ಆಸ್ತಿ ವಿಭಾಗ ದಾವೆ ವಿಲೇವಾರಿ ವಿಳಂಬ -ಅಂತಿಮ ಡಿಕ್ರಿ ತ್ವರಿತಗೊಳಿಸಲು ಸಿಪಿಸಿ ತಿದ್ದುಪಡಿಗೆ ಹೈಕೋರ್ಟ್ ನಿರ್ದೇಶನ

Contributed bysrikanth.g@timesgroup.com|Vijaya Karnataka
Subscribe

ಆಸ್ತಿ ವಿಭಾಗದ ಪ್ರಕರಣಗಳ ವಿಲೇವಾರಿ ವಿಳಂಬವಾಗುತ್ತಿರುವ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಅಂತಿಮ ಡಿಕ್ರಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ನಾಗರಿಕ ಪ್ರಕ್ರಿಯಾ ಸಂಹಿತೆಗೆ ತಿದ್ದುಪಡಿ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಸುಪ್ರೀಂಕೋರ್ಟ್ ಆದೇಶವಿದ್ದರೂ 16 ವರ್ಷಗಳಿಂದ ತಿದ್ದುಪಡಿ ಮಾಡದಿರುವುದಕ್ಕೆ ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ. ಶಾಸನಾತ್ಮಕ ತಿದ್ದುಪಡಿಯ ಅಗತ್ಯದ ಬಗ್ಗೆ 8 ಅಂಶಗಳ ಚೌಕಟ್ಟು ನೀಡಿದೆ.

high court orders cpc amendment for property case resolution

*ಸುಪ್ರೀಂಕೋರ್ಟ್ ಆದೇಶವಿದ್ದರೂ 16 ವರ್ಷದಿಂದ ತಿದ್ದುಪಡಿ ಮಾಡದ್ದಕ್ಕೆ ಬೇಸರ

ಶ್ರೀಕಾಂತ್ ಹುಣಸವಾಡಿ ಬೆಂಗಳೂರು

ಘ್ಕಿಖ್ಟಜಿka್ಞಠಿh.ಎಃಠಿಜಿಞಛಿsಟ್ಛಜ್ಞಿdಜಿa.್ಚಟಞ

ಆಸ್ತಿ ವಿಭಾಗ ದಾವೆ ಪ್ರಕರಣಗಳ ವಿಲೇವಾರಿ ವಿಳಂಬವಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್ , ಆಸ್ತಿ ದಾವೆಗಳಲ್ಲಿಅಂತಿಮ ಡಿಕ್ರಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ನಾಗರಿಕ ಪ್ರಕ್ರಿಯಾ ಸಂಹಿತೆ(ಸಿಪಿಸಿ) 1908ಕ್ಕೆ ಸೂಕ್ತ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿದೆ.

ಅಲ್ಲದೆ, ‘‘ಈ ವಿಚಾರದಲ್ಲಿನ್ಯಾಯಾಲಯ ಯಾವುದೇ ಕಾನೂನನ್ನು ಮಾಡುವುದಿಲ್ಲ. ನ್ಯಾಯಾಲಯಕ್ಕೆ ಶಾಸನ ಅಥವಾ ಕಾನೂನು ರೂಪಿಸುವ ಅಧಿಕಾರವಿಲ್ಲ. ಆದರೆ ವ್ಯಾಜ್ಯಗಳನ್ನು ಬಗೆಹರಿಸುವುದೇ ನ್ಯಾಯಾಲಯದ ಉದ್ದೇಶವಾಗಿದೆ. ಆದಕ್ಕೆ 1908ರ ನಾಗರಿಕ ಪ್ರಕ್ರಿಯೆ ಸಂಹಿತೆ(ಕೋಡ್ ಆಫ್ ಸಿವಿಲ್ ಪ್ರೊಸಿಜರ್ ) ಅನ್ನು ತಿದ್ದುಪಡಿ ಮಾಡಬೇಕಾದ ಜರೂರು ಇದೆ. ಆದರೆ ಅದು ತುಂಬಾ ವರ್ಷಗಳಿಂದ ಬಾಕಿ ಇದೆ’’ ಎಂದು ನ್ಯಾಯಪೀಠ ಹೇಳಿದೆ.

ಶಿವಮೊಗ್ಗದ ಆಸ್ತಿ ವಿಭಜನೆ ಪ್ರಕರಣವೊಂದರಲ್ಲಿನ್ಯಾ. ಅನಂತ್ ರಾಮನಾಥ್ ಹೆಗಡೆ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ಅಲ್ಲದೆ, ಈ ಕುರಿತು ಸುಪ್ರೀಂಕೋರ್ಟ್ 2009ರಲ್ಲಿಸಿಪಿಸಿ ತಿದ್ದುಪಡಿಯಾಗಬೇಕೆಂದು ತೀರ್ಪು ನೀಡಿದೆ. ಆದರೂ ಸಂಸತ್ ಮತ್ತು ವಿಧಾನಸಭೆಗಳು ಇನ್ನೂ ಕಾನೂನನ್ನು ತಿದ್ದುಪಡಿ ಮಾಡಿಲ್ಲವೆಂದು ನ್ಯಾಯಾಲಯ ತಿಳಿಸಿದೆ.

ಪ್ರಕರಣದ ಒಳ-ಹೊರಗನ್ನು ಅವಲೋಕಿಸಿದ ನ್ಯಾಯಪೀಠ, ‘‘ಅಂತಿಮ ಡಿಕ್ರಿ ಪ್ರಕ್ರಿಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಅನುಕೂಲವಾಗುವಂತೆ ಸಿಪಿಸಿ ತಿದ್ದುಪಡಿ ಮಾಡಬೇಕಿದೆ. ಅಂತಿಮ ಡಿಕ್ರಿ ವಿಳಂಬವಾಗಲು ಹಲವು ಕಾರಣಗಳಿವೆ. ಅವುಗಳಲ್ಲಿಆಸ್ತಿಯು ಯಾವ ವ್ಯಕ್ತಿಯ ಸ್ವಾಧೀನದಲ್ಲಿರುತ್ತದೋ ಅವರು ಹೆಚ್ಚಿನ ಪಾಲು ಪಡೆದುಕೊಳ್ಳುವುದು ಮತ್ತು ದಾವೆ ವಿಳಂಬದ ಲಾಭವನ್ನೂ ಅವರೇ ಪಡೆದುಕೊಳ್ಳುತ್ತಾರೆ. ಹಾಗಾಗಿ ಪ್ರಕರಣಗಳನ್ನು ಲಂಬಿಸಲು ಅಥವಾ ಅನಗತ್ಯ ವಿಳಂಬ ಮಾಡಲು ಅವರು ಎಲ್ಲವನ್ನೂ ಮಾಡುತ್ತಾರೆ’’ ಎಂದು ಅಭಿಪ್ರಾಯಪಟ್ಟಿದೆ.

8 ಅಂಶಗಳ ಚೌಕಟ್ಟು:

ಹಾಗಾಗಿ ಸಿಪಿಸಿ ತಿದ್ದುಪಡಿಯ ಬಗ್ಗೆ ಎಲ್ಲಾಬಾಧ್ಯಸ್ಥರ ಜತೆ ಸಮಾಲೋಚನೆ ನಡೆಸಿ ಸೂಕ್ತ ತಿದ್ದುಪಡಿಯನ್ನು ಮಾಡಲು ಇದು ಸಕಾಲ ಎಂದು ಸರಕಾರಗಳಿಗೆ ನಿರ್ದೇಶನ ನೀಡಿರುವ ನ್ಯಾಯಪೀಠ, ಶಾಸನಾತ್ಮಕ ತಿದ್ದುಪಡಿ ಏಕೆ ಅಗತ್ಯವಿದೆ ಎಂಬ ಬಗ್ಗೆ 8 ಅಂಶಗಳ ವಿಸ್ತೃತ ಚೌಕಟ್ಟನ್ನು ನೀಡಿದೆ.

ಪ್ರಾಥಮಿಕ ಡಿಕ್ರಿ ಆದ ಬಳಿಕ ಆದಷ್ಟು ಬೇಗ ದಾವೆಯನ್ನು ಮತ್ತೆ ನ್ಯಾಯಾಲಯದ ಮುಂದೆ ಪಟ್ಟಿ ಮಾಡಿ, ಅಂತಿಮ ಡಿಕ್ರಿ ಆದೇಶಗಳನ್ನು ಹೊರಡಿಸಬೇಕು. ಪಕ್ಷಗಾರರ ಅಹವಾಲು ಅಥವಾ ಕೋರುವ ಹಂಚಿಕೆ ಪ್ರಮಾಣದ ಬಗ್ಗೆ ಅಭಿಪ್ರಾಯ ಪಡೆದು ಅಂತಿಮ ಡಿಕ್ರಿ ಆದೇಶ ಮಾಡಬೇಕು. ಪ್ರಾಥಮಿಕ ಡಿಕ್ರಿ ಆದ ಬಳಿಕ ಆಸ್ತಿಯಿಂದ ಏನಾದರೂ ಉತ್ಪತ್ತಿ ಬಂದರೆ, ಅದರ ಲಾಭವನ್ನು ನ್ಯಾಯಾಲಯದಲ್ಲಿಠೇವಣಿ ಇಡಬೇಕು. ಕರ್ನಾಟಕ ಭೂ ಕಂದಾಯ ಕಾಯಿದೆ 1964ರ ಸೆಕ್ಷನ್ 132(3) ಅಡಿ ಅಂತಿಮ ಡಿಕ್ರಿಗೆ ಅನುಗುಣವಾಗಿ ಆಸ್ತಿಯ ದಾಖಲೆಗಳಲ್ಲಿಹೆಸರು ಬದಲಾವಣೆಗಳಾಗಬೇಕು ಎಂಬುದೂ ಸೇರಿದಂತೆ ಹಲವು ಸಲಹೆಗಳನ್ನು ನ್ಯಾಯಾಲಯ ನೀಡಿದೆ.

ಪ್ರಕರಣದ ಹಿನ್ನೆಲೆ:

ಅರ್ಜಿದಾರರಾದ ವೀರಭದ್ರಪ್ಪ ಮತ್ತಿತರ ಸಹೋದರರು ಶಿವಮೊಗ್ಗ ತಾಲೂಕಿನ ಗೊಂದಿಚಟ್ನಹಳ್ಳಿ ಗ್ರಾಮದ ಸರ್ವೇ ನಂಬರ್ 113, 154 ಮತ್ತು 164ರಲ್ಲಿಆಸ್ತಿಯನ್ನು ಹಂಚಿಕೆ ಮಾಡಿಕೊಂಡಿದ್ದರು. ಆದರೆ ಸರ್ವೇ ನಂಬರ್ 25ರಲ್ಲಿದ್ದ 10 ಎಕರೆ 22 ಗುಂಟೆ ಜಾಗದ ಸಂಬಂಧ ತಕರಾರು ಉಂಟಾಗಿತ್ತು. ಹಾಗಾಗಿ ಇಬ್ಬರು ಪಕ್ಷಗಾರರ ನಡುವೆ ಆಸ್ತಿಯನ್ನು ಸಮಾನವಾಗಿ ವಿಭಜಿಸಿ ಡಿಕ್ರಿ ಮಾಡಿಕೊಡುವಂತೆ ಕೋರಿ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಲಯ ಅದಕ್ಕಾಗಿ ಕೋರ್ಟ್ ಕಮಿಷನರ್ (ಸರ್ವೇಯರ್ ) ಅನ್ನು ನೇಮಕ ಮಾಡಿತ್ತು. ಪ್ರಾಥಮಿಕ ಡಿಕ್ರಿಯಲ್ಲಿ10 ಎಕರೆ 22 ಗುಂಟೆಗೆ ಆದೇಶ ಮಾಡಲಾಗಿತ್ತು. ಆದರೆ ಸರ್ವೇಯರ್ 10 ಎಕರೆ 22 ಗುಂಟೆ ಬದಲು 7 ಎಕರೆ 12 ಗುಂಟೆ ಭೂಮಿಯನ್ನು ಮೂರು ಭಾಗಗಳಾಗಿ ವಿಭಜನೆ ಮಾಡಿದ್ದರು. ಮೂರು ಭಾಗದಲ್ಲಿಎರಡು ಭಾಗ ಒಬ್ಬರಿಗೆ, ಮತ್ತೊಂದು ಭಾಗ ಮತ್ತೊಬ್ಬರಿಗೆ ಹಂಚಿಕೆ ಮಾಡಿದ್ದರು. ನ್ಯಾಯಾಲಯವೂ ಅದೇ ಆದೇಶವನ್ನು ಅಂತಿಮಗೊಳಿಸಿತ್ತು. ಹಾಗಾಗಿ ಆ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿಮೇಲ್ಮನವಿ ಸಲ್ಲಿಸಲಾಗಿತ್ತು. ಪ್ರಕರಣವನ್ನು ವಿಲೇವಾರಿ ಮಾಡಿರುವ ನ್ಯಾಯಾಲಯ, ಅಧೀನ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ ಹೊಸದಾಗಿ ಆಸ್ತಿ ವಿಭಜನೆ ಮಾಡುವಂತೆ ನಿರ್ದೇಶನ ನೀಡಿದೆ.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ