ವೈಭವೋಪೇತ ವಸಂತೋತ್ಸವದ ನಡುವಿನ ಪರ್ವರಾಜ ಯುಗಾದಿ

Contributed byHarsha Vardhana|Vijaya Karnataka

ಯುಗಾದಿ ಹಬ್ಬದ ವೈಭವ ಮತ್ತು ಅದರ ಪ್ರಾಚೀನ ಪರಂಪರೆಯ ಬಗ್ಗೆ ಲೇಖನ ತಿಳಿಸುತ್ತದೆ. ವಸಂತ ಋುತುವಿನ ಆಗಮನ, ಹಬ್ಬಗಳ ಆಚರಣೆ, ಸಂಪ್ರದಾಯಗಳು, ಮತ್ತು ಆಧುನಿಕತೆಯ ಪ್ರಭಾವದ ಬಗ್ಗೆ ವಿವರಿಸಲಾಗಿದೆ. ಹಬ್ಬಗಳ ಆಚರಣೆಯ ಮಹತ್ವವನ್ನು ತಿಳಿಸಿ, ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರಲಾಗಿದೆ.

vasantotsava and the tradition of yugadi the festival of kings
ವಸಂತೋತ್ಸವ : ಪ್ರಾಚೀನ ಪರಂಪರೆಯ ವೈಭವ ಮತ್ತು ಯುಗಾದಿಯ ಮಹತ್ವ

ವಸಂತೋತ್ಸವವು ಭಾರತದ ಅತ್ಯಂತ ಪುರಾತನ ಹಬ್ಬಗಳಲ್ಲಿ ಒಂದಾಗಿದೆ. ವೇದ, ರಾಮಾಯಣ, ಮಹಾಭಾರತ, ಪುರಾಣಗಳಲ್ಲದೆ, ಕಾವ್ಯ, ಸಂಗೀತ, ನೃತ್ಯ, ನಾಟಕ, ಚಿತ್ರಕಲೆ, ಶಿಲ್ಪಕಲೆಗಳಲ್ಲೂ ಇದರ ವೈಭವಯುತವಾದ ಉಲ್ಲೇಖವಿದೆ. ಮಾಘ ಮಾಸದ ವಸಂತ ಪಂಚಮಿಯಂದು ಸರಸ್ವತಿ ಪೂಜೆಯೊಂದಿಗೆ ವಸಂತ ಋತುವನ್ನು ಸ್ವಾಗತಿಸಲಾಗುತ್ತದೆ. ಅಶೋಕ ವೃಕ್ಷದ ಕೆಂಪು ಚಿಗುರು ವಸಂತದ ಆಗಮನವನ್ನು ಸೂಚಿಸುತ್ತದೆ. ವೃಕ್ಷಗಳಿಗೆ ದೋಹದ ವಿಧಿಗಳನ್ನು ಮಾಡುವುದು, ಅಂದರೆ ತರುಣಿಯರು ಅಶೋಕ ವೃಕ್ಷವನ್ನು ಒದೆಯುವುದು, ಕುರವಕ ವೃಕ್ಷವನ್ನು ಆಲಿಂಗಿಸುವುದು, ಬಕುಲ ವೃಕ್ಷಕ್ಕೆ ಪಾನೀಯ ನೀಡುವುದು, ನಮೇರು ವೃಕ್ಷಕ್ಕೆ ನಗುವುದು, ಪ್ರಿಯಾಲ ವೃಕ್ಷಕ್ಕೆ ಹಾಡುವುದು, ಸಿಂಧುವಾರ ವೃಕ್ಷಕ್ಕೆ ಉಸಿರು ಬಿಡುವುದು – ಇವೆಲ್ಲವೂ ಮರಗಳು ಚಿಗುರಲು ಪ್ರೇರೇಪಿಸುವ ಸಂಪ್ರದಾಯಗಳು. ವೃಕ್ಷಾಯುರ್ವೇದದಂತಹ ಶಾಸ್ತ್ರಗಳಲ್ಲೂ ಇವುಗಳ ಉಲ್ಲೇಖವಿರುವುದು, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಭಾವನಾತ್ಮಕ ಸಂಬಂಧವನ್ನು ತೋರಿಸುತ್ತದೆ. ವಸಂತದಲ್ಲಿ ಗಿಡಮರಗಳಲ್ಲಿ ಹೂ, ಚಿಗುರು, ಹಣ್ಣುಗಳು ಕಾಣಿಸಿಕೊಂಡು ಭೂಮಿ ನವವಧುವಿನಂತೆ ಕಂಗೊಳಿಸುತ್ತದೆ. ಮಾಘೋತ್ಸವ, ಫಾಲ್ಗುಣೋತ್ಸವಗಳು, ಶ್ರೀ ಪಂಚಮಿ, ರಥ ಸಪ್ತಮಿ, ಹೋಳಿ ಹುಣ್ಣಿಮೆಗಳು ವಸಂತೋತ್ಸವದ ಭಾಗಗಳಾಗಿವೆ.
ಯುಗಾದಿ , ಚೈತ್ರೋತ್ಸವವು ಚಾಂದ್ರಮಾನ ಪಂಚಾಂಗದ ಪ್ರಕಾರ ಹೊಸ ವರ್ಷದ ಆರಂಭ. ಹಳೆಯ ವರ್ಷದ ಅಂತ್ಯ ಮತ್ತು ಹೊಸ ವರ್ಷದ ಆರಂಭ ವಸಂತದಲ್ಲಿ ಆಗುವುದು ಸನಾತನ ಸಂಸ್ಕೃತಿಯ ಅರ್ಥಪೂರ್ಣ ಪದ್ಧತಿ. ಭವಿಷ್ಯ ಪುರಾಣದ ಪ್ರಕಾರ, ರಘು ಮಹಾರಾಜನ ಕಾಲದಲ್ಲಿ ಢೂಂಢಾ ಎಂಬ ರಾಕ್ಷಸಿಯನ್ನು ಸಂಹರಿಸಿದ ಸಂಭ್ರಮವನ್ನು ಯುಗಾದಿಯಂದು ಆಚರಿಸಲಾಗುತ್ತದೆ. ಯುಗಾದಿಯೊಂದಿಗೆ ವಸಂತ ನವರಾತ್ರಿ ಪ್ರಾರಂಭವಾಗುತ್ತದೆ. ಈ ಒಂಬತ್ತು ದಿನಗಳು ವಸಂತಾಚರಣೆಗಳ ವೈಭವದಿಂದ ಕೂಡಿರುತ್ತವೆ. ಹಿಂದಿನ ರಾಜರುಗಳು ಈ ವಾರ್ಷಿಕ ವಸಂತೋತ್ಸವಕ್ಕಾಗಿ ದೇವಾಲಯಗಳಲ್ಲಿ ಮತ್ತು ರಾಜಭವನಗಳಲ್ಲಿ ವಸಂತ ಮಂಟಪಗಳನ್ನು ಕಟ್ಟಿಸುತ್ತಿದ್ದರು. ಇಂದಿಗೂ ಪ್ರಾಚೀನ ದೇವಾಲಯಗಳಲ್ಲಿ ಇವುಗಳನ್ನು ಕಾಣಬಹುದು. ಊರಾದ್ಯಂತ ರಥೋತ್ಸವಗಳು, ಪಲ್ಲಕ್ಕಿ ಉತ್ಸವಗಳು, ತೆಪ್ಪೋತ್ಸವಗಳು, ಸಂಗೀತ, ನೃತ್ಯ, ಕ್ರೀಡಾ ವಿನೋದಗಳು ನಡೆಯುತ್ತವೆ. ಮದುವೆ, ಮುಂಜಿ, ಗೃಹಪ್ರವೇಶಗಳ ಸಡಗರ ಮನೆ ಮಾಡುತ್ತದೆ. ಮಕ್ಕಳಿಗಾಗಿ, ಮಹಿಳೆಯರಿಗಾಗಿ, ಯುವಕರಿಗಾಗಿ, ನವ ದಂಪತಿಗಳಿಗಾಗಿ ಅನೇಕ ಮನರಂಜನೆಗಳು ಏರ್ಪಡುತ್ತವೆ. ಮಾವಿನ ಕಾಲವಾದ್ದರಿಂದ ಮಾವಿನ ತಿನಿಸುಗಳು, ಪಾನಕಗಳು, ಉಪ್ಪಿನಕಾಯಿಗಳು ಮನೆ ಮನೆಯಲ್ಲೂ ಘಮಘಮಿಸುತ್ತವೆ.

ಯುಗಾದಿಯ ಆಚರಣೆಯಲ್ಲಿ ಪ್ರಮುಖವಾಗಿ ಸೂರ್ಯೋದಯದ ದರ್ಶನ, ಬ್ರಹ್ಮನಿಗೆ ಅಘ್ರ್ಯ ಮತ್ತು ಯವಿಷ್ಟಿ ಹೋಮ, ಕುಲದೇವರ ಪೂಜೆ, ಹಿರಿಯರಿಗೆ ನಮಸ್ಕಾರ, ಅಭ್ಯಂಗ ಸ್ನಾನ, ಹೊಸ ಬಟ್ಟೆ ಧರಿಸುವುದು, ಸಹಭೋಜನ ಇವೆಲ್ಲವೂ ಬೆಳಗಿನ ವಿಧಿಗಳು. ಸಂಜೆ ಪಂಚಾಂಗ ಶ್ರವಣದ ನಂತರ ಸಂಗೀತ, ನೃತ್ಯ, ನಾಟಕ, ಮೆರವಣಿಗೆಗಳಲ್ಲಿ ಪಾಲ್ಗೊಳ್ಳುವುದು ಕ್ರಮ. ಮಠ ಮಂದಿರಗಳಲ್ಲಿ ದೇವತಾಲಂಕಾರ, ಅನ್ನದಾನ, ಸಂಗೀತ, ನೃತ್ಯ, ಕಾವ್ಯ ಗೋಷ್ಠಿಗಳು ನಡೆಯುತ್ತವೆ. ಯುಗಾದಿಯನ್ನು ಗುಡಿ ಪಡ್ವಾ, ಬೈಸಾಕಿ, ಬಿಹು ಮುಂತಾದ ಹೆಸರುಗಳಿಂದ ಭಾರತದಾದ್ಯಂತ ಆಚರಿಸಲಾಗುತ್ತದೆ. ನಮ್ಮ ಚಾಂದ್ರಮಾನ ಮತ್ತು ಸೌರಮಾನ ಯುಗಾದಿಗಳು ಸೂರ್ಯ ಮತ್ತು ಚಂದ್ರರ ಗತಿಯನ್ನು ಆಧರಿಸಿವೆ. ಪ್ರಕೃತಿಯೇ ಹೂಗಳನ್ನು ಅರಳಿಸಿ, ಕೋಗಿಲೆಗಳನ್ನು ಕೂಗಿಸಿ, ಮನಸ್ಸಿನಲ್ಲಿ ಪ್ರೇಮವನ್ನು ತುಂಬಿ ಈ ವರ್ಷಾರಂಭವನ್ನು ಸ್ವಾಗತಿಸುತ್ತದೆ. ಕರ್ನಾಟಕದಲ್ಲಿ ಬೇವು-ಬೆಲ್ಲ ಸೇವನೆಯು ಜೀವನದ ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುವ ಸಂಕಲ್ಪವನ್ನು ಸೂಚಿಸುತ್ತದೆ. "ಜೀವನದ ಸುಖದುಃಖಗಳನ್ನು ಸಮಭಾವದಿಂದ ಸ್ವೀಕರಿಸುತ್ತೇನೆ" ಎಂದು ಹೇಳುತ್ತಾ ಬೇವು-ಬೆಲ್ಲವನ್ನು ಸೇವಿಸುತ್ತೇವೆ. ನಮ್ಮನ್ನು ಸೃಷ್ಟಿಸಿದ ಬ್ರಹ್ಮನಿಗೆ, ಸಲಹುವ ಸೂರ್ಯನಿಗೆ, ಹರಸುವ ಗುರುಹಿರಿಯರಿಗೆ ವಂದಿಸುತ್ತೇವೆ. ನಮ್ಮ ಸುಖಸಂತೋಷಗಳನ್ನು ಬಂಧುಮಿತ್ರರೊಂದಿಗೆ ಔತಣ, ಸಂಗೀತ, ನೃತ್ಯ, ವಿನೋದಗಳ ಮೂಲಕ ಹಂಚಿಕೊಳ್ಳುತ್ತೇವೆ.

ವಸಂತ ನವರಾತ್ರಿಯ ಪ್ರತಿ ದಿನವೂ ಶಕ್ತಿದೇವತೆಯ ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ. ಮನ್ಮಥನಾರಾಯಣನನ್ನೂ ಪೂಜಿಸುವ ಕಾಲವಿದು. ಯವಚತುರ್ಥಿಯು ಪ್ರಾಚೀನ ಕಾಲದಿಂದಲೂ ಪ್ರಸಿದ್ಧವಾಗಿದೆ. ಹಳದಿ ಪರಾಗದಿಂದ ಕೂಡಿದ ಯವಕುಸುಮಗಳನ್ನು ಮತ್ತು ಕಡ್ಡಿಗಳನ್ನು ಪರಸ್ಪರರ ಮೇಲೆ ಎರಚಿ ಸಂಭ್ರಮಿಸುವುದು ಮೊದಲಾಗುತ್ತದೆ. ಶ್ರೀ ಪಂಚಮಿಯಂದು ದೇವಿಯನ್ನು ಉಯ್ಯಾಲೆಯಲ್ಲಿಟ್ಟು ಪೂಜಿಸಿ, ಮಹಿಳೆಯರು ಉಯ್ಯಾಲೆ ಆಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಅಶೋಕಾಷ್ಟಮಿಯಂದು ಅಶೋಕದ ಕೆಂಪು ಚಿಗುರುಗಳನ್ನು ಸಂಗ್ರಹಿಸಿ, ಕೆಂಪು ಕೈ ಚಿಹ್ನೆಗಳನ್ನು ಮರಗಳ ಮತ್ತು ಮನೆಗಳ ಗೋಡೆಗಳ ಮೇಲೆ ಅಚ್ಚೊತ್ತುವುದು ವಿಶೇಷ. ಚೈತ್ರದ ದಶಮಿಯಂದು 'ಪುಷ್ಪಾವತಂಸಿಕಾ' ಎಂಬ ಆಚರಣೆಯಿದೆ. ಮಹಿಳೆಯರು ಒಟ್ಟಾಗಿ ಹಾಡುತ್ತ, ನಲಿಯುತ್ತ ತೋಟ-ವನಗಳಲ್ಲಿ ಸಂಚರಿಸಿ ಹೂಗಳನ್ನು ಸಂಗ್ರಹಿಸಿ ಮಾಲೆಗಳನ್ನು ಹೆಣೆದು ಪರಸ್ಪರರಿಗೆ ಮುಡಿಸಿಕೊಂಡು ಸಹಭೋಜನ ಮಾಡುತ್ತಾರೆ. ಇದು ವಸಂತ ನವರಾತ್ರಿಯ ಸಂಪನ್ನತೆಯ ಪ್ರತೀಕ. ಕೆಲವರು ಈ ದಿನವನ್ನು 'ಯಮದಶಮಿ' ಎಂದು ಯಮಧರ್ಮರಾಯನಿಗೆ ಅಘ್ರ್ಯಪೂಜೆಗಳನ್ನು ಸಲ್ಲಿಸಿ ನಮಸ್ಕರಿಸುತ್ತಾರೆ. ಚಿತ್ರಪೂರ್ಣಿಮೆ ಇವೆಲ್ಲಕ್ಕೂ ಮುಕುಟಪ್ರಾಯ. ಈ ದಿನದಂದು ಭರ್ಜರಿ ದೇವತಾ ರಥೋತ್ಸವಗಳು, ಪಲ್ಲಕ್ಕಿ ಉತ್ಸವಗಳು, ಸಂಗೀತೋತ್ಸವಗಳು, ಮದುವೆ, ಮುಂಜಿ, ಗೃಹಪ್ರವೇಶಗಳು ನಡೆಯುತ್ತವೆ. ಹಿಂದೆ ಈ ಕಾಲದಲ್ಲೇ ವನಗಮನ, ಜಲಕ್ರೀಡೆಗಳು ನಡೆಯುತ್ತಿದ್ದವು. ಯುಗಾದಿಯು ಈ ಎಲ್ಲ ಸಂಭ್ರಮಗಳ ಮುಕುಟಪ್ರಾಯವಾಗಿದೆ. ಈ ನಡುವೆ ಚೈತ್ರದಲ್ಲಿ ಮಧೂತ್ಸವ, ಮದನೋತ್ಸವಗಳೂ ನಡೆಯುತ್ತವೆ. ಅನಂಗತ್ರಯೋದಶಿಯು ಮನ್ಮಥನ ಪೂಜೆಗೆ ಮೀಸಲು. ಶಿವನ ಕೋಪಾಗ್ನಿಗೆ ಸುಟ್ಟುಹೋದ ಮನ್ಮಥನು ಪುನಃ ಉಜ್ಜೀವನಗೊಂಡು ಮನಸ್ಸಿನಲ್ಲಿ ನೆಲೆಸಿದ ದಿನವಂತೆ. ಮನ್ಮಥನು ನಮ್ಮ ದಾಂಪತ್ಯ ಸಂಬಂಧಗಳನ್ನು ಹರಸಲಿ ಎಂದು ಪೂಜಿಸಲಾಗುತ್ತದೆ. ವಸಂತದ ರಾಮನವಮಿಯು ಇಂದಿಗೂ ಪ್ರಸಿದ್ಧ ಆಚರಣೆ. ಮಧ್ಯಾಹ್ನದ ಬಿಸಿಲಲ್ಲಿ ಹುಟ್ಟಿದ ರಾಮನನ್ನು ಸಂಭ್ರಮಿಸಲು ನಾವು ತಂಪು ಪಾನಕ, ಕೋಸಂಬರಿ, ಮಜ್ಜಿಗೆಗಳನ್ನು ಹಂಚಿಕೊಂಡು ಆಸ್ವಾದಿಸುತ್ತೇವೆ. ವಸಂತದ ಸಂಗೀತ ನೃತ್ಯೋತ್ಸವಗಳು ಇತ್ತೀಚೆಗೆ 'ರಾಮೋತ್ಸವ' ಎಂದೇ ಪ್ರಸಿದ್ಧವಾಗಿವೆ.

ವಸಂತೋತ್ಸವದ ಅಂಗವಾಗಿ ಪೂಜೆ, ರಥೋತ್ಸವಾದಿಗಳು ಇಂದಿಗೂ ಸಾಕಷ್ಟು ಮುಂದುವರಿದಿವೆ. ಆದರೆ ಈ ಮುಗ್ಧ, ಸುಂದರ ಸಂಭ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ಉಳಿದಿದ್ದರೂ, ಮೆಕಾಲೆ ಶಿಕ್ಷಣದ ಪ್ರಭಾವದಿಂದಾಗಿ ನಗರವಾಸಿಗಳಲ್ಲಿ ಕಡಿಮೆಯಾಗಿವೆ. ಇಷ್ಟೆಲ್ಲಾ ಆಸಕ್ತಿದಾಯಕ ಆಚರಣೆಗಳು ಇರುವುದು ಅನೇಕರಿಗೆ ಗೊತ್ತಿಲ್ಲ. ನಮ್ಮ ಸಾಂಸ್ಕೃತಿಕ ಸ್ಮರಣೆಯನ್ನು ಮೆಕಾಲೆ ಶಿಕ್ಷಣ ಅಳಿಸಿಹಾಕಿದೆ. ಸಾವಿರಾರು ವರ್ಷಗಳಿಂದ ಜಗತ್ತಿನ ಬಹುತೇಕ ಜನಾಂಗಗಳು ವಸಂತ ಕಾಲದಲ್ಲೇ ವರ್ಷಾರಂಭವನ್ನು ಆಚರಿಸುತ್ತಿದ್ದವು. ತಮ್ಮ ಮತವನ್ನು ಹೇರಲು, ಮತಾಂಧ ಗ್ರೆಗೋರಿಯನ್, ಚಳಿಗಾಲದ ಜನವರಿಯ ಮಧ್ಯರಾತ್ರಿಯ ನ್ಯೂ-ಇಯರ್ ಅನ್ನು ಪ್ರಾರಂಭಿಸಿದನು. ವೈಶ್ವಿಕ ವ್ಯವಹಾರಕ್ಕಾಗಿ ಇದು ಇರಲಿ. ಆದರೆ ಈ ಕ್ಯಾಲೆಂಡರ್ ನಮ್ಮ ಪ್ರಕೃತಿಗೆ ಅನುಗುಣವಾಗಿಲ್ಲ, ನಮ್ಮ ಸಾಂಸ್ಕೃತಿಕ ಸಂಬಂಧವನ್ನೂ ಹೊಂದಿಲ್ಲ. ಆಕ್ರಮಣಕಾರರ ದೌರ್ಜನ್ಯದ ಗುರುತಾಗಿ ನಮ್ಮನ್ನು ಅವಮಾನಿಸುತ್ತದೆ.

ಹಬ್ಬಗಳ ರಾಜ ಯುಗಾದಿಯನ್ನು ಕ್ರಮಬದ್ಧವಾಗಿ, ಅರ್ಥಪೂರ್ಣವಾಗಿ ಸಂಭ್ರಮದಿಂದ ಆಚರಿಸೋಣ. ಎಲ್ಲರಿಗೂ ನೂತನ ಸಂವತ್ಸರವು ಶುಭವನ್ನು ತರಲಿ ಎಂದು ಹಾರೈಸೋಣ.