* ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್
ವಿಕ ಸುದ್ದಿಲೋಕ ಬೆಂಗಳೂರು
72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ಸರಕಾರಿ ಶಾಲಾ ಹೆಣ್ಣು ಮಕ್ಕಳಿಗೆ ಐಸಿರಿ ಸಮೃದ್ಧಿ ಯೋಜನೆ ವಿಸ್ತರಣೆ, ಕಾಲೇಜು ವಿದ್ಯಾರ್ಥಿಗಳಿಗೆ ಸಹಕಾರ ಕ್ಷೇತ್ರದ ಬಗ್ಗೆ ಅರಿವು ಮೂಡಿಸಲು ಜಿಲ್ಲಾಅಂತರ ಕಾಲೇಜು ರಸಪ್ರಶ್ನೆ ಸ್ಪರ್ಧೆ ಹಾಗೂ ಯುವಕರಿಗಾಗಿ ಶೂನ್ಯ ಮೊತ್ತ ಉಳಿತಾಯ ಖಾತೆ ಯೋಜನೆ ಪರಿಚಯಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ನ.3ರಂದು ಜಯನಗರ 4ನೇ ‘ಟಿ’ ಬ್ಲಾಕ್ ನಲ್ಲಿರುವ ಬಿಇಎಸ್ ವಿದ್ಯಾಸಂಸ್ಥೆಯಲ್ಲಿಹಮ್ಮಿಕೊಳ್ಳಲಾಗಿದೆ. ಶಾಸಕ ಎಸ್ .ಟಿ.ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೆಸಿಎಸ್ ಅಧಿಕಾರಿ ಎಸ್ .ಎನ್ .ಅರುಣ್ ಕುಮಾರ್ , ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್ .ನವೀನ್ , ಬಿಇಎಸ್ ವಿದ್ಯಾ ಸಂಸ್ಥೆ ಅಧ್ಯಕ್ಷ ಕೆ.ಆರ್ .ನಿರ್ಮಲ್ ಕುಮಾರ್ , ಕಾರ್ಯದರ್ಶಿ ಪ್ರೊ. ಎನ್ .ಎಸ್ .ವಿಜಯ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಬ್ಯಾಂಕ್ ನ ಅಧ್ಯಕ್ಷ ಡಾ. ಎಂ.ಆರ್ .ವೆಂಕಟೇಶ್ ತಿಳಿಸಿದ್ದಾರೆ.
‘‘ಬ್ಯಾಂಕ್ ವತಿಯಿಂದ 1 ರಿಂದ 5ನೇ ತರಗತಿವರೆಗಿನ ಸರಕಾರಿ ಶಾಲಾ ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ ಮಾದರಿಯಲ್ಲೇ ‘ಐಸಿರಿ ಸಮೃದ್ಧಿ’ ಯೋಜನೆ ಪರಿಚಯಿಸಲಾಗುತ್ತಿದೆ. ಈ ಯೋಜನೆಯಡಿ ಪ್ರಾರಂಭಿಕವಾಗಿ ಪ್ರಾಯೋಜಕರಿಂದ ಪ್ರತಿ ವಿದ್ಯಾರ್ಥಿನಿಯ ಹೆಸರಿನಲ್ಲಿಖಾತೆ ತೆರೆದು 500 ರೂ. ಠೇವಣಿ ಇಡಲಾಗುತ್ತದೆ. ಆನಂತರ ಆಯಾ ವಿದ್ಯಾರ್ಥಿಗಳ ಪೋಷಕರು ಖಾತೆ ಮುಂದುವರಿಸಲಿದ್ದಾರೆ. ಈ ಖಾತೆಗಳಿಗೆ ಶೇ.8ರಂತೆ ಬಡ್ಡಿ ನೀಡಲಾಗುವುದು. ಈ ಖಾತೆಗಳಲ್ಲಿಸತತ 5 ವರ್ಷ ವಹಿವಾಟು ನಡೆಸಿದರೆ, ಆ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ಜಾಮೀನು ಇಲ್ಲದೆ 5 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ. ಯುವಕರಿಗಾಗಿ ಶೂನ್ಯ ಮೊತ್ತದ ಉಳಿತಾಯ ಖಾತೆ ಸೌಲಭ್ಯ ನೀಡಲಾಗುತ್ತಿದೆ. ಜತೆಗೆ ಎಟಿಎಂ ಕಾರ್ಡ್ ಕೂಡ ನೀಡಲಾಗುವುದು, ’’ ಎಂದು ಹೇಳಿದ್ದಾರೆ.
‘‘ನ.20ರಂದು ಸಂಜೆ 5.30ಕ್ಕೆ ಎನ್ .ಆರ್ .ಕಾಲೊನಿಯ ಎಪಿಎಸ್ ಕಾಲೇಜಿನಲ್ಲಿಅಭಿಯಾನದ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಶಾಸಕ ಎಲ್ .ಎ.ರವಿಸುಬ್ರಮಣ್ಯ, ಸಂಸದ ತೇಜಸ್ವಿ ಸೂರ್ಯ, ಬಿಬಿಎಂಪಿ ಮಾಜಿ ಸದಸ್ಯ ಸಂಗಾತಿ ವೆಂಕಟೇಶ್ ಪಾಲ್ಗೊಳ್ಳಲಿದ್ದಾರೆ ಎಂದು ಎಂ.ಆರ್ .ವೆಂಕಟೇಶ್ ತಿಳಿಸಿದ್ದಾರೆ.

