ವಿಂಡ್ ಫ್ಯಾನ್ ಅಲ್ಪ ಪರಿಹಾರಕ್ಕೆ ರೈತರ ಆಕ್ಷೇಪ

Contributed bysukesh2365@gmail.com|Vijaya Karnataka
Subscribe

ತೋರಣಗಟ್ಟೆ-ಕಟ್ಟಿಗೆಹಳ್ಳಿ ಗ್ರಾಮಗಳ ಮಧ್ಯೆ ಎನ್‌ಎಸ್‌ಎಲ್‌ ವಿಂಡ್‌ ಫ್ಯಾನ್‌ ಕಂಪನಿ ಅಳವಡಿಸಿರುವ ವಿದ್ಯುತ್‌ ಕಂಬಗಳ ದುರಸ್ತಿ ಕಾರ್ಯ ಆರಂಭವಾಗಿದೆ. 25 ವರ್ಷಗಳ ಹಿಂದೆ ಅಳವಡಿಸಿದ್ದ ಕಂಬಗಳ ದುರಸ್ತಿಗೆ ಅಡಕೆ ತೋಟಗಳಲ್ಲಿನ ಮರಗಳನ್ನು ಕತ್ತರಿಸಬೇಕಿದೆ. ಕಂಪನಿ ನೀಡುತ್ತಿರುವ ಪರಿಹಾರಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

farmers protest opposition to wind fans inadequate compensation

ಕಿಕ್ಕರ್ : 33 ರೈತರ ತೋಟಗಳಲ್ಲಿಕರೆಂಟ್ ಕಂಬಗಳ ದುರಸ್ತಿಗೆ ಮುಂದಾದ ಎನ್ ಎಸ್ ಎಲ್ ವಿಂಡ್ ಕಂಪನಿ

----

ವಿಂಡ್ ಫ್ಯಾನ್ ಅಲ್ಪ ಪರಿಹಾರಕ್ಕೆ ರೈತರ ಆಕ್ರೋಶ

ವಿಕ ವಿಶೇಷ ಜಗಳೂರು

25 ವರ್ಷಗಳ ಹಿಂದೆ ತಾಲೂಕಿನ ತೋರಣಗಟ್ಟೆ-ಕಟ್ಟಿಗೆಹಳ್ಳಿ ಗ್ರಾಮಗಳ ಮಧ್ಯೆ ಇರುವ ಗುರಹೇಶ್ವರನ ಗುಡ್ಡದಲ್ಲಿಎನ್ ಎಸ್ ಎಲ್ (ನೂಜಿವಿಡು) ವಿಂಡ್ ಫ್ಯಾನ್ ಕಂಪನಿ ಅಳವಡಿಸಿರುವ ವಿದ್ಯುತ್ ಕಂಬಗಳ ದುರಸ್ತಿಗೆ ಮುಂದಾಗಿದ್ದು, ಕಂಪನಿ ನೀಡಲು ಮುಂದಾಗಿರುವ ಪರಿಹಾರ ಸಲುವಾಗಿ ನಡೆಸಿದ ಸರ್ವೆ ಕಾರ್ಯಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ತೋರಣಗಟ್ಟೆ, ಕಟ್ಟಿಗೆಹಳ್ಳಿ, ಅರಿಶಿಣಗುಂಡಿ ಮತ್ತು ಲಿಂಗಣ್ಣನಹಳ್ಳಿ ಗ್ರಾಮಗಳ 33 ರೈತರ ಅಡಕೆ ತೋಟಗಳಲ್ಲಿ66 ಕೆವಿ ವಿದ್ಯುತ್ ಲೈನ್ ಹಾದು ಹೋಗಿವೆ.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಆದೇಶದಂತೆ ತಹಸೀಲ್ದಾರ್ ಕಚೇರಿಯ ಕಂದಾಯ ನಿರೀಕ್ಷಕ ಕೀರ್ತಿಂಜಯ, ಹಿರಿಯ ಭೂಮಾಪಕ ಮಹಮದ್ ಹುಸೇನ್ ಮತ್ತು ಎನ್ ಎಸ್ ಎಲ್ ಕಂಪನಿಯ ವಕೀಲ ಸುರೇಶ್ ಹಾಗೂ 33 ರೈತರ ಸಮ್ಮುಖದಲ್ಲಿ, ಅಡಕೆ ತೋಟಗಳಲ್ಲಿಹಾದು ಹೋಗಿರುವ 66 ಕೆವಿ ವಿದ್ಯುತ್ ಲೈನ್ ಸರ್ವೆ ಕಾರ್ಯ ಶುಕ್ರವಾರ ಆರಂಭವಾಗಿದೆ.

ಅಡಕೆ ಮರಗಳ ಕತ್ತರಿಸಿ ದುರಸ್ತಿ:

ಈ ವೇಳೆ ಮಾತನಾಡಿದ ಕಂಪನಿ ಪರ ವಕೀಲ ಸುರೇಶ್ , ‘2001ರಲ್ಲಿಕಂಪನಿ ರೈತರ ಹೊಲಗಳಲ್ಲಿವಿದ್ಯುತ್ ಲೈನ್ ಅಳವಡಿಸಿದೆ. 25 ವರ್ಷಗಳ ಹಿಂದೆ ಅಳವಡಿಸಿರುವ ವಿದ್ಯುತ್ ಕಂಬಗಳು ದುರಸ್ತಿಗೆ ಬಂದಿವೆ. ತಕ್ಷಣವೇ ಲೈನ್ ದುರಸ್ತಿ ಮಾಡಿಸಬೇಕು. ತಕ್ಷಣವೇ ದುರಸ್ತಿ ಮಾಡದಿದ್ದರೆ ಅನಾಹುತ ಉಂಟಾಗುತ್ತದೆ. ಲೈನ್ ಕೆಳಗಡೆ 5ರಿಂದ 15 ವರ್ಷಗಳ ಅಡಕೆ ಗಿಡಗಳು ಬೆಳೆದು ನಿಂತಿವೆ. ಅಡಕೆ ಮರಗಳನ್ನು ಕತ್ತರಿಸಿಯೇ ಲೈನ್ ದುರಸ್ತಿ ಮಾಡಬೇಕು. ರೈತರಿಗೆ ತೋಟಗಾರಿಕೆ ಇಲಾಖೆ ನಿಯಮದಂತೆ ಪರಿಹಾರ ನೀಡಲು ಕಂಪನಿ ಸಿದ್ಧವಿದೆ. ಈಗ ಸರ್ವೆ ಕಾರ್ಯ ಆರಂಭಿಸಿದ್ದೇವೆ. ಸರ್ವೆ ಮುಗಿದ ನಂತರ ಫಲಾನುಭವಿಗಳಿಗೆ ಪರಿಹಾರದ ಹಣವನ್ನು ಚೆಕ್ ಮೂಲಕ ವಿತರಿಸುತ್ತೇವೆ. ಒಂದು ವೇಳೆ ಪರಿಹಾರದ ಹಣಕ್ಕೆ ರೈತರು ಒಪ್ಪದೇ ಇದ್ದರೆ ಕೋರ್ಟ್ ನಲ್ಲಿದಾವೇ ಹೂಡಬಹುದು’ ಎಂದು ತಿಳಿಸಿದರು.

ಈ ಮಾತಿಗೆ ಆಕ್ಷೇಪಣೆ ವ್ಯಕ್ತಪಡಿಸಿದ ರೈತ ನಾಗರಾಜ್ , ‘ಫಲಕ್ಕೆ ಬಂದಿರುವ ಅಡಕೆ ಗಿಡಗಳನ್ನು ಕತ್ತರಿಸಿ ಲೈನ್ ದುರಸ್ತಿ ಮಾಡಲು ಮುಂದಾಗಿದೆ. ಒಂದು ವಿದ್ಯುತ್ ಕಂಬಕ್ಕೆ 2ರಿಂದ 3 ಸಾವಿರ ರೂ. ಪರಿಹಾರ ನೀಡಿ ವಂಚಿಸಿರುವ ಕಂಪನಿ, ಈಗ ದುರಸ್ತಿ ನೆಪದಲ್ಲಿಫಲಕ್ಕೆ ಬಂದಿರುವ ಅಡಕೆ ಮರಗಳನ್ನು ಕತ್ತರಿಸಲು ಮುಂದಾಗಿರುವುದು ಯಾವ ನ್ಯಾಯ? ಒಂದು ಅಡಕೆ ಮರ ವರ್ಷಕ್ಕೆ 10ರಿಂದ 20 ಸಾವಿರ ರೂ. ಆದಾಯ ತಂದು ಕೊಡುತ್ತದೆ’ ಎಂದು ತಿಳಿಸಿದರು.

ಈ ವೇಳೆ ರೈತರಾದ ಚಿತ್ತಪ್ಪ, ಜಗದೀಶ್ , ರವಿಕುಮಾರ್ , ನಾಗರಾಜ್ , ರಾಜಣ್ಣ, ಅಣ್ಣಪ್ಪ, ಸಂದೀಪ್ , ಮಂಜುನಾಥ್ , ತಿಪ್ಪಣ್ಣ, ಲೋಕೇಶ್ ಸೇರಿದಂತೆ 33ಕ್ಕೂ ಹೆಚ್ಚು ರೈತರು ಇದ್ದರು.

------

ಬಾಕ್ಸ್ ...

ಗರಿಷ್ಠ ಪರಿಹಾರ ನೀಡಲಿ

ರೈತರಾದ ಲಿಂಗಣ್ಣನಹಳ್ಳಿ ವೀರೇಶ್ , ಪಿ.ಟಿ. ನಾಗರಾಜ್ ಮಾತನಾಡಿ, ‘ಕನಿಷ್ಠ ಒಬ್ಬ ರೈತನ ತೋಟದಲ್ಲಿಲೈನ್ ಕೆಳಗೆ ಹಾದು ಹೋಗಿರುವ ಅಡಕೆ ಗಿಡಗಳ ಸಂಖ್ಯೆ 90 ರಿಂದ 100 ಇವೆ. ಅವುಗಳನ್ನು ಕತ್ತಿರಿಸಿಯೇ ದುರಸ್ತಿ ಮಾಡಬೇಕು. ಕಂಪನಿಯವರು ಮಾತೆತ್ತಿದರೆ ಜಿಲ್ಲಾಧಿಕಾರಿ ಕೇಳಿ ಎನ್ನುತ್ತಾರೆ. ರೈತರಿಗೆ ಆಗುವ ನಷ್ಟದ ಪರಿಹಾರ ‘ಆನೆ ಹೊಟ್ಟೆ ಅರೆ ಕಾಸಿನ ಮಜ್ಜಿಗೆ’ಯಂತಾಗುತ್ತದೆ. ಯಾವುದೇ ಕಾರಣಕ್ಕೂ ಅವರು ಕೊಡುವ ಪರಿಹಾರವನ್ನು ಒಪ್ಪುವುದಿಲ್ಲ. ಗರಿಷ್ಠ ಮಟ್ಟದ ಪರಿಹಾರ ನೀಡದೇ ಇದ್ದರೆ ಯಾವುದೇ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ. ಶಾಸಕ ಬಿ.ದೇವೇಂದ್ರಪ್ಪ ಮತ್ತು ಡಿಸಿ ಸಮ್ಮುಖದಲ್ಲೇ ಪರಿಹಾರ ಮೊತ್ತ ತೀರ್ಮಾನವಾಗಬೇಕು’ ಎಂದು ಒತ್ತಾಯಿಸಿದರು.

-----

31ಜೆಎಲ್ ಆರ್ 1ಎ

ಜಗಳೂರು ತಾಲೂಕಿನ ಅರಿಶಿಣಗುಂಡಿ, ಕಟ್ಟಿಗೆಹಳ್ಳಿ ಗ್ರಾಮದಲ್ಲಿಎನ್ ಎಸ್ ಎಲ್ ವಿಂಡ್ ಫ್ಯಾನ್ ಕಂಪನಿಯ ವಿದ್ಯುತ್ ಲೈನ್ ಕೆಳಗೆ ಅಡಕೆ ಮರಗಳ ಸರ್ವೆ ಕಾರ್ಯ ಮಾಡಲಾಯಿತು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ