲ್ಲಿ, ಈ ಘೋಸ್ಟ್ ಜಾಬ್ ಪೋಸ್ಟ್‌ಗಳು ವೇತನ ಹೆಚ್ಚಳ ಕ್ಕೂ ಒಂದು ತರ್ಕ ಒದಗಿಸುತ್ತವೆ. ಬಹುರಾಷ್ಟ್ರೀಯ ಆಮದು-ರಫ್ತು ಸಂಸ್ಥೆಯ ಹಿರಿಯ ಕಾರ್ಯನಿರ್ವಾಹಕರೊಬ್ಬರು ಹೇಳುವಂತೆ, "ಉದ್ಯೋಗಿಗಳ ವಾರ್ಷಿಕ ಮೌಲ್ಯಮಾಪನ (ಅಪ್ರೈಸಲ್) ಮಾಡುವಾಗ ಅವರಿಗೆ ಉದ್ಯಮದ ಮಾನದಂಡದ ಅನುಸಾರ ವೇತನವನ್ನು ಹೆಚ್ಚಳ ಮಾಡುವುದಿಲ್ಲ. ಇಂಥ ಸಂದರ್ಭದಲ್ಲಿ ಘೋಸ್ಟ್ ಜಾಬ್‌ಗೆ ಅರ್ಜಿ ಆಹ್ವಾನಿಸಿ ಅರ್ಜಿದಾರರ ಪ್ರತಿಭೆಯನ್ನು ಮೌಲ್ಯಮಾಪನ ಮಾಡುತ್ತೇವೆ. ಇವರೊಟ್ಟಿಗೆ ನಮ್ಮಲ್ಲಿರುವ ಉದ್ಯೋಗಿಯ ಸಾಮರ್ಥ್ಯವನ್ನು ತರ್ಕಬದ್ಧವಾಗಿ ಲೆಕ್ಕಾಚಾರ ಮಾಡಿ ವೇತನ ಹೆಚ್ಚಳ ಮಾಡಿದ್ದೂ ಇದೆ. ಇದು ಈ ಘೋಸ್ಟ್ ಪೋಸ್ಟ್‌ಗಳ ಪ್ರವೃತ್ತಿಗೆ ಇರುವ ಸಕಾರಾತ್ಮಕ ಆಯಾಮ."
ವೃತ್ತಿಪರ ನೆಟ್‌ವರ್ಕ್ ಸಂಸ್ಥೆಗಳಾದ ಲಿಂಕ್ಡ್‌ಇನ್‌ನಂತಹವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿವೆ. ಲಿಂಕ್ಡ್‌ಇನ್ ಹೇಳುವಂತೆ, "ಕಂಪನಿಗಳು ಖಾಲಿ ಹುದ್ದೆಗಳ ಭರ್ತಿಗೆ ಪ್ರಕಟಣೆ ಹೊರಡಿಸುತ್ತವೆ. ನಾವು ಸುಧಾರಿತ ತಂತ್ರಜ್ಞಾನ ಮತ್ತು ತಜ್ಞರ ತಂಡದ ನೆರವಿನಿಂದ ಶೇ.99ಕ್ಕೂ ಹೆಚ್ಚು ಘೋಸ್ಟ್ ಜಾಬ್‌ಗಳ ನೇಮಕಾತಿ ಪ್ರಕಟಣೆಗಳನ್ನು ತೆಗೆದು ಹಾಕುತ್ತೇವೆ."
ಈ ಘೋಸ್ಟ್ ಜಾಬ್ ಪೋಸ್ಟ್‌ಗಳ ಹಾವಳಿ ನಿರ್ಮಾಣ ವಲಯ, ತಂತ್ರಜ್ಞಾನ, ಕಾನೂನು ಸೇವೆಗಳು, ಆಹಾರ ಮತ್ತು ಆತಿಥ್ಯ, ತಯಾರಿಕಾ ವಲಯ, ಆರೋಗ್ಯ, ಮತ್ತು ಚಿಲ್ಲರೆ ವ್ಯಾಪಾರ ಮುಂತಾದ ವಲಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.

