ಹಬ್ಬಲಲೀಡಡ್

Contributed byvidyarashmi.bhat@timesgroup.com|Vijaya Karnataka

ಯುಗಾದಿ ಹಬ್ಬದ ಆಚರಣೆ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಹಿಂದಿನ ಕಾಲದ ಹಬ್ಬದ ಸಂಭ್ರಮ, ಹಿರಿಯರೊಂದಿಗೆ ಬೆರೆಯುವ ಅವಕಾಶಗಳು ಈಗ ಕಡಿಮೆಯಾಗಿವೆ. ತಂತ್ರಜ್ಞಾನದ ಪ್ರಭಾವದಿಂದ ಹಬ್ಬದ ಆಚರಣೆಗಳು ಡಿಜಿಟಲ್ ರೂಪ ಪಡೆದುಕೊಂಡಿವೆ. ಹೊಸ ಪೀಳಿಗೆಯು ಹಬ್ಬಗಳಿಗೆ ಹೊಸತನವನ್ನು ತರುತ್ತಿದೆ. ಬದಲಾದ ಕಾಲಕ್ಕೆ ತಕ್ಕಂತೆ ಹಬ್ಬಗಳನ್ನು ಆಚರಿಸುವಲ್ಲಿಯೇ ನಿಜವಾದ ಸಮನ್ವಯವಿದೆ. ಹಬ್ಬದ ಮಹತ್ವವನ್ನು ಅರಿತು, ಅನುಭವಿಸುತ್ತಾ ಬದುಕುವುದೇ ಅರ್ಥಪೂರ್ಣ.

new forms of yugadi the new excellence of festival celebrations

ಪ್ರತಿಬಾರಿಯೂ ಹೊಸದೇ ಯುಗಾದಿ

---------

ಇಂಟ್ರೊ:

ತಂತ್ರಜ್ಞಾನದ ಬೆರಗು ಬದುಕನ್ನು ಬದಲಿಸಿದೆ. ಹಬ್ಬದಾರಚಣೆಯೂ ಅಂದಿಗೂ ಇಂದಿಗೂ ಭಿನ್ನವಾಗಿದೆ. ಆದರೂ ಯುಗಾದಿಯ ಸಡಗರ ಪ್ರತಿಬಾರಿಯೂ ನವನವೀನ. ಅದು ನಮ್ಮಲ್ಲಿತುಂಬುವ ಉತ್ಸಾಹವೂ ಸದಾ ನೂತನ.

--

ಶುಭಶ್ರೀ ಭಟ್ಟ

--

‘ಯುಗ ಯುಗಾದಿ ಕಳೆದರೂ.. ಹೊಸತು ಹೊಸತು ತರುತಿದೆ..’ ಯುಗಾದಿ ಹತ್ತಿರ ಬಂತೆಂದರೆ ಸಾಕು ಒಂದು ವಾರದಿಂದಲೇ ಈ ಹಾಡು ಮನಸ್ಸಿನೊಳಗೆ ಮಾರ್ದನಿಸುತ್ತದೆ. ಚೌತಿ ಹಬ್ಬ, ನವರಾತ್ರಿ, ದೀಪಾವಳಿಯ ತರಹ ಯಾವುದೇ ಆಡಂಬರವಿಲ್ಲದೆ, ಗೌಜಿ-ಗದ್ದಲಗಳ ಹಂಗಿಲ್ಲದೆ ಬರುವ ಸದ್ದಿಲ್ಲದ ಹಬ್ಬವೇ ಯುಗಾದಿ. ಯುಗಾದಿಗೆ ಒಂದು ವಾರವಿರುವಾಗಲೇ ಮನೆಯೆಲ್ಲತೊಳೆದು, ಬಳಿದು, ಅಂಗಳ ಸಾರಿಸಿ, ಮಾವಿನ ತೋರಣ ಕಟ್ಟಿ, ಮನೆಯ ಮುಂದೆ, ತುಳಸಿ ಕಟ್ಟೆಯ ಮುಂದೆಲ್ಲದೊಡ್ಡ ರಂಗವಲ್ಲಿಹಾಕುತ್ತ ವಾರಪೂರ್ತಿ ಮನಸು ಉಲ್ಲಸಿತವಾಗಿರುತ್ತದೆ.

ಎಳವೆಯಲ್ಲಿಯ ಹಬ್ಬದಾಚರಣೆಯೇ ಚೆಂದ. ಹಬ್ಬದ ದಿನ ಬೆಳಿಗ್ಗೆ ದೇಹದ್ದಷ್ಟೆ ಅಲ್ಲಮನಸಿನ ಕೊಳೆಯನ್ನೂ ತೆಗೆಯಬಲ್ಲಅಭ್ಯಂಜನ, ನಂತರದ ಪೂಜೆ, ಬೇವು-ಬೆಲ್ಲದುಂಡೆ ತಿಂದು ಬದುಕಿನಲ್ಲಿಸಿಹಿ-ಕಹಿ ಎಲ್ಲವನ್ನೂ ಸಮನಾಗಿ ಸ್ವೀಕರಿಸುವ ಮನಸ್ಥಿತಿ, ಬಿಸಿಬಿಸಿ ಹೋಳಿಗೆಯೂಟ ಸವಿದು ಸಂಭ್ರಮಿಸುತ್ತಿದ್ದೆವು. ಹಿರಿಯರ ಜೊತೆಗಿನ ಆ ಭಾಂಧವ್ಯ, ಕಿರಿಯರ ಜೊತೆಗಿನ ಅಕ್ಕರೆ ಎಲ್ಲವೂ ಮೀಳಿತವಾಗಿ ಅಲ್ಲೊಂದು ಸಮನ್ವಯದ ಬಾಳ್ವೆಯಿತ್ತು.

ಆದರೆ ಈಗ ಮನೆಗಳು ಅಪಾಟ್ರ್ಮೆಂಟ್ ಗಳಾಗಿ ಬದಲಾಗಿವೆ. ಊರಿಗೂರೇ ಮುಕ್ತವಾಗಿ ಸಂಭ್ರಮಿಸುತ್ತಿದ್ದ ಹಬ್ಬಗಳೀಗ ಮುಚ್ಚಿದ ಬಾಗಿಲುಗಳ ನಡುವೆ ನಡೆಯುವಂತಾಗಿದೆ. ಹಿರಿಯರನ್ನು, ಆಪ್ತರನ್ನು ಭೇಟಿಯಾಗಿ ಶುಭಕೋರಿ ಆಶೀರ್ವಾದ ತೆಗೆದುಕೊಳ್ಳುತ್ತಿದ್ದ ನಾವುಗಳು ನಮ್ಮನ್ನು ನಾವು ಡಿಜಿಟಲೈಸ್ ಮಾಡಿಕೊಂಡು ರೀಲ್ಸ್ ಶೇರ್ ಮಾಡಿಕೊಂಡು, ಪೋಸ್ಟ್ ಹಾಕಿಕೊಂಡು ಕುಳಿತಿದ್ದೇವೆ. ಹೊಸ ವರುಷದಲ್ಲಿಹಳೆಯದನ್ನು ಹಿಂದೆ ಬಿಟ್ಟು, ಹೊಸತನ್ನು ಮಾಡುವ ಹುಮ್ಮಸ್ಸಿನ ಬದಲು ಹಳೆಯ ದ್ವೇಷ-ಜಗಳಗಳಿಗೆ ಬಣ್ಣ ಮೆತ್ತುತ್ತಿದ್ದೇವೆ. ಹಬ್ಬದ ಮಹತ್ವವನ್ನೇ ಅರಿಯದೇ ಹಬ್ಬವನ್ನು ಸಾಮಾಜಿಕ ಜಾಲತಾಣಗಳಲ್ಲಿವೈಭವೀಕರಿಸುವುದಕಷ್ಟೇ ಮೀಸಲಿಡುವ ಚಟವೂ ಶುರುವಾಗಿದೆ. ಸಂಪ್ರದಾಯ-ಆಚರಣೆಗಳ ಗ್ರಂಥಾಲಯವಾಗಿದ್ದ ಹಿರಿಯರನ್ನು ನಿರ್ಲಕ್ಷಿಸಿ ಮಾಹಿತಿಗಾಗಿ ‘ಗೂಗಲ್ /ಎಐ’ ಅವಲಂಬಿಸಿದ್ದೇವೆ. ಒಂದೊಮ್ಮೆ ಅಲ್ಲಿಪೂರಕವಾದ ಎಲ್ಲಮಾಹಿತಿಗಳು ಸಿಕ್ಕರೂ ಅದರ ಭಾವವು ಮನಸಲ್ಲಿಅಚ್ಚೊತ್ತದೆ ಹೊಸ ಹೊಳಹುಗಳನ್ನು ಹುಡುಕುತ್ತಲೇ ಕಳೆದು ಹೋಗಿದ್ದೇವೆ. ಆದರೂ ಹೊಸ ಪೀಳಿಗೆಯಿಂದ ಸಂಸ್ಕೃತಿಯೇ ನಶಿಸಿ ಹೋಗುತ್ತಿದೆ ಎಂಬೆಲ್ಲಬೊಬ್ಬೆಗೆ ಅರ್ಥವಿಲ್ಲ. ಎಲ್ಲವೂ ಹಿಂದಿದ್ದಂತೆ ಇರಬೇಕಂತಲೂ ಇಲ್ಲ. ಬದಲಾವಣೆಯೇ ಜಗದ ನಿಯಮ ಕೂಡ.

ಬದಲಾದವರು ನಾವು

ಹೊಸ ಪೀಳಿಗೆಯವರು ಕೂಡ ಯುಗಾದಿ ಮುಂತಾದ ಹಬ್ಬಕ್ಕೆ ಹೊಸ ಸೃಜನಶೀಲತೆಯ ಮೆರಗನ್ನು ತರುತ್ತಿದ್ದಾರೆ. ಮನಸೂರೆಗೊಳ್ಳುವ ವಿವಿಧ ಬಗೆಯ ಅಲಂಕಾರ, ಆಕರ್ಷಕವಾದ ಮನಮುಟ್ಟುವಂತಹ ಹಬ್ಬದ ಸಂದೇಶಗಳು, ಎಲ್ಲರನ್ನೂ ಒಳಗೊಂಡು ಹಬ್ಬವನ್ನು ಆಚರಿಸುವ ಡಿಜಿಟಲ್ ಸಾಮರ್ಥ್ಯ, ಕ್ಷಣಾರ್ಧದಲ್ಲಿಪ್ರಪಂಚದ ಯಾವುದೇ ಭಾಗವನ್ನು ತಲುಪಬಲ್ಲಶುಭಾಶಯಗಳು, ಇರುವಲ್ಲಿಯೇ ವಿಡಿಯೋ ಕಾಲ್ ಮುಖಾಂತರ ಒಗ್ಗಟ್ಟಾಗಿರುವ ಕುಟುಂಬ ಇದೆಲ್ಲವೂ ಹೊಸ ಯುಗದ ಸಕಾರಾತ್ಮಕತೆಗಳು. ಪ್ರತೀ ಹಬ್ಬವೂ ಹೊಸ ಸಂದೇಶಗಳನ್ನು ಹೊತ್ತು ತರುವಂತೆ ಪ್ರತೀ ಯುಗವೂ ಹೊಸತನ್ನು ತರುತ್ತದೆ. ಇಲ್ಲಿಬದಲಾಗಿದ್ದು ಯುಗಾದಿಯೂ ಅಲ್ಲ, ಅದರ ಸಂಭ್ರವೂ ಅಲ್ಲ, ಬದಲಾಗಿದ್ದು ನಾವು ಮಾತ್ರ.

ಬೇವು-ಬೆಲ್ಲದ ಸವಿ ನೋಟಿಫಿಕೇಶನ್ಸ್ ಗಳ ನಡುವೆ ಕಳೆದುಹೋಗಿದೆ ಎನ್ನುವ ಪ್ರಶ್ನೆ ಇಲ್ಲಿಮುಖ್ಯವಲ್ಲ. ಆದರೆ ಹೊಸ ಕಾಲಕ್ಕೆ ನಮ್ಮನ್ನು ನಾವು ತೆರೆದುಕೊಂಡು, ಹಳೆ ಮೌಲ್ಯಗಳನ್ನು ಮರೆಯದಂತೆ ಹೇಗೆ ಹಬ್ಬವನ್ನು ಆಚರಿಸುತ್ತೇವೆ ಎಂಬುದರಲ್ಲಿನಿಜವಾದ ಸಮನ್ವಯವಿದೆ. ಹಬ್ಬದ ಅಲಂಕಾರ ಮಾಡಿ ವೈಭವದ ರೀಲ್ಸ್ ಮಾಡುವುದರ ಜೊತೆಗೆ ಅದರ ಹಿಂದಿರುವ ಹಬ್ಬದ ಮಹತ್ವದ ಅರಿವಿರಬೇಕು. ಚೆಂದದ ಪೋಸ್ಟ್ ಮಾಡುವುದರ ಜೊತೆಗೆ ಹತ್ತಿರದವರಿಗೆ ಮಾಡುವ ಒಂದು ಪುಟ್ಟ ಕರೆಯ ಆಪ್ತತೆಯನ್ನು ಸವಿಯಬೇಕು. ಚೆಂದದ ಪೋಟೊ ತೆಗೆದುಕೊಂಡು ಸ್ಟೇಟಸ್ ಹಾಕುವುದರ ಜೊತೆ ಆ ಕ್ಷಣವನ್ನು ಆಸ್ವಾದಿಸಬೇಕಿದೆ. ಹಬ್ಬಗಳನ್ನು ಕರ್ತವ್ಯ ಎಂಬಂತೆ ಮಾಡಿ ಮುಗಿಸುವುದರ ಬದಲು ಅದನ್ನು ಅನುಭವಿಸುತ್ತಾ ಬದುಕಲೂ ಕಲಿತರೆ ಹೊಸ ಹಬ್ಬವೂ, ಹೊಸತನವೂ ಅರ್ಥಪೂರ್ಣ.