ವಿಕ ಸುದ್ದಿಲೋಕ, ಮೂಡುಬಿದಿರೆ
ಇಲ್ಲಿನ ಜೈನಮಠದಲ್ಲಿಯಕ್ಷಗಾನ ಅರ್ಥಧಾರಿ ಎಂ. ಶ್ರೀಧರ ಪಾಂಡಿ ಸಾಣೂರು ಅವರ 14ನೇ ವರ್ಷದ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನ. 2ರಂದು ಸಂಖಜೆ 5.30 ರಿಂದ ನಡೆಯಲಿದೆ ಎಂದು ಜೈನ ಮಠದ ಡಾ.ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿಈ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಸಂಯೋಜಕ ಮಹಾವೀರ ಪಾಂಡಿ ಮಾತನಾಡಿ, ಶ್ರೀಧರ ಪಾಂಡಿಯವರ ಸಂಸ್ಮರಣ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಭಾಗವತ ಕಣಿಯೂರು ಸೂರ್ಯನಾರಾಯಣ ಭಟ್ ಅವರಿಗೆ ನೀಡಿ ಗೌರವಿಸಲಾಗುವುದು. ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಕೆ. ಎಂ. ರಾಘವ ನಂಬಿಯಾರ್ , ಶ್ರೀ ಆದಿನಾಥ ಸ್ವಾಮಿ ಬಸದಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರೊ.ಕೆ. ಗುಣಪಾಲ ಕಡಂಬ, ನಿವೃತ್ತ ಪ್ರಿನ್ಸಿಪಾಲ್ ಡಾ. ಉದಯ ಕುಮಾರ್ ಇರ್ವತ್ತೂರು ಉಪಸ್ಥಿತರಿರುವರು. ವಾಗ್ಮಿ ಮುನಿರಾಜ ರೆಂಜಾಳ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದರು.
ಪ್ರಪ್ರಥಮ ದೊಂದಿ ಬೆಳಕಿನ ಯಕ್ಷಗಾನ ಪ್ರದರ್ಶನ ಸಂಸ್ಮರಣಾ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಎಂ. ಶ್ರೀಧರ ಪಾಂಡಿ ಸಾಣೂರು ಅವರು ರಚಿಸಿದ ಪ್ರಸಂಗವಾದ ’ಜಿನಕಥೆಯ ದೊಂದಿ ಬೆಳಕಿನ ಯಕ್ಷಗಾನ ಶ್ರೀ ಪಾರ್ಶ್ವನಾಥ ಚರಿತೆ’ಯನ್ನು ಪ್ರಪ್ರಥಮ ಬಾರಿಗೆ ಪ್ರದರ್ಶಿಸಲಾಗುವುದು. ಅಜಿತ್ ಜೈನ ನಾರಾವಿ ಅವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ.
ಬಸದಿಗಳ ಮೊಕ್ತೇಸರ ಪಟ್ಣಶೆಟ್ಟಿ ಸುಧೇಶ್ ಕುಮಾರ್ , ಶ್ರೀಧರ್ ಪಾಂಡಿ ಅವರ ಪುತ್ರ ಶ್ರೀಕಾಂತ್ ಪಾಂಡಿ, ಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್ ಉಪಸ್ಥಿತರಿದ್ದರು.

