ಕಂದಾಯ ಅಧಿಕಾರಿಗಳ ಸಭೆಯಲ್ಲಿಶಾಸಕ ಸುರೇಶ್ ಗೌಡ ಒತ್ತಾಯ
ವಿಕ ಸುದ್ದಿಲೋಕ ತುಮಕೂರು
ಸರಕಾರಿ ಹಾಗೂ ಖಾಸಗಿ ಜಾಗದಲ್ಲಿಮನೆ ಕಟ್ಟಿಕೊಂಡು ಹಲವಾರು ವರ್ಷಗಳಿಂದ ವಾಸ ಮಾಡುತ್ತಿರುವ ತುಮಕೂರು ತಾಲೂಕಿನ ಫಲಾನುಭವಿಗಳಿಗೆ ಶೀಘ್ರವಾಗಿ ಹಕ್ಕು ಪತ್ರ ನೀಡಬೇಕು. ಅಲ್ಲದೆ, ಆಯಾ ಗ್ರಾಮ, ಬಡಾವಣೆಗಳನ್ನು ಕಂದಾಯ ಗ್ರಾಮ , ಬಡಾವಣೆಯಾಗಿ ರಚನೆ ಮಾಡಿ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಅವರು ತಹಸೀಲ್ದಾರರಿಗೆ ಒತ್ತಾಯಿಸಿದರು.
ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿಶುಕ್ರವಾರ ನಡೆದ ಕಂದಾಯ ಅಧಿಕಾರಿಗಳ ಸಭೆಯಲ್ಲಿಮಾತನಾಡಿದ ಶಾಸಕರು, ತುಮಕೂರು ತಾಲೂಕಿನ ವಿವಿಧ ಹೋಬಳಿಗಳ ವ್ಯಾಪ್ತಿಯಲ್ಲಿ3 ಸಾವಿರಕ್ಕೂ ಹೆಚ್ಚು ಕುಟುಂಬದವರು ಸರಕಾರಿ ಅಥವಾ ಖಾಸಗಿ ಜಾಗಗಳಲ್ಲಿಮನೆ ಕಟ್ಟಿಕೊಂಡು ಹಲವಾರು ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಆದರೆ ಅವರ ಮನೆಗಳಿಗೆ ಹಕ್ಕು ಪತ್ರ ನೀಡಿಲ್ಲ. ಇದರಿಂದ ಈ ಗ್ರಾಮಗಳು ಹಾಗೂ ಕುಟುಂಬಗಳು ಸರಕಾರದ ಹಾಗೂ ಗ್ರಾಮ ಪಂಚಾಯಿತಿಯಿಂದ ಮೂಲ ಸೌಕರ್ಯಗಳನ್ನು ಪಡೆಯಲಾಗುತ್ತಿಲ್ಲಎಂದು ಹೇಳಿದರು.
ಇಂತಹ ಜನವಸತಿ ಪ್ರದೇಶಗಳನ್ನು ಇಷ್ಟು ವರ್ಷಗಳಾದರೂ ಕಂದಾಯ ಗ್ರಾಮ, ಬಡಾವಣೆಯಾಗಿ ರಚನೆ ಮಾಡಿಲ್ಲ. ಅಲ್ಲಿನ ಫಲಾನುಭವಿ ನಿವಾಸಿಗಳಿಗೆ ಹಕ್ಕು ಪತ್ರ ಕೊಟ್ಟಿಲ್ಲ. ಇದರಿಂದ ಈ ಕುಟುಂಬಗಳು ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಮುಂತಾದ ಸೌಲಭ್ಯ ಪಡೆಯಲು ಸಾಧ್ಯವಾಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ರಚಿಸಿ, ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಶಾಸಕ ಸುರೇಶ್ ಗೌಡರು ತಹಸೀಲ್ದಾರರಿಗೆ ಸೂಚಿಸಿದರು.
ಈ ವೇಳೆ ಮಾತನಾಡಿದ ತಹಸೀಲ್ದಾರ್ ಪಿ.ಎಸ್ .ರಾಜೇಶ್ವರಿ, ತಾಲೂಕಿನ 80 ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ರಚನೆ ಮಾಡಲು ಹಾಗೂ ಈ ಪ್ರದೇಶದ 3111 ಫಲಾನುಭವಿ ಕುಟುಂಬಗಳಿಗೆ ಹಕ್ಕು ಪತ್ರ ನೀಡಲು ಕೋರಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಸರಕಾರ ಅನುಮೋದನೆ ನೀಡಿದ ಕೂಡಲೇ ಕಂದಾಯ ಗ್ರಾಮ ರಚನೆ ಹಾಗೂ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
ತಾಲೂಕಿನ ಎಲ್ಲಾಹೋಬಳಿಗಳ ಉಪ ತಹಸೀಲ್ದಾರರು, ಕಂದಾಯ ನಿರೀಕ್ಷಕರು, ಸರ್ವೆ ಸೂಪರ್ ವೈಸರ್ ಗಳು ಸಭೆಯಲ್ಲಿಭಾಗವಹಿಸಿದ್ದರು.
ಪೊಟೋ30ತುಮಕೂರು2: ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡರು ಸಭೆ ನಡೆಸಿ ತಹಸೀಲ್ದಾರರಿಗೆ ಹಲವು ಸೂಚನೆಗಳನ್ನು ನೀಡಿದರು.

