ಕ್ರಿ.ಪೂ. 273-232ರ ಅವಧಿಯಲ್ಲಿ ಮೌರ್ಯ ಸಾಮ್ರಾಜ್ಯವನ್ನು ಆಳಿದ ಸಾಮ್ರಾಟ ಅಶೋಕನನ್ನು 'ಕನ್ನಡ ಲಿಪಿಯ ಪಿತಾಮಹ' ಎಂದು ಕರೆಯಲಾಗುತ್ತದೆ. ಭಾರತದಲ್ಲೇ ಮೊಟ್ಟಮೊದಲು ಶಾಸನಗಳನ್ನು ಹೊರಡಿಸಿದ ಕೀರ್ತಿ ಅಶೋಕನಿಗೆ ಸಲ್ಲುತ್ತದೆ. ಈತನನ್ನು 'ಶಾಸನಗಳ ಪಿತಾಮಹ' ಎಂದೂ ಕರೆಯುತ್ತಾರೆ. ಕಲಬುರಗಿ ಜಿಲ್ಲೆಯ ಸನ್ನತಿ, ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಸೇರಿದಂತೆ 9 ಕಡೆಗಳಲ್ಲಿ ಅಶೋಕನ 17 ಶಾಸನಗಳು ಸಿಕ್ಕಿವೆ. ಇವೆಲ್ಲವೂ ಬ್ರಾಹ್ಮಿ ಲಿಪಿ ಮತ್ತು ಪ್ರಾಕೃತ ಭಾಷೆಯಲ್ಲಿವೆ. ಅಶೋಕನ ಶಾಸನಗಳಿಂದಾಗಿ, ಚಾರಿತ್ರಿಕ ಯುಗದ ಆರಂಭದಲ್ಲಿಯೇ ಕನ್ನಡಕ್ಕೆ ಲಿಪಿ-ಭಾಷಾ ಮಾಧ್ಯಮಗಳು ದೊರೆತವು. ಇದರಿಂದ ತಮಿಳಿಗರಿಗಿಂತ ಸುಮಾರು 3 ಶತಮಾನಗಳ ಮೊದಲೇ, ಅಂದರೆ ಕ್ರಿ.ಶ. 5ನೇ ಶತಮಾನದ ಹೊತ್ತಿಗೆ ಕನ್ನಡ ಲಿಪಿ ಮತ್ತು ಭಾಷೆ ಪರಿಪೂರ್ಣತೆಯನ್ನು ಪಡೆದುಕೊಂಡಿತು. ಅಶೋಕನ ಬ್ರಾಹ್ಮಿ ಲಿಪಿಯಿಂದ ಕನ್ನಡ ಲಿಪಿ ಸ್ವತಂತ್ರವಾಗಿ ಬೆಳೆಯತೊಡಗಿತು. ಇತಿಹಾಸಕಾರರಾದ ಷ. ಶೆಟ್ಟರ್ ಅವರು ಅಶೋಕನನ್ನು 'ಕನ್ನಡ ಲಿಪಿಯ ಪಿತಾಮಹ' ಎಂದು ಬಣ್ಣಿಸಿದ್ದಾರೆ. ಇದರರ್ಥ, ತಮಿಳರಿಗಿಂತ ಮೊದಲೇ ಕನ್ನಡಿಗರು ಅಕ್ಷರ ಜ್ಞಾನ ಹೊಂದಿದ್ದರು. ಈ ವಿಚಾರದಲ್ಲಿ ಕನ್ನಡಿಗರು ಮೌರ್ಯ ಸಾಮ್ರಾಟ ಅಶೋಕನಿಗೆ ನಿಷ್ಠರಾಗಿದ್ದರು ಎಂದು ಷ. ಶೆಟ್ಟರ್ ಅಭಿಪ್ರಾಯಪಡುತ್ತಾರೆ.ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ನಿಲ್ಲುವವರು ಮಯೂರವರ್ಮ. ಕ್ರಿ.ಶ. 345-365ರ ಅವಧಿಯಲ್ಲಿ ಕದಂಬ ಸಾಮ್ರಾಜ್ಯವನ್ನು ಸ್ಥಾಪಿಸಿದ ಇವನು, ಪಲ್ಲವರ ಅಧೀನದಲ್ಲಿದ್ದ ಕನ್ನಡ ಪ್ರದೇಶವನ್ನು ಸ್ವತಂತ್ರಗೊಳಿಸಿದನು. ಮಯೂರವರ್ಮ ಮೂಲತಃ ಮಾನವ್ಯ ಗೋತ್ರದ ಬ್ರಾಹ್ಮಣ ಕುಟುಂಬಕ್ಕೆ ಸೇರಿದವನು. ತಂದೆ ಬಂಧುಶೇಣ, ಅಜ್ಜ ವೀರಶರ್ಮ. ಇವರ ಮೂಲ ಸ್ಥಳ ಶಿವಮೊಗ್ಗ ಜಿಲ್ಲೆಯ ತಾಳಗುಂದ. ಮಯೂರವರ್ಮ ವೇದಾಂಗಗಳನ್ನೆಲ್ಲ ಕಲಿತು, ಉನ್ನತ ಶಿಕ್ಷಣಕ್ಕಾಗಿ ಅಜ್ಜ ವೀರಶರ್ಮರೊಂದಿಗೆ ಪಲ್ಲವರ ರಾಜಧಾನಿ ಕಂಚಿಗೆ ಹೋದನು. ಅಲ್ಲಿ ಪಲ್ಲವರ ಅಶ್ವದಳದಿಂದ ಅವಮಾನಿತನಾದನು. ಇದರಿಂದ ಸಿಟ್ಟಿಗೆದ್ದ ಮಯೂರವರ್ಮ, ಬ್ರಾಹ್ಮಣನಾಗಿದ್ದರೂ ಖಡ್ಗ ಹಿಡಿದು ಕ್ಷತ್ರಿಯನಾಗಿ ಬದಲಾದನು. ಶ್ರೀಪರ್ವತಕ್ಕೆ ತೆರಳಿ ಸೇನೆ ಸಂಘಟಿಸಿ, ಪಲ್ಲವರ ಅಂತರಪಾಲರ ಮೇಲೆ ದಾಳಿ ಮಾಡಿದನು. ಬಾಣ ಮೊದಲಾದ ಅರಸರನ್ನು ಸೋಲಿಸಿದನು. ಕೊನೆಗೆ, ಪಲ್ಲವರು ಮಯೂರವರ್ಮನನ್ನು ಸೋಲಿಸಲಾಗದೆ, ಪಶ್ಚಿಮ ಸಮುದ್ರದಿಂದ ಪ್ರೇಹಾರ (ಮಲಪ್ರಭಾ) ನದಿಯವರೆಗಿನ ಪ್ರದೇಶವನ್ನು ಅವನಿಗೇ ಬಿಟ್ಟುಕೊಟ್ಟರು. ಹೀಗೆ ಪಲ್ಲವರನ್ನು ಸೋಲಿಸಿ, ಕನ್ನಡ ಪ್ರದೇಶದಿಂದ ಹೊರಗಟ್ಟಿದ ಮಯೂರವರ್ಮ ಕನ್ನಡಿಗರ ಸ್ವಾಭಿಮಾನದ ಪ್ರತೀಕವಾದನು. ಇವನು ಸ್ಥಾಪಿಸಿದ 'ಕದಂಬ' ಮನೆತನ ಕನ್ನಡದ ಮೊದಲ ರಾಜಮನೆತನ. ಕನ್ನಡದ ಮೊದಲ ಶಾಸನಗಳಾದ ಹಲ್ಮಿಡಿ ಮತ್ತು ತಾಳಗುಂದ ಸಿಂಹಕಟಾಂಜನ ಶಾಸನಗಳು ಇದೇ ರಾಜಮನೆತನದ ಕಾಲಕ್ಕೆ ಸೇರಿವೆ.
ಕರ್ನಾಟಕದ ಪ್ರಥಮ ಸಾಮ್ರಾಟನಾದ ಇಮ್ಮಡಿ ಪುಲಿಕೇಶಿ, ಕ್ರಿ.ಶ. 609-642ರ ಅವಧಿಯಲ್ಲಿ ಬಾದಾಮಿ ಚಾಲುಕ್ಯರ ಆಳ್ವಿಕೆ ನಡೆಸಿದನು. ಇವನ ಸಾಧನೆ ಅಪೂರ್ವವಾದುದು. ಸಿಂಹಾಸನ ವಂಚಿಸಿದ ಚಿಕ್ಕಪ್ಪ ಮಂಗಳೇಶನನ್ನು ಕೊಂದು ಅಧಿಕಾರಕ್ಕೆ ಬಂದನು. ದಕ್ಷಿಣದಲ್ಲಿ ಗಂಗ, ಕದಂಬರನ್ನು ಸೋಲಿಸಿದನು. ಇವನ ದಾಳಿಗೆ ಹೆದರಿದ ಪಲ್ಲವ ದೊರೆ ಕಂಚಿಯ ಕೋಟೆಯಲ್ಲಿ ತಲೆಮರೆಸಿಕೊಂಡನು. ಉತ್ತರದಲ್ಲಿ ಲಾಟ್, ಮಾಳ್ವ, ಗೂರ್ಜರರನ್ನು ಸೋಲಿಸಿ, ಗೂರ್ಜರ ಪ್ರದೇಶಕ್ಕೆ ತನ್ನ ಸೋದರ ಜಯಸಿಂಹನನ್ನು ರಾಜ್ಯಪಾಲನನ್ನಾಗಿ ನೇಮಿಸಿದನು. ಪೂರ್ವದಲ್ಲಿ ವೆಂಗಿಯನ್ನು ಗೆದ್ದು, ಅಲ್ಲಿಗೆ ಸೋದರ ಕುಬ್ಜ ವಿಷ್ಣುವರ್ಧನನ್ನು ನೇಮಿಸಿದನು. ಮುಂದೆ, ವಿಷ್ಣುವರ್ಧನನು 'ವೆಂಗಿ ಚಾಲುಕ್ಯ' ಎಂಬ ಮನೆತನದ ಸ್ಥಾಪಕನಾದನು. ಪುಲಿಕೇಶಿಗೆ ಅಪಾರ ಕೀರ್ತಿ ತಂದ ಯುದ್ಧವೆಂದರೆ ಕ್ರಿ.ಶ. 618-19ರಲ್ಲಿ ನರ್ಮದಾ ನದಿಯ ಬಳಿ ಕನೂಜಿನ 'ಉತ್ತರ ಪಥೇಶ್ವರ' ಹರ್ಷವರ್ಧನನ ವಿರುದ್ಧ ನಡೆದ ಯುದ್ಧ. 'ಈ ರಣಭೀಕರ ಯುದ್ಧದಲ್ಲಿ ತನ್ನ ಸೇನೆಯ ಗಜದಳಗಳು ಉರುಳಿ ಬೀಳುವುದನ್ನು ಕಂಡು ಹರ್ಷನು ಹರ್ಷ ಕಳೆದುಕೊಂಡ' ಎಂದು ಐಹೊಳೆ ಶಾಸನ ತಿಳಿಸುತ್ತದೆ. ಹೀಗೆ ಅಖಂಡ ದಕ್ಷಿಣ ಭಾರತವನ್ನು ಆಳ್ವಿಕೆಗೆ ಒಳಪಡಿಸಿದ ಮೊದಲ ಕನ್ನಡ ದೊರೆ ಎಂಬ ಕೀರ್ತಿ ಇಮ್ಮಡಿ ಪುಲಿಕೇಶಿಗೆ ಸಲ್ಲುತ್ತದೆ. ಅವನ ಸೇನೆಗೆ 'ಕರ್ನಾಟ ಬಲಂ' ಎಂಬ ಹೆಸರಿತ್ತು. 'ಕರ್ನಾಟ ಬಲಂ, ಅಜೇಯಂ' ಎಂಬುದು ಅಂದಿನ ನಾಣ್ಣುಡಿಯಾಗಿತ್ತು. ಪುಲಿಕೇಶಿಯ ಕೀರ್ತಿ ಪರ್ಷಿಯಾ ದೇಶದವರೆಗೂ ಹಬ್ಬಿತ್ತು. ಪರ್ಷಿಯಾದ ದೊರೆ 2ನೇ ಖುಸ್ರುವಿನ ರಾಯಭಾರಿ ಪುಲಿಕೇಶಿಯ ಆಸ್ಥಾನಕ್ಕೆ ಬಂದಿದ್ದ ಚಿತ್ರವನ್ನು ಅಜಂತಾ ಗುಹೆಯಲ್ಲಿ ಕಾಣಬಹುದು.
ಕ್ರಿ.ಶ. 8-9ನೇ ಶತಮಾನಗಳಲ್ಲಿಯೇ ಕನ್ನಡದ ಕೀರ್ತಿಯನ್ನು ಉತ್ತರ ಭಾರತದಲ್ಲಿ ಬೆಳಗಿದ ಹಿರಿಮೆ ರಾಷ್ಟ್ರಕೂಟ ದೊರೆಗಳಾದ ಧೃವ (ಕ್ರಿ.ಶ. 780-793), ಮುಮ್ಮಡಿ ಗೋವಿಂದ (ಕ್ರಿ.ಶ. 793-814), ಮತ್ತು ಅಮೋಘವರ್ಷ ನೃಪತುಂಗ (ಕ್ರಿ.ಶ. 814-878) ಅವರಿಗೆ ಸಲ್ಲುತ್ತದೆ. ಇವರು ಭಾರತದ ಅಧಿರಾಜತ್ವವನ್ನು ಕರ್ನಾಟಕದ ಮುಡಿಗೇರಿಸಿದರು. ರಾಷ್ಟ್ರಕೂಟರ ಧೃವನು ತನ್ನ ಮಕ್ಕಳಾದ ಮುಮ್ಮಡಿ ಗೋವಿಂದ ಮತ್ತು ಇಂದ್ರರೊಂದಿಗೆ ಕನೋಜಿನ ಮೇಲೆ ದಂಡೆತ್ತಿ ಹೋದನು. ಹರ್ಷವರ್ಧನನ ಕಾಲದಿಂದಲೂ ಕನೋಜ್ ಭಾರತದ ಅಧಿರಾಜತ್ವದ ಕೇಂದ್ರವಾಗಿತ್ತು. ಕನೋಜನ್ನು ಗೆಲ್ಲಲು ಮುಂದಾಗಿದ್ದ ಗೂರ್ಜರ-ಪ್ರತಿಹಾರ ಮತ್ತು ಪಾಲ ಮನೆತನದ ರಾಜರನ್ನು ಸೋಲಿಸಿ, ಧೃವನು ಮೂರು ಬೆಳ್ಗೊಡೆ (ರಾಜರ ಗೌರವದ ಸಂಕೇತವಾದ ಬಿಳಿಯ ಕೊಡೆ) ಗೌರವಕ್ಕೆ ಪಾತ್ರನಾದನು. ಆದರೂ, ಧೃವನು ಕನೋಜಿನವರೆಗೆ ಹೋಗದೆ ಹಿಂದಿರುಗಿದನು. ಧೃವನ ನಂತರ ಅಧಿಕಾರಕ್ಕೆ ಬಂದ ಮುಮ್ಮಡಿ ಗೋವಿಂದನು ಅವನ ಕನಸನ್ನು ನನಸು ಮಾಡಿದನು. ಕನೋಜನ್ನು ಗೆಲ್ಲಲು ಹೊರಟ ಗೂರ್ಜರ-ಪ್ರತಿಹಾರ ಹಾಗೂ ಪಾಲ ದೊರೆಗಳನ್ನು ಸೋಲಿಸಿದನು. ಇವನ ಪರಾಕ್ರಮ ಕಂಡು ಕನೋಜಿನ ರಾಜ ಚಕ್ರಾಯುಧನೇ ಬಂದು ಶರಣಾದನು. ಈ ದಂಡಯಾತ್ರೆ ಕುರಿತು ಶಾಸನಗಳು ಗೋವಿಂದನ ಕುದುರೆಗಳು ಹಿಮಕರಗಿದ ನೀರನ್ನು ಕುಡಿದವು, ಗಜಗಳು ಗಂಗಾಜಲ ಪಾನ ಮಾಡಿದವು ಎಂದು ವರ್ಣಿಸಿವೆ. ಗೋವಿಂದನ ಮಗ ಅಮೋಘವರ್ಷ ನೃಪತುಂಗನು ಶಾಂತಿಪ್ರಿಯ, ಸಾಹಿತ್ಯಪ್ರೇಮಿ, ಮತ್ತು ಧರ್ಮಬೀರುವಾಗಿದ್ದನು. ಇವನ ಆಸ್ಥಾನ ಕವಿ ಶ್ರೀವಿಜಯ ರಚಿಸಿದ 'ಕವಿರಾಜಮಾರ್ಗ' ಕನ್ನಡದ ಮೊಟ್ಟಮೊದಲ ಉಪಲಬ್ಧ ಗ್ರಂಥವಾಗಿದೆ. ಅಮೋಘವರ್ಷನ ಸಾಮ್ರಾಜ್ಯಕ್ಕೆ ಭೇಟಿ ನೀಡಿದ್ದ ಅರಬ್ ಪ್ರವಾಸಿ ಸುಲೈಮಾನ್, 'ರಾಷ್ಟ್ರಕೂಟ ಸಾಮ್ರಾಜ್ಯವು ಸಮಕಾಲೀನ ಜಗತ್ತಿನ ನಾಲ್ಕು ವಿಶಾಲ ಸಾಮ್ರಾಜ್ಯಗಳಲ್ಲಿ ಒಂದಾಗಿತ್ತು' ಎಂದು ಹೇಳಿದ್ದಾನೆ. ಉಳಿದವು ರೋಮನ್, ಅರಬ್ ಮತ್ತು ಚೀನಾ ಸಾಮ್ರಾಜ್ಯಗಳಾಗಿದ್ದವು. ಅಂಥ ವಿಶಾಲ ಸಾಮ್ರಾಜ್ಯವನ್ನು ಕಟ್ಟಿ, ಭಾರತದ ಅಧಿರಾಜತ್ವವನ್ನು ಕರ್ನಾಟಕಕ್ಕೆ ತಂದ ಕೀರ್ತಿ ರಾಷ್ಟ್ರಕೂಟ ದೊರೆಗಳಿಗೆ ಸಲ್ಲಬೇಕು.
ಕ್ರಿ.ಶ. 1108-1152ರ ಅವಧಿಯಲ್ಲಿ ಹೊಯ್ಸಳ ಮನೆತನದ ವಿಷ್ಣುವರ್ಧನನು ಕರುನಾಡಿನ ಕಲೆ ಮತ್ತು ವಾಸ್ತುಶಿಲ್ಪಕ್ಕೆ ವೈಭವ ತಂದನು. ಗಂಗರ ಗಂಗವಾಡಿ ರಾಜ್ಯವನ್ನು ಗೆದ್ದುಕೊಂಡಿದ್ದ ಚೋಳರನ್ನು ಸೋಲಿಸಿ, ಅವರಿಂದ ಗಂಗವಾಡಿಯನ್ನು ಬಿಡಿಸಿಕೊಳ್ಳುವಲ್ಲಿ ವಿಷ್ಣುವರ್ಧನ ಯಶಸ್ವಿಯಾದನು. ಅದರ ನೆನಪಿನಾರ್ಥವಾಗಿ ಲೋಕಪ್ರಸಿದ್ಧ ದೇವಾಲಯಗಳಾದ ತಲಕಾಡಿನಲ್ಲಿ ಕೀರ್ತಿನಾರಾಯಣ, ಬೇಲೂರಿನ ಚನ್ನಕೇಶವ ಹಾಗೂ ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯಗಳನ್ನು ನಿರ್ಮಿಸಿದನು. ಈ ದೇವಾಲಯಗಳು ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಮುಕುಟಪ್ರಾಯವಾಗಿವೆ. ಬೇಲೂರು, ಹಳೆಬೀಡಿನ ದೇವಾಲಯಗಳ ಸಂಕೀರ್ಣಗಳು ಇಂದು ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಷಯ. ಇವನ ಪಟ್ಟಮಹಿಷಿ ನಾಟ್ಯರಾಣಿ ಶಾಂತಲೆಯು ಬೇಲೂರಿನ ಕಪ್ಪೆ ಚನ್ನಿಗರಾಯ ದೇವಾಲಯ, ಶ್ರವಣಬೆಳಗೊಳದ ಚಂದ್ರಗಿರಿಯ ಮೇಲಿನ ಸವತಿಗಂಧವಾರಣ ಬಸದಿಯನ್ನು ನಿರ್ಮಿಸಿ, ಶಾಂತಿನಾಥ ತೀರ್ಥಂಕರನನ್ನು ಪ್ರತಿಷ್ಠಾಪನೆ ಮಾಡಿಸಿದಳು. ವಿಷ್ಣುವರ್ಧನನ ಮಗಳಾದ ಹರಿಯಬ್ಬರಸಿ ಕೂಡ ಹಂತಿಯೂರಿನಲ್ಲಿ ಬಸದಿಯೊಂದನ್ನು ಕಟ್ಟಿಸಿದಳು. ಕಲೆಯೇ ಧರ್ಮವೆಂದು ಬಗೆದ ಗುಣಸಾಗರ ವಿಷ್ಣುವರ್ಧನನು ಕನ್ನಡ ಸಂಸ್ಕೃತಿಗೆ ನೀಡಿದ ಕೊಡುಗೆ ಹಿರಿದು.
ವಿಜಯನಗರದ ದೊರೆಗಳಾದ ಬುಕ್ಕರಾಯ (ಕ್ರಿ.ಶ. 1356-1377) ಮತ್ತು ಇಮ್ಮಡಿ ದೇವರಾಯ (ಕ್ರಿ.ಶ. 1423-1446) ಅವರು ಶಾಂತಿ, ಸೌಹಾರ್ದತೆಗೆ ಹೆಸರಾದವರು. ಬುಕ್ಕರಾಯನ ಕ್ರಿ.ಶ. 1368ರ ಶ್ರವಣಬೆಳಗೊಳದ ಶಾಸನವು ತನ್ನ ಶ್ರೇಷ್ಠ ಸಂದೇಶದಿಂದಾಗಿ ಪ್ರಸಿದ್ಧವಾಗಿದೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಲ್ಯ ಗ್ರಾಮದಲ್ಲಿ ಜೈನರು ತಮ್ಮ ಉತ್ಸವಗಳಲ್ಲಿ ಪಂಚಮಹಾವಾದ್ಯಗಳನ್ನು (ಕೊಂಬು, ಹಲಗೆ, ಶಂಖ, ಭೇರಿ ಮತ್ತು ಜಾಗಟೆ) ನುಡಿಸುವುದಕ್ಕೆ ಕಳಶವನ್ನು ಕೊಂಡೊಯ್ಯುವುದಕ್ಕೆ ಶ್ರೀವೈಷ್ಣವರು ಆಕ್ಷೇಪಿಸಿದರು. ಇದು ಎರಡೂ ಪಂಗಡಗಳ ನಡುವೆ ಘರ್ಷಣೆಗೆ ದಾರಿಯಾಯಿತು. ದೌರ್ಜನ್ಯಕ್ಕೊಳಗಾದ ಜೈನರು ವಿಜಯನಗರ ದೊರೆ ಬುಕ್ಕರಾಯನ ಮೊರೆಹೊಕ್ಕರು. ಎರಡೂ ಧರ್ಮಗಳ ಮುಖಂಡರನ್ನು ಸೇರಿಸಿದ ಬುಕ್ಕರಾಯನು, ಎಲ್ಲರ ಸಮ್ಮುಖದಲ್ಲಿ ಐತಿಹಾಸಿಕ ಮಹತ್ವದ ತೀರ್ಪನ್ನು ನೀಡಿದನು. ಅದರಂತೆ, ವೈಷ್ಣವ ಧರ್ಮಕ್ಕೂ ಜೈನಧರ್ಮಕ್ಕೂ ಮೂಲಭೂತ ವ್ಯತ್ಯಾಸಗಳಿಲ್ಲವೆಂದೂ, ಬುಕ್ಕರಾಯನು ವೈಷ್ಣವರ ಕೈಯಲ್ಲಿ ಜೈನರ ಕೈಹಿಡಿದು ಕೊಟ್ಟು, ಜೈನಧರ್ಮಕ್ಕೆ ಪೂರ್ವ ಮರ್ಯಾದೆಯಂತೆ ಪಂಚಮಹಾವಾದ್ಯಗಳ, ಕಲಶಗಳ ಗೌರವ ಸಲ್ಲಿಸುವಂತೆಯೂ, ತನ್ನ ರಾಜ್ಯದ ಜೈನ ಬಸದಿಗಳನ್ನು ರಕ್ಷಿಸುವ ಹೊಣೆ ಶ್ರೀವೈಷ್ಣವರದಾಗಿದೆ ಎಂತಲೂ ಕಟ್ಟಳೆ ಮಾಡಿದನು. ಈ ತೀರ್ಪು ಆಕ್ರಮಣಕ್ಕೆ ಒಳಗಾಗಿದ್ದ ಜೈನರ ಪರವಾಗಿತ್ತು. ತನ್ನ ನಾಡಿನ ದುರ್ಬಲರ ಹಿತಕಾಯುವುದು 'ರಾಜಧರ್ಮ' ಎಂಬುದನ್ನು ಕನ್ನಡದ ದೊರೆ ಬುಕ್ಕರಾಯನು ಜಗತ್ತಿಗೆ ತೋರಿಸಿಕೊಟ್ಟಿದ್ದಾನೆ. ಇದು ಕನ್ನಡಿಗ ದೊರೆಗಳ ರಾಜಧರ್ಮಕ್ಕೆ ಒಂದು ನಿದರ್ಶನ.
ಅಂಥದ್ದೇ ಮತ್ತೊಂದು ನಿದರ್ಶನವನ್ನು ವಿಜಯನಗರ ಸಾಮ್ರಾಟರಲ್ಲಿಯೇ ಕಾಣಬಹುದು. ಇಮ್ಮಡಿ ದೇವರಾಯನು ತನ್ನ ಕಾಲದಲ್ಲಿ ರಾಜ್ಯದ ಮುಸ್ಲಿಮರನ್ನೂ ಅತ್ಯಂತ ಗೌರವಯುತವಾಗಿ ನಡೆಸಿಕೊಂಡನು. ಮುಸ್ಲಿಮರು ತನ್ನ ಸೈನ್ಯ ಸೇರಲು ಉತ್ತೇಜಿಸಿದನು. ತನಗೆ ಸೇವೆ ಸಲ್ಲಿಸಲು ಮಹಮ್ಮದೀಯ ಪ್ರಜೆಗಳನ್ನೂ ನೇಮಿಸಿಕೊಂಡಿದ್ದನು. ಅವರಲ್ಲಿ ಅಹಮದ್ ಖಾನ್ ಎಂಬಾತನೂ ಒಬ್ಬನಾಗಿದ್ದನು. ದೇವರಾಯನ ಸೈನ್ಯದ ಅಶ್ವದಳದಲ್ಲಿ 10,000 ಮುಸಲ್ಮಾನರಿದ್ದರು. ಅವರಿಗೆ ಜಾಗೀರುಗಳನ್ನೂ ಹಂಚಿದನು. ವಿಜಯನಗರ ಪಟ್ಟಣದಲ್ಲಿ ಅವರ ಉಪಯೋಗಕ್ಕಾಗಿ ಮಸೀದಿಗಳನ್ನು ಕಟ್ಟಿಸಿಕೊಟ್ಟನು. ಅಲ್ಲದೆ, ಅವರ ಧರ್ಮದ ಹೆಸರಿನಲ್ಲಿ ಅವರನ್ನು ಯಾರು ಪೀಡಿಸಬಾರದೆಂದು ಆಜ್ಞೆ ಮಾಡಿದನು. ಮುಸಲ್ಮಾನರು ತಮ್ಮ ಧರ್ಮಕ್ಕೆ ವಿರುದ್ಧವಾದ ಅನ್ಯಧರ್ಮದ ರಾಜನಿಗೆ ಮುಜುರೆ (ನಮಸ್ಕಾರ) ಸಲ್ಲಿಸುವಂಥ ಮುಜುಗರದಿಂದ ಪಾರು ಮಾಡಲು, ತನ್ನ ಸಿಂಹಾಸನದ ಮುಂದೆ ಒಂದು ಪೀಠದಲ್ಲಿ ಪವಿತ್ರ ಕುರಾನಿನ ಪ್ರತಿಯೊಂದನ್ನು ಇರಿಸಿದನು. ಇಮ್ಮಡಿ ದೇವರಾಯನ ಆಳ್ವಿಕೆಯು ಆತನ ಧಾರ್ಮಿಕ ಸಹಿಷ್ಣುತೆಯಿಂದ ವಿಶೇಷವಾಗಿತ್ತು. ತನ್ನ ಸಾಮ್ರಾಜ್ಯದಲ್ಲಿ ವಿವಿಧ ಧರ್ಮಗಳ ಆಚರಣೆಗೆ ಆತ ಉತ್ತೇಜನ ನೀಡಿದನು. ಬೇರೆ ಬೇರೆ ಧರ್ಮಗಳನ್ನು ಪ್ರತಿನಿಧಿಸುತ್ತಿದ್ದ ವಿದ್ವಾಂಸರನ್ನು ಆತ ಪೋಷಿಸಿದನು. ಆತನ ಆಳ್ವಿಕೆಯಲ್ಲಿನ ಧಾರ್ಮಿಕ ಸಾಮರಸ್ಯವು ಆತನ ಉದಾರ ದೃಷ್ಟಿಯನ್ನು ಮತ್ತು ಎಲ್ಲ ಮಾನವರನ್ನು, ಅವರ ಧಾರ್ಮಿಕ ಶ್ರದ್ಧೆಗಳನ್ನೂ ಗೌರವಿಸುವ ಆತನ ಅಂತರಂಗದ ಆಕಾಂಕ್ಷೆಯನ್ನು ಪ್ರಕಟಿಸುತ್ತದೆ ಎನ್ನುತ್ತಾರೆ ವಿದ್ವಾಂಸ ಎಚ್.ಎಂ. ನಾಗರಾಜು. ಇದು ಕನ್ನಡದ ಮತ್ತೊಬ್ಬ ದೊರೆಯ ಧರ್ಮ ಸಹಿಷ್ಣುತೆಗೆ ನಿದರ್ಶನ. ಇದಲ್ಲವೇ ಕನ್ನಡಿಗರ ಔದಾರ್ಯದ ಸಂಸ್ಕೃತಿ?
'ಜಗದ್ಗುರು' ಇಬ್ರಾಹಿಂ ಆದಿಲ್ ಶಾಹಿ, ಕ್ರಿ.ಶ. 1580-1626ರ ಅವಧಿಯಲ್ಲಿ ಬಿಜಾಪುರದ ಆದಿಲ್ ಶಾಹಿಗಳಲ್ಲಿ ಅತ್ಯಂತ ಪ್ರಸಿದ್ಧನಾದ ಸುಲ್ತಾನ. ಇವನು 2ನೇ ವಯಸ್ಸಿನಲ್ಲಿಯೇ ಅಧಿಕಾರಕ್ಕೆ ಬಂದನು. ಅವನ ಕಾಲವು ದಕ್ಷಿಣ ಭಾರತದ ಇತಿಹಾಸದಲ್ಲಿಯೇ ಧಾರ್ಮಿಕ ಸಾಮರಸ್ಯ, ಸಾಮಾಜಿಕ ಸೌಹಾರ್ದತೆ ಮತ್ತು ಸಹಬಾಳ್ವೆಗೆ ಹೆಸರಾಗಿದೆ. ಮೊಘಲ್ ದೊರೆ ಅಕ್ಬರನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಇವನು, ಅಕ್ಬರನಂತೆಯೇ ಧಾರ್ಮಿಕ ಉದಾರಿ ದೊರೆಯೂ ಆಗಿದ್ದನು. ಎರಡನೇ ಇಬ್ರಾಹಿಂ ಕಂದಾಯ ಇಲಾಖೆಯ ಮೇಲ್ವಿಚಾರಣೆಯನ್ನು ಹಿಂದೂಗಳ ಕೈಗಿತ್ತನು. ಹಿಂದೂ ಸಾಧು ಸಂತರಿಗೆ ತನ್ನ ಆಸ್ಥಾನದಲ್ಲಿ ಸ್ಥಾನ ಕಲ್ಪಿಸಿದನು. ಅವನ ಆಸ್ಥಾನದಲ್ಲಿ 300 ಮಂದಿ ಹಿಂದೂ ಕವಿಗಳು ಮತ್ತು ತತ್ವಜ್ಞಾನಿಗಳಿದ್ದರು. ಅವನ ಅರಮನೆಯ ಪಕ್ಕದಲ್ಲಿಯೇ ನರಸಿಂಹ ದೇವಾಲಯ ಕಟ್ಟಿಸಿದನು. ಅದನ್ನು ಇಂದಿಗೂ ಕಾಣಬಹುದು. ಎರಡನೇ ಇಬ್ರಾಹಿಂಗೆ ಹಿಂದೂ ದೇವತೆ ಸರಸ್ವತಿ ಮತ್ತು ಸಂಗೀತದ ಬಗೆಗೆ ಅಪಾರ ಭಕ್ತಿ ಮತ್ತು ಪ್ರೀತಿ ಇತ್ತು. ಅವನಿಗೆ ಸರಸ್ವತಿ ಆರಾಧನೆಯ ದೀಕ್ಷೆ ಕೊಟ್ಟ ಗುರು ರುಕ್ಮಾಂಗದ ಪಂಡಿತ. ಸುಲ್ತಾನ ತನ್ನ ಅರಮನೆ ಆವರಣದಲ್ಲೇ ಸರಸ್ವತಿ ವಿಗ್ರಹ ಪ್ರತಿಷ್ಠಾಪನೆ ಮಾಡುವ ಮಟ್ಟಿಗೆ ಪ್ರೇರಣೆ ಪಡೆದಿದ್ದನು. ಆತನೇ ಬರೆದ 'ಕಿತಾಬ್-ಎ-ನೌರಸ್' ಕೃತಿಯ ಮೊದಲ ಗೀತೆಯಲ್ಲಿಯೇ ಸರಸ್ವತಿಯನ್ನು ಸ್ತುತಿಸಿದ್ದಾನೆ. ಅದೇ ರೀತಿ ಹಿಂದೂ ದೇವತೆಗಳಾದ ಗಣಪತಿ, ಶಿವ, ದುರ್ಗೆ ಮೊದಲಾದ ದೇವತೆಗಳನ್ನು ತನ್ನ ಕೃತಿಯೊಳಗೆ ಹೆಸರಿಸಿದ್ದಾನೆ. ಹಿಂದೂ ಧರ್ಮದ ಬಗೆಗಿನ ಇಬ್ರಾಹಿಮನ ಪ್ರೀತಿ ಮತ್ತು ಸಂಗೀತ ಜ್ಞಾನ ಮೊದಲಾದವನ್ನು ತಿಳಿದ ಜನತೆ ಈತನನ್ನು 'ಜಗದ್ಗುರು' ಎಂದು ಕರೆಯುತ್ತಿದ್ದರು. ಹಿಂದೂ-ಮುಸ್ಲಿಮರೆಲ್ಲ ಸೇರಿ ಪ್ರತಿ ತಿಂಗಳೂ ಮೊದಲ ಗುರುವಾರದಂದು 'ಈದ್-ಎ-ನೌರಸ್' ಎಂಬ ರಾಷ್ಟ್ರೀಯ ಹಬ್ಬವನ್ನು ಆಚರಿಸುತ್ತಿದ್ದರು. ಅಂದು ಸಾರ್ವತ್ರಿಕ ರಜಾದಿನವಾಗಿರುತ್ತಿತ್ತು. ದತ್ತನ ಭಕ್ತನೂ ಆಗಿದ್ದರಿಂದ ಗುರುವಾರವನ್ನು ಆಯ್ದುಕೊಂಡಿದ್ದನು. ಎರಡನೇ ಇಬ್ರಾಹಿಂನು ತನ್ನ ಅರಮನೆಯ ಕೋಟೆಯಲ್ಲಿನ ದತ್ತ ದೇವಾಲಯವನ್ನು ದುರಸ್ತಿ ಮಾಡಿಸಿ, ಅದರ ಪೂಜೆಗೆ ವ್ಯವಸ್ಥೆ ಮಾಡಿದ್ದನು. ಹೀಗೆ ಎರಡನೇ ಇಬ್ರಾಹಿಂನು ಜಾತ್ಯತೀತ, ಉದಾರವಾದಿ ಮನೋಭಾವದ ಸುಲ್ತಾನನಾಗಿದ್ದನು.
ಮೈಸೂರು ಒಡೆಯರ್ ಮನೆತನದ ನಾಲ್ವಡಿ ಕೃಷ್ಣರಾಜ ಒಡೆಯರ್ (ಕ್ರಿ.ಶ. 1895-1940) ದೇಶದಲ್ಲೇ ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವಾಗಿ ರೂಪಿಸಿದ ಕೀರ್ತಿಗೆ ಪಾತ್ರರಾದರು. ಮಹಾತ್ಮ ಗಾಂಧೀಜಿ ಅವರು ಮೈಸೂರು ಸಂಸ್ಥಾನವನ್ನು 'ಮಾದರಿ ರಾಜ್ಯ'ವೆಂದು, ಕೃಷ್ಣರಾಜ ಒಡೆಯರನ್ನು 'ರಾಜರ್ಷಿ' ಎಂದು ಕರೆದರು. ಕೃಷ್ಣರಾಜ ಒಡೆಯರು ಸಾಮಾಜಿಕ ನ್ಯಾಯದ ಹರಿಕಾರರಾಗಿ ಮೈಸೂರು ಸಂಸ್ಥಾನದಲ್ಲಿ ಮೀಸಲಾತಿಯನ್ನು ಜಾರಿಗೆ ತರಲು ಮಿಲ್ಲರ್ ಸಮಿತಿಯನ್ನು ನೇಮಿಸಿದರು. ಅಂದಿನ ದಿವಾನರಾದ ವಿಶ್ವೇಶ್ವರಯ್ಯ ಅದನ್ನು ವಿರೋಧಿಸಿದರೂ, ಕೃಷ್ಣರಾಜ ಒಡೆಯರು ಮೀಸಲಾತಿಯ ಪರ ದೃಢವಾಗಿ ನಿಂತರು. ಬರಡು ನೆಲವಾಗಿದ್ದ ಮಂಡ್ಯ ಇಂದು ಅಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಅದಕ್ಕೆ ಕಾರಣ ಕೃಷ್ಣರಾಜ ಸಾಗರ (ಕೆ.ಆರ್.ಎಸ್) ಅಣೆಕಟ್ಟೆಯ ನಿರ್ಮಾಣ. ಈ ನಿರ್ಮಾಣದ ಹಿಂದಿನ ಬುದ್ಧಿ ವಿಶ್ವೇಶ್ವರಯ್ಯನವರಾದರೆ, ಶಕ್ತಿ ಕೃಷ್ಣರಾಜ ಒಡೆಯರವರು. ಕೃಷ್ಣರಾಜರ ಅವಧಿಯಲ್ಲಿಯೇ ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಆರಂಭಗೊಂಡು, ಬೆಂಗಳೂರು ನಗರಕ್ಕೆ ವಿದ್ಯುತ್ ಸೌಲಭ್ಯ ದೊರಕಿತು (1905). ವಿದ್ಯುತ್ ಪಡೆದ ಏಷ್ಯಾ ಖಂಡದ ಮೊಟ್ಟಮೊದಲ ನಗರ ಎಂಬ ಕೀರ್ತಿಗೆ ಬೆಂಗಳೂರು ಪಾತ್ರವಾಯಿತು. 1916ರಲ್ಲಿ ಮೈಸೂರು ವಿಶ್ವವಿದ್ಯಾಲಯವನ್ನು ಆರಂಭಿಸುವ ಮೂಲಕ ಭಾರತದಲ್ಲಿಯೇ ವಿಶ್ವವಿದ್ಯಾಲಯ ಸ್ಥಾಪಿಸಿದ ಮೊದಲ ದೇಶೀಯ ಸಂಸ್ಥಾನ ಎಂಬ ಕೀರ್ತಿಗೆ ಮೈಸೂರು ಪಾತ್ರವಾಯಿತು. ಹೀಗೆ ಅನೇಕ ಮೊದಲುಗಳಿಗೆ ಕೃಷ್ಣರಾಜರ ಮೈಸೂರು ಸಂಸ್ಥಾನ ಪಾತ್ರವಾಯಿತು. ಆದ್ದರಿಂದ ಜನರು ನಾಲ್ವಡಿ ಕೃಷ್ಣರಾಜ ಒಡೆಯರನ್ನು 'ಕೃಷ್ಣರಾಜ ಭೂಪ, ಮನೆ ಮನೆಗೆ ದೀಪ' ಎಂದು ಕೊಂಡಾಡಿದ್ದಾರೆ. ಇದಲ್ಲವೇ ಕನ್ನಡ ದೊರೆಗಳ ಜನಪರ ಕಾಳಜಿ!

