ಬೆಳ್ತಂಗಡಿ: ನ.7 ರಂದು ಚುನಾಯಿತ ಸದಸ್ಯರ ಅಧಿಕಾರಾವಧಿ ಮುಗಿಯಲಿರುವ ಬೆಳ್ತಂಗಡಿ ಪಟ್ಟಣ ಪಂಚಾಯಿತಿಗೆ ಆಡಳಿತಾಧಿಕಾರಿ ನೇಮಕ ಮಾಡದಂತೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಬೆಳ್ತಂಗಡಿ ಪಪಂ ಅಧ್ಯಕ್ಷ ಜಯಾನಂದ ಗೌಡ ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ಬೆಳ್ತಂಗಡಿ ಪಪಂನಲ್ಲಿ ಕಳೆದ ಅವಧಿಯ ಚುನಾವಣೆಯಲ್ಲಿಬಿಜೆಪಿ ಬೆಂಬಲಿತ ಸದಸ್ಯರು ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಒಟ್ಟು ಐದು ವರ್ಷದ ಅಡಳಿತದಲ್ಲಿಪ್ರಥಮ ಅವಧಿಯ 30 ತಿಂಗಳ ಮೊದಲ ಅವಧಿಗೆ ಅಧ್ಯಕ್ಷರಾಗಿ ರಜನಿ ಕುಡ್ವ ಹಾಗೂ ಉಪಾಧ್ಯಕ್ಷರಾಗಿ ಜಯಾನಂದ ಗೌಡ ಕಾರ್ಯನಿರ್ವಹಿಸಿದ್ದರು. ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿ ಪ್ರಕ್ರಿಯೆ ವಿಳಂಬಗೊಂಡು ಆಡಳಿತಾಧಿಕಾರಿ ಸುಮಾರು 16 ತಿಂಗಳ ಕಾಲ ಕಾರ್ಯನಿರ್ವಹಿಸಿದ್ದರು. 2024ರಲ್ಲಿಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡು ಕಳೆದ ಅಕ್ಟೋಬರ್ ನಲ್ಲಿಜಯಾನಂದ ಗೌಡ ಅಧ್ಯಕ್ಷರಾಗಿ ಹಾಗೂ ಗೌರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರ ಅವಧಿ 30 ತಿಂಗಳು ಆಗಿದ್ದರೂ, ಇದೀಗ ಅವರ ಅಧಿಕಾರವಧಿ ಮೊಟಕುಗೊಂಡು ಒಂದು ವರ್ಷ ಮೂರು ತಿಂಗಳಲ್ಲಿಮುಕ್ತಾಯಗೊಳ್ಳುತ್ತಿದೆ. ಜತೆ ಎಲ್ಲಸದಸ್ಯರ ಅವಧಿಯೂ ನ.7ಕ್ಕೆ ಮುಕ್ತಾಯಗೊಳ್ಳಲಿದೆ.
ಸರಕಾರ ಮೀಸಲಾತಿ ಪ್ರಕಟಗೊಳಿಸಲು ವಿಳಂಬ ಮಾಡಿರುವುದರಿಂದ ಚುನಾಯಿತ ಪ್ರತಿನಿಧಿಗಳು ತಮ್ಮ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿಹಾಲಿ ಚುನಾಯಿತ ಸದಸ್ಯರ ಅಧಿಕಾರಾವಧಿ ಮುಗಿಯುವವರೆಗೆ ಆಡಳಿತ ಅಧಿಕಾರಿ ನೇಮಿಸದಂತೆ ಒತ್ತಾಯಿಸಿ ಅಧ್ಯಕ್ಷ ಜಯಾನಂದ ಗೌಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

