ಹಾನಗಲ್ಲ: ಯಾರದೋ ಹಿತಾಸಕ್ತಿಗೆ ದಲಿತರನ್ನು ಬಳಸಿಕೊಂಡು ಜಾತಿ ನಿಂದನೆ ಪ್ರಕರಣಕ್ಕೆ ಅವಕಾಶ ಮಾಡುವ ಮೂಲಕ ಇಡೀ ಹಿಂದುಳಿದ ವರ್ಗಗಳ ಮೇಲೆ ಜನರು ದೂಷಣೆ ಮಾಡುವಂತಾಗಬಾರದು. ಯಾರದೋ ಹಿತಾಸಕ್ತಿಗೆ ದಲಿತ ಸಮುದಾಯದ ಮೇಲೆ ಸಲ್ಲದ ಮಾತುಗಳು ಬರುವಂತಾಗಬಾರದು ಎಂದು ದಲಿತ ಮುಖಂಡ ರಾಮು ಯಳ್ಳೂರ ಹೇಳಿದರು.
ಶುಕ್ರವಾರ ಇಲ್ಲಿಸುದ್ದಿಗೋಷ್ಠಿ ನಡೆಸಿದ ಅವರು, ‘‘ಶತಮಾನಗಳಿಂದ ಈ ದೇಶದಲ್ಲಿಎಲ್ಲರೂ ಅಣ್ಣ ತಮ್ಮಂದಿರಂತೆ ಬಾಳಿ ಬದುಕಿದ್ದೇವೆ. ದಲಿತರ ಮೇಲೆ ದೌರ್ಜನ್ಯ ನಡೆದರೆ ಅದಕ್ಕೆ ಜಾತಿ ನಿಂದನೆ ಪ್ರಕರಣ ದಾಖಲಿಸಲು ಕಾನೂನಿನಲ್ಲಿಅವಕಾಶ ಮಾಡಿಕೊಟ್ಟಿದೆ. ಇತ್ತೀಚಿನ ದಿನಗಳಲ್ಲಿಕೆಲವರು ತಮ್ಮ ಹಿತಾಸಕ್ತಿಗಾಗಿ ದಲಿತರನ್ನು ಇತರರ ಮೇಲೆ ಸುಳ್ಳು ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸಲು ಪ್ರಚೋದಿಸಿ ಬಳಸಿಕೊಳ್ಳಲು ಮುಂದಾಗುತ್ತಾರೆ. ಇದು ಸರಿ ಅಲ್ಲ. ಇದರಿಂದ ಕಾನೂನಿನ ದುರುಪಯೋಗವಾಗದಂತಾಗುತ್ತದೆ’’ ಎಂದು ಅಭಿಪ್ರಾಯಪಟ್ಟರು.
‘‘ನಿಜವಾಗಿಯೂ ದಲಿತರ ಮೇಲೆ ಜಾತಿ ನಿಂದನೆ ಮತ್ತು ದೌರ್ಜನ್ಯ ಪ್ರಕರಣಗಳು ನಡೆದರೆ ಖಂಡಿತ ಎಲ್ಲರೂ ಒಟ್ಟಾಗಿ ನ್ಯಾಯಕ್ಕಾಗಿ ಹೋರಾಡೋಣ. ಅದಕ್ಕೆ ನಾನು ಸಹ ಸಿದ್ಧ. ಆದರೆ ಬೇರೆ ಬೇರೆ ಕಾರಣಕ್ಕೆ ನಡೆದ ಘಟನೆಗಳನ್ನು ಜಾತಿ ನಿಂದನೆ ಎಂದು ಬಿಂಬಿಸಿ ಪ್ರಕರಣ ದಾಖಲಿಸುವಂತಹ ಯೋಚನೆಯಿಂದ ದೂರವಿರೋಣ. ಇದರಿಂದ ನಾವು ಎಲ್ಲರೊಂದಿಗೆ ಸೌಹಾರ್ದದಿಂದಿರಲು ಸಾಧ್ಯ’’ ಎಂದರು.
‘‘ನಿಜವಾಗಿಯೂ ದಲಿತ ಸಮುದಾಯಕ್ಕೆ ತೊಂದರೆ ಆಗಿದ್ದರೆ ಒಟ್ಟಾಗಿ ನ್ಯಾಯಕ್ಕಾಗಿ ಹೋರಾಡೋಣ. ಆದರೆ ಸುಳ್ಳು ಪ್ರಕರಣಗಳ ಮೂಲಕ ಯಾರಿಗೂ ತೊಂದರೆ ಕೊಡುವುದು ಬೇಡ. ನಾವೆಲ್ಲರು ಎಚ್ಚೆತ್ತುಕೊಂಡು ನಡೆಯೋಣ’’ ಎಂದು ರಾಮು ಯಳ್ಳೂರ ವಿನಂತಿಸಿದರು. ದಲಿತ ಮುಖಂಡರಾದ ಕಿರಣ ತಳವಾರ, ಸಂಜೀವಕುಮಾರ ನಾಯಕ, ನೀರಾ ಗಂಗೋಳಿ ಇದ್ದರು.
31ಎಚ್ ಜಿಎಲ್ 3

