ಸಂಘದ ಪ್ರಮುಖ ಆಕ್ಷೇಪಗಳಲ್ಲಿ ಒಂದು, 2016ರ ಮೊದಲು ನೇಮಕಗೊಂಡಿರುವ ಶಿಕ್ಷಕರಿಗೆ ಟಿಇಟಿ ಪರೀಕ್ಷೆಯಿಂದ ವಿನಾಯಿತಿ ನೀಡಬೇಕು. ಹಿಂದಿನಂತೆ ಅವರಿಗೆ ಈ ಪರೀಕ್ಷೆ ಕಡ್ಡಾಯ ಇರಬಾರದು. ಅಲ್ಲದೆ, ಸೇವಾನಿರತ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಗೆ ಆರ್ಥಿಕ ಸೇವಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದೆ.ಇನ್ನೊಂದು ಪ್ರಮುಖ ಬೇಡಿಕೆ ಏನೆಂದರೆ, 1ರಿಂದ 7ನೇ ತರಗತಿವರೆಗೆ ಬೋಧಿಸುತ್ತಿರುವ ಶಿಕ್ಷಕರಿಗೆ 6-7ನೇ ತರಗತಿಗಳ ಬದಲಾಗಿ 6-8ನೇ ತರಗತಿಗಳವರೆಗೆ ಬೋಧಿಸಲು ಅವಕಾಶ ನೀಡಬೇಕು. ಸೇವಾ ಹಿರಿತನ ಮತ್ತು ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ 6-8ನೇ ತರಗತಿಗಳಲ್ಲಿ ಖಾಲಿ ಇರುವ ಜಿ.ಪಿ.ಟಿ ಹುದ್ದೆಗಳಿಗೆ ನೇರ ನೇಮಕಾತಿ ಮತ್ತು ಮುಂಬಡ್ತಿ ಅನುಪಾತವನ್ನು 50:50ಕ್ಕೆ ಹೆಚ್ಚಿಸಬೇಕು. ಇದರಿಂದ ಪಿ.ಎಸ್.ಟಿ ಪದವಿ ಶಿಕ್ಷಕರಿಗೆ ಹಂತ ಹಂತವಾಗಿ ಉನ್ನತ ಹುದ್ದೆಗಳಿಗೆ ಮುಂಬಡ್ತಿ ಸಿಗುತ್ತದೆ.
ಮುಂಬಡ್ತಿ ಪಡೆದ ಜಿ.ಪಿ.ಟಿ ವೃಂದದಲ್ಲಿ ಶಿಕ್ಷಕರಿಗೆ ಕನಿಷ್ಠ 2 ವರ್ಷಗಳ ಸೇವಾ ಅವಧಿ ನಿಗದಿಪಡಿಸಿ, ನಂತರ ಪ್ರೌಢಶಾಲಾ ವೃಂದಕ್ಕೆ ಅರ್ಹರಿಗೆ ಮುಂಬಡ್ತಿ ನೀಡಬೇಕು. ಪ್ರಾಥಮಿಕ ಶಾಲಾ ಪಿಎಸ್‌ಟಿ ಶಿಕ್ಷಕರನ್ನು ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರ ಹುದ್ದೆಗಳಿಗೆ ಮುಂಬಡ್ತಿ ನೀಡಬೇಕು.
ಇನ್ನು, ಪ್ರಾಥಮಿಕ ಶಾಲಾ ಶಿಕ್ಷಕರು ಎನ್‌ಸಿಟಿಇ ಮಾರ್ಗಸೂಚಿ ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಟಿಇಟಿ ಪರೀಕ್ಷೆಯಿಂದ ವಿನಾಯಿತಿ ಪಡೆಯಬೇಕು. ಹಾಲಿ ಸೇವೆಯಲ್ಲಿರುವ ಶಿಕ್ಷಕರನ್ನು ಟಿಇಟಿ ಪರೀಕ್ಷೆಯಿಂದ ವಿನಾಯಿತಿ ನೀಡುವುದರ ಜೊತೆಗೆ, ಸೇವೆಯಿಂದ ವಜಾಗೊಳಿಸುವ ಕ್ರಮಗಳಿಂದಲೂ ರಕ್ಷಣೆ ನೀಡಬೇಕು ಎಂದು ಶಿಕ್ಷಣ ಇಲಾಖೆಗೆ ಮನವಿ ಮಾಡಿದೆ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಘವು ಮನವಿ ಮಾಡಿದೆ.

