ವಿಕ ಸುದ್ದಿಲೋಕ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣ ದ ತನಿಖೆಗೆ ಕಲಬುರಗಿ ಹೈಕೋರ್ಟ್ ಪೀಠ ಬುಧವಾರ ತಾತ್ಕಾಲಿಕ ತಡೆ ನೀಡಿದೆ. ಈ ಪ್ರಕರಣದ ಸಂಬಂಧ ಮಲ್ಲಿಕಾರ್ಜುನ ಮುತ್ಯಾ ಹಾಗೂ ಸಂತ್ರಸ್ತ ಬಾಲಕಿಯ ಕಡೆಯವರು ಸೇರಿ ಪೋಕ್ಸೊ ಪ್ರಕರಣ ರದ್ದುಪಡಿಸಲು ಕಾಂಪ್ರೊಮೈಜ್ ಪಿಟಿಷನ್ ಸಲ್ಲಿಕೆ ಮಾಡಿದ್ದರು ಎಂದು ಮೂಲಗಳು ಖಚಿತಪಡಿಸಿವೆ. ಈ ಹಿನ್ನೆಲೆ ಪ್ರಕರಣದ ತನಿಖೆಗೆ ತಾತ್ಕಾಲಿಕ ತಡೆ ನೀಡಿರುವ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಮಾ.23ಕ್ಕೆ ಮುಂದೂಡಿದೆ. ಪೋಕ್ಸೊ ಪ್ರಕರಣ ದೂರುದಾರ ಶಹಾಪುರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಆಗಿದ್ದಾರೆ. ಈ ಬಗ್ಗೆ ತಕರಾರು ಅರ್ಜಿ ಸಲ್ಲಿಸಲು ಪೊಲೀಸ್ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ.

