ಹುಬ್ಬಳ್ಳಿಯಲ್ಲಿಎಂಎಲ್ ಸಿ ಎನ್ .ರವಿಕುಮಾರ್ ಎಚ್ಚರಿಕೆ
ವಿಕ ಸುದ್ದಿಲೋಕ ಹುಬ್ಬಳ್ಳಿ
ಆರ್ ಎಸ್ ಎಸ್ ದೇಶಭಕ್ತಿ, ಸಾಮಾಜಿಕ ಸಂಘಟನೆ ಎಂಬುದು ನಮ್ಮ ದೇಶಕ್ಕೆ ಮಾತ್ರವಲ್ಲಇಡೀ ವಿಶ್ವಕ್ಕೆ ಗೊತ್ತಿದೆ. ಆದರೂ ಆರ್ ಎಸ್ ಎಸ್ ಬಗ್ಗೆ ಸಚಿವ ಪ್ರಿಯಾಂಕ ಖರ್ಗೆ ಏನೇನೋ ಮಾತನಾಡುತ್ತಿದ್ದಾರೆ. ಸಂಘದ ಬಗ್ಗೆ ತಿಳಿದು ಮಾತನಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್ .ರವಿಕುಮಾರ ಎಚ್ಚರಿಸಿದ್ದಾರೆ.
ನಗರದಲ್ಲಿಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ‘‘ಪ್ರಿಯಾಂಕ ಖರ್ಗೆ ಅವರ ಕ್ಷೇತ್ರದಲ್ಲಿಯೇ ಗ್ರಂಥಪಾಲಕಿ ಭಾಗ್ಯವತಿ ಎಂಬುವರು ಮೂರು ತಿಂಗಳ ವೇತನ ಸಿಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಅವರೇ ನೇರ ಹೊಣೆ. ಅವರು ಜಗತ್ತಿನ ಬಗ್ಗೆ ಮಾತನಾಡುವುದನ್ನು ಬಿಟ್ಟು ಕಲಬುರಗಿ ಜಿಲ್ಲೆ ಬಗ್ಗೆ ಮಾತನಾಡಲಿ,’’ ಎಂದು ಸಲಹೆ ನೀಡಿದರು.
‘‘ಬೆದರಿಕೆ ಹಾಕುವಂತಹ ಸಂಘಟನೆಗಳ ಮೇಲಿನ ಕೇಸ್ ಗಳನ್ನು ಇವರದ್ದೇ ಸರಕಾರ ರದ್ದು ಮಾಡಿದೆ. ಅಂತಹ ಕೆಲಸವನ್ನು ಆರ್ ಎಸ್ ಎಸ್ ಸಂಘಟನೆ ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಆಧಾರವಿಲ್ಲದೇ ಅನಗತ್ಯವಾಗಿ ಆರ್ ಎಸ್ ಎಸ್ ಮೇಲೆ ಗೂಬೆ ಕೂರಿಸುವುದನ್ನು ನಿಲ್ಲಿಸಬೇಕು,’’ ಎಂದು ಆಗ್ರಹಿಸಿದರು.
‘‘ಕಾನೂನು ವ್ಯವಸ್ಥೆ ಹದಗೆಟ್ಟಿದೆ. ರಾಜ್ಯದ ಮೂಲೆ ಮೂಲೆಗೂ ಡ್ರW್ಸ… ಜಾಲ ಬೇರೂರಿದೆ. ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿಅಭಿವೃದ್ಧಿ ವಿರೋಧಿ ಸರಕಾರ ಇದೆ. ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡುತ್ತಿಲ್ಲ. ಯಾವ ಮಂತ್ರಿಗಳು ರೈತರ ಬಳಿ ಹೋಗಿ ಅವರ ಕಷ್ಟ ಕೇಳುತ್ತಿಲ್ಲ,’’ ಎಂದು ಆರೋಪಿಸಿದ ಅವರು, ‘‘ಸರಕಾರ ಕೂಡಲೇ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು,’’ ಎಂದು ಒತ್ತಾಯಿಸಿದರು.
ಗೂಗಲ್ ಆಂಧ್ರ ಪಾಲು:
‘‘ಇಡೀ ರಾಜ್ಯವೇ ಗುಂಡಿಗಳ ರಾಜ್ಯವಾಗಿದೆ. ಸಿಎಂ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ ದುರಾಡಳಿತಕ್ಕೆ ಬೆಂಗಳೂರು ಪಾಟ್ ಹೋಲ್ ರಾಜಧಾನಿಯಾಗಿದೆ. ಇದರ ಪರಿಣಾಮವೇ ಗೂಗಲ್ ಕಂಪನಿ ಆಂಧ್ರದ ಪಾಲಾಗಿದೆ. ತಗ್ಗುಗುಂಡಿಗಳಿಗೆ ಬೇಸತ್ತ ಉದ್ಯಮಿಗಳು ಮತ್ತು ಜನತೆ ಟ್ವಿಟ್ ಮಾಡಿ ರಾಜ್ಯ ಸರಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಪ್ರಗತಿಯಲ್ಲಿದ್ದ ರಾಜ್ಯವು ಕಾಂಗ್ರೆಸ್ ಸರಕಾರದ ದುರಾಡಳಿತದಿಂದ ಎಲ್ಲವೂ ಮಣ್ಣುಪಾಲಾಗುತ್ತಿದೆ. ಸರಕಾರ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ಹೋರಾಟ ಮಾಡಲಿದೆ,’’ ಎಂದು ಎಚ್ಚರಿಸಿದರು.
‘‘ಶಾಸಕರಿಗೆ ಅನುದಾನ ಹಂಚಿಕೆಯಲ್ಲಿತಾರತಮ್ಯ ಮಾಡಲಾಗುತ್ತಿದೆ. ಆಡಳಿತ ಪಕ್ಷದ ಶಾಸಕರೇ ಸರಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಆದಾಗ್ಯೂ ಸರಕಾರ ನಿರ್ಲಕ್ಷ್ಯ ತೋರುತ್ತಿದೆ,’’ ಎಂದು ಆರೋಪಿಸಿದರು.
------

