ವಿಕ ಸುದ್ದಿಲೋಕ ಅಫಜಲಪುರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100ನೇ ವರ್ಷಾಚರಣೆ ಕಾರ್ಯಕ್ರಮಗಳನ್ನು ಸರ್ಕಾರಿ ಶಾಲೆ, ಕಾಲೇಜು, ಮುಜರಾಯಿ ಇಲಾಖೆ ದೇವಸ್ಥಾನಗಳು,ಸರ್ಕಾರಿ ಜಾಗಗಳಲ್ಲಿಮಾಡಲು ಅವಕಾಶ ಕೊಡಬಾರದು ಎಂದು ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಕ್ಕೆ ಪತ್ರ ಬರೆದ ಹಿನ್ನೆಲೆ ಬಿಜೆಪಿ,ಸಂಘ ಪರಿವಾರದ ಜನರು ಸಚಿವರ ಬಗ್ಗೆ ವಯಕ್ತಿಕ ಟೀಕೆಗೆ ಇಳಿದಿದ್ದಾರೆ. ಇದಕ್ಕೆ ಹೆದರುವ ಗಂಡು ಪ್ರಿಯಾಂಕ್ ಖರ್ಗೆಯವರು ಇಲ್ಲ, ಇಂಥವರನ್ನು ಬಹಳ ಜನರನ್ನು ಅವರು ನೋಡಿದ್ದಾರೆ.ಸಚಿವ ಪ್ರಿಯಾಂಕ್ ಖರ್ಗೆ ಬೆನ್ನಿಗೆ ನಾವು ಇದ್ದೇವೆ ಎಂದು ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ್ ಹೇಳಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ನಿರಂತರವಾಗಿ ದೂರವಾಣಿ ಕರೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ವಿರೋಧಿ ನಡೆಯಾಗಿದೆ. ಸೈದ್ಧಾಂತಿಕವಾಗಿ ಎದುರಿಸಲಾಗದ ರಣ ಹೇಡಿಗಳು ವಯಕ್ತಿಕ ನಿಂದನೆಗೆ ಇಳಿದಿದ್ದು ಅತ್ಯಂತ ಹೇಯ ಕೃತ್ಯವಾಗಿದೆ. ಬಿಜೆಪಿ ಕೃಪಾ ಪೋಷಿತ ಉಡಾಳರ ಗುಂಪು ನಿಂದಿಸುವುದು, ಬೆದರಿಕೆ ಒಡ್ಡುವುದರಿಂದ ಸಚಿವ ಪ್ರಿಯಾಂಕ್ ಖರ್ಗೆ ಧ್ವನಿ ಅಡಗಿಸಬೇಕೆಂದುಕೊಳ್ಳುವುದು ಅವರ ಮೂರ್ಖತನದ ಪರಮಾವಧಿಯಾಗಿದೆ ಎಂದರು. ಪ್ರಿಯಾಂಕ್ ಖರ್ಗೆ ಸರ್ವ ಜನಾಂಗದ ನಾಯಕರಾಗಿದ್ದಾರೆ.ಅವರು ಹಿಂದು ಧರ್ಮ ವಿರೋಧಿ ಅಲ್ಲ.ಒಂದು ರಾಜಕೀಯ ಸಿದ್ದಾಂತಕ್ಕೆ ಜನ್ಮ ನೀಡಿದ ಸಂಘದ ವಿರೋಧಿ ಆಗಿದ್ದಾರೆ.ಅದನ್ನು ಧರ್ಮಕ್ಕೆ ಹೋಲಿಕೆ ಮಾಡೋದೆ ಮೂರ್ಖತನ, ಸಚಿವ ಖರ್ಗೆ ಒಂಟಿಯಲ್ಲಅವರೊಂದಿಗೆ ನಾಡಿನ ದೇಶದ ಅಸಂಖ್ಯಾತ ದೇಶಭಕ್ತರು ಜೊತೆಗಿದ್ದೇವೆ.ದ್ವೇಷ ಕಾರುವ ಕೃಪಾ ಪೋಷಿತ ಕಂಪನಿಯಿಂದ ಎಲ್ಲಾ ಸಮುದಾಯದ ಜನ ಅಂತರ ಕಾಯ್ದುಕೊಂಡು ಸಮಾಜದ ಸ್ವಾಸ್ಥ್ಯ ಹಾಳಾಗದಂತೆ ನೋಡಿಕೊಳ್ಳಬೇಕಿದೆ. ಮೊದಲೆಲ್ಲಾ ಬಿಜೆಪಿ ಧೋರಣೆ ಮತ್ತದರ ಮಾತೃ ಸಂಘದ ಧೋರಣೆಗಳು ಕೇವಲ ಸೈದ್ಧಾಂತಿಕವಾಗಿ ಬಹುಜನರ ವಿರೋಧಿ ಆಗಿದ್ದವು.ಆದರೆ ತೀರಾ ಇತ್ತೀಚಿಗೆ ಪ್ರಜಾಪ್ರಭುತ್ವ ವಿರೋಧಿಯೂ ಆಗುತ್ತಿವೆ,ಅವರ ಮೂಲ ಉದ್ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವುದಾಗಿದೆ.ಧರ್ಮದ ಹೆಸರಲ್ಲಿಜನರ ದಾರಿ ತಪ್ಪಿಸುವುದಾಗಿದೆ.ಅವರ ಷಡ್ಯಂತ್ರಕ್ಕೆ ಯುವ ಸಮೂಹ ಹಾಳಾಗಬಾರದು.ದೇಶದಲ್ಲಿಶಾಂತಿ,ಸಾಮರಸ್ಯ ಉಳಿಸಲು,ಸಂವಿಧಾನದ ಆಶಯಗಳನ್ನು ಉಳಿಸಲು ಎದುರಾಗಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಧ್ವನಿಗೆ ಧ್ವನಿಗೂಡಿಸೋಣ ಎಂದರು.

