ನಿರಾಮಯ ಸೊಸೈಟಿಯ ಸಮುದಾಯ ಉಪಶಮನ ಆರೈಕೆ ಕೇಂದ್ರಕ್ಕೆ ಚಾಲನೆ
ವಿಕ ಸುದ್ದಿಲೋಕ ಕುಂದಾಪುರ
ಸಾಮಾಜಿಕ ಬದ್ದತೆ ಹೊಂದಿರುವ ವಂಡ್ಸೆ ಗ್ರಾಮದ ನಿರಾಮಯ ಸೊಸೈಟಿಯ ಸೇವೆ ರಾಜ್ಯದ ಇತರ ಪಂಚಾಯಿತಿಗಳಿಗೂ ಮಾದರಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು, ಉಡುಪಿ ಜಿಲ್ಲಾಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಶುಕ್ರವಾರ ಮಧ್ಯಾಹ್ನ ಕರ್ನಾಟಕದಲ್ಲಿಪ್ರಥಮ ಬಾರಿಗೆ ವಂಡ್ಸೆ ಕ್ಲಸ್ಟರ್ ವ್ಯಾಪ್ತಿಯ ವಂಡ್ಸೆ, ಚಿತ್ತೂರು, ಇಡೂರು-ಕುಂಜ್ಞಾಡಿ, ಆಲೂರು, ಹಕ್ಲಾಡಿ, ಹೆಮ್ಮಾಡಿ ಮತ್ತು ಕೆರಾಡಿ ಗ್ರಾಮ ಪಂಚಾಯಿತಿ ಒಂದುಗೂಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ‘ನಿರಾಮಯ ಸೊಸೈಟಿ’ ಮೂಲಕ ಅನುಷ್ಠಾನಗೊಳಿಸಿರುವ ಸಮುದಾಯ ಉಪ ಶಮನ ಆರೈಕೆ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ನಿರಾಮಯ ಸೊಸೈಟಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆರ್ಹರು. ಮುಂದಿನ ವರ್ಷಕ್ಕೆ ಅವರಿಗೆ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ ಎಂಬುದೇ ನನ್ನ ಆಶಯ. ಈ ಸೇವೆ ನಿರಂತರವಾಗಿ ನಡೆಯಲಿ, ಅಧಿಕಾರ ಶಾಶ್ವತ ಅಲ್ಲ, ನಾವು ಮಾಡುವ ಕೆಲಸ ಕಾರ್ಯಗಳು ಶಾಶ್ವತ ಎಂದು ಅವರು ಹೇಳಿದರು.
ವಂಡ್ಸೆ ಗ್ರಾಮ ಪಂಚಾಯತಿ ಕಾರ್ಯವನ್ನು ಬೇರೆ ಗ್ರಾಮ ಪಂಚಾಯಿತಿಗಳು ಬಂದು ನೋಡಬೇಕು. ನಮ್ಮ ಬೆಳಗಾವಿ ಗ್ರಾಮೀಣ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯರನ್ನು ಇಲ್ಲಿಗೆ ಕಳುಹಿಸುವೆ. ಈ ಮಾದರಿ ನಮ್ಮೂರಲ್ಲೂಆಗಬೇಕು ಎಂಬುದೆ ನನ್ನ ಆಶಯವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಜಿಲ್ಲಾಧಿಕಾರಿ ಟಿ.ಕೆ. ಸ್ವರೂಪ, ಜಿಲ್ಲಾಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್ , ನಿರಾಮಯ ಸೊಸೈಟಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ವಂಡ್ಸೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಗೀತಾ ಅವಿನಾಶ್ , ಕೆರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುದರ್ಶನ ಶೆಟ್ಟಿ, ದಾನಿ ಕೃಷ್ಣಮೂರ್ತಿ ಮಂಜ, ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಮುನಿಯಾಲು ಉದಯಕುಮಾರ ಶೆಟ್ಟಿ, ಸ್ಥಳೀಯರಾದ ಡಾ.ರಾಜೇಶ್ ಬಾಯರಿ, ಡಾ.ಅತುಲ್ ಕುಮಾರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪೋಟೊ//31ಕೆ-ವಿಎನ್ ಡಿ//

