ವಿಕ ಸುದ್ದಿಲೋಕ ಕಾಸರಗೋಡು
ವಾಹನ ಅಪಘಾತಗಳು , ಅಪಘಾತ ಮರಣಗಳು ನಿತ್ಯ ಕಥೆಯಾದ ರಾಷ್ಟ್ರೀಯ ಹೆದ್ದಾರಿಯ ಅಡ್ಕತ್ತಬೈಲಿನಲ್ಲಿಫೂಟ್ ಓವರ್ ಬ್ರಿಡ್ಜ್ ನಿರ್ಮಿಸಬೇಕು ಎಂಬ ಬೇಡಿಕೆಗೆ ಕೇಂದ್ರ ಸಚಿವರಿಂದ ಭರವಸೆ ಲಭಿಸಿದರೂ ಮುಂದಿನ ಪ್ರಕ್ರಿಯೆಗಳು ವಿಳಂಬಗೊಳ್ಳುತ್ತಿರುವುದು ನಾಗರಿಕರಿಗೆ ಹಾಗೂ ಕ್ರಿಯಾ ಸಮಿತಿ ಪದಾಧಿಕಾರಿಗಳಿಗೆ ಆತಂಕ ಸೃಷ್ಟಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂದರ್ಭದಲ್ಲೇ ಅಡ್ಕತ್ತಬೈಲಿನಲ್ಲಿಫೂಟ್ ಓವರ್ ಬ್ರಿಡ್ಜ್ ಮಂಜೂರುಗೊಳಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದರು. ಇದಕ್ಕೆ ಕಿವಿಗೊಡಲು ಅಧಿಕಾರಿಗಳು ತಯಾರಾಗದ ಕಾರಣ ನಾಗರಿಕರನ್ನು ಒಗ್ಗೂಡಿಸಿ ಕ್ರಿಯಾಸಮಿತಿಯನ್ನು ರಚಿಸಿದ್ದು, ಪದಾಧಿಕಾರಿಗಳು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಕಂಡು ಮನವಿ ನೀಡಿದ್ದರು.
ಅಡ್ಕತ್ತಬೈಲು ಮುಹಿಯುದ್ದೀನ್ ಜಮಾಅತ್ ಸಮಿತಿ ಹಾಗೂ ಸುಬ್ರಹ್ಮಣ್ಯ ಕ್ಷೇತ್ರ ಸಮಿತಿಯು ಸಂಯುಕ್ತವಾಗಿ ಈ ವಿಷಯದಲ್ಲಿಮಧ್ಯಸ್ಥಿಕೆ ವಹಿಸಿ ಕ್ರಿಯಾ ಸಮಿತಿಯನ್ನು ರಚಿಸುವುದು, ಮನವಿ ಸಲ್ಲಿಸುವುದು ಮಾಡಿತ್ತು. ಮನವಿಗೆ ಸಚಿವರ ಧನಾತ್ಮಕ ಪ್ರತಿಕ್ರಿಯೆ ಲಭಿಸಿತ್ತು ಎಂದು ಪದಾಧಿಕಾರಿಗಳು ಹೇಳುತ್ತಿದ್ದಾರೆ. ಇದಕ್ಕೆ ಮುಂದಿನ ಕ್ರಮಗಳನ್ನು ಕೈಗೊಳ್ಳದಿರುವುದು ಇದೀಗ ನಾಗರಿಕರಲ್ಲಿಆತಂಕ ಸೃಷ್ಟಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಮಧ್ಯೆ ಮಹಿಳೆ ಮೃತಪಟ್ಟ ಬಳಿಕ ಮೇಲ್ಸೇತುವೆಯ ಬೇಡಿಕೆ ಇನ್ನೂ ತೀವ್ರಗೊಂಡಿದೆ.
ಚಿತ್ರ: 29ಕೆಎಸ್ ಎಲ್ ಅಡ್ಕತ್ತಬೈಲು-ಅಡ್ಕತ್ತಬೈಲು ರಾಷ್ಟ್ರೀಯ ಹೆದ್ದಾರಿ.

