ಸಿಂಗಾಪುರ ಪೊಲೀಸರು ಝುಬೀನ್ ಗರ್ಗ್ ಅವರ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಆಲಿಸ್ ಚೆಂಗ್ ಮಾಧ್ಯಮಗಳಿಗೆ ತಿಳಿಸಿದರು. "ಅಸ್ಸಾಂ ಜನರಿಗೆ ತಾಳ್ಮೆ ವಹಿಸುವಂತೆ ಮತ್ತು ಪೊಲೀಸರು ಸಂಪೂರ್ಣ ತನಿಖೆ ನಡೆಸಲು ಸಮಯ ಹಾಗೂ ಅವಕಾಶ ನೀಡುವಂತೆ ನಾನು ಮನವಿ ಮಾಡುತ್ತೇನೆ" ಎಂದು ಅವರು ಹೇಳಿದರು. ಸಿಂಗಾಪುರ ಪೊಲೀಸರು ಈಗಾಗಲೇ ಮರಣೋತ್ತರ ಪರೀಕ್ಷೆಯ ವರದಿ ಮತ್ತು ಪ್ರಾಥಮಿಕ ತನಿಖೆಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.ಝುಬೀನ್ ಗರ್ಗ್ ಅವರ ಸಾವಿನ ಪ್ರಕರಣವನ್ನು ಅಸ್ಸಾಂನಲ್ಲಿ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (SIT), ಸೆಪ್ಟೆಂಬರ್ 30 ರಂದು ಕೇಂದ್ರ ಗೃಹ ಸಚಿವಾಲಯದ ಮೂಲಕ ಸಿಂಗಾಪುರಕ್ಕೆ ಕಾನೂನು ನೆರವು ಕೋರಿ ಮನವಿ ಕಳುಹಿಸಿತ್ತು. ಪರಸ್ಪರ ಕಾನೂನು ನೆರವು ಒಪ್ಪಂದದ (Mutual Legal Assistance Treaty) ಅಡಿಯಲ್ಲಿ ಈ ಮನವಿಯನ್ನು ಸಿಂಗಾಪುರ ಅಟಾರ್ನಿ ಜನರಲ್ ಕಚೇರಿಗೆ ಸಲ್ಲಿಸಲಾಗಿತ್ತು.
SIT ಮುಖ್ಯಸ್ಥ ಮತ್ತು ವಿಶೇಷ ಡಿಜಿಪಿ ಎಂ.ಪಿ. ಗುಪ್ತಾ ಅವರು, ಸಿಂಗಾಪುರ ಅಧಿಕಾರಿಗಳು ಭಾರತೀಯ ಹೈಕಮಿಷನ್ ಮೂಲಕ ಇಮೇಲ್ ಕಳುಹಿಸಿ, ಗಾಯಕನ ಸಾವಿಗೆ ಸಂಬಂಧಿಸಿದಂತೆ ತನಿಖೆಗಾಗಿ ಎಷ್ಟು ಅಸ್ಸಾಂ ಪೊಲೀಸ್ ಅಧಿಕಾರಿಗಳು ಸಿಂಗಾಪುರಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಅವರ ಭೇಟಿಯ ಉದ್ದೇಶವೇನು ಎಂಬ ಮಾಹಿತಿಯನ್ನು ಕೇಳಿದ್ದಾರೆ ಎಂದು ತಿಳಿಸಿದರು. ಈ ಬಗ್ಗೆ ಅಸ್ಸಾಂ ಪೊಲೀಸರು ವಿವರಗಳನ್ನು ಸಿಂಗಾಪುರಕ್ಕೆ ಕಳುಹಿಸಿದ್ದಾರೆ. "ಸಿಂಗಾಪುರಕ್ಕೆ ತೆರಳಿ ಅಲ್ಲಿನ ತನಿಖೆಯನ್ನು ಮುಂದುವರಿಸಲು ನಮಗೆ ಶೀಘ್ರದಲ್ಲೇ ಹಸಿರು ನಿಶಾನೆ ಸಿಗುವ ವಿಶ್ವಾಸವಿದೆ" ಎಂದು ಗುಪ್ತಾ ಹೇಳಿದರು.
ಸೆಪ್ಟೆಂಬರ್ 19 ರಂದು ಸಮುದ್ರದಲ್ಲಿ ಈಜುವಾಗ ಸಿಂಗಾಪುರದಲ್ಲಿ ಮೃತಪಟ್ಟಿದ್ದಾರೆ ಎನ್ನಲಾದ ಗಾಯಕ ಝುಬೀನ್ ಗರ್ಗ್ ಅವರ ಸಾವಿನ ತನಿಖೆಗಾಗಿ ಅಸ್ಸಾಂ ಸರ್ಕಾರ ಒಂಬತ್ತು ಸದಸ್ಯರ SIT ಅನ್ನು ರಚಿಸಿತ್ತು. ಈ SIT ಈಗ ಸಿಂಗಾಪುರ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು, ತನಿಖೆಯನ್ನು ಚುರುಕುಗೊಳಿಸಲು ಪ್ರಯತ್ನಿಸುತ್ತಿದೆ. ಸಿಂಗಾಪುರದಿಂದ ದೊರೆಯುವ ಪ್ರತಿಕ್ರಿಯೆಗಾಗಿ ಅಸ್ಸಾಂ ಪೊಲೀಸರು ಕಾತುರದಿಂದ ಕಾಯುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ.

