ವಿಕ ಇಂಪ್ಯಾಕ್ಟ್
ವಿಕ ಸುದ್ದಿಲೋಕ ಬಂಗಾರಪೇಟೆ
ಕೆಟ್ಟು ನಿಂತಿದ್ದ ಹತ್ತಾರು ಕುಡಿಯುವ ನೀರಿನ ಘಟಕಗಳಿಗೆ ದುರಸ್ತಿ ಭಾಗ್ಯ ಕಲ್ಪಿಸುವ ಮೂಲಕ ಗ್ರಾಮೀಣ ಭಾಗದ ಜನತೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಬಂಗಾರಪೇಟೆ ತಾಲೂಕಿನಲ್ಲಿಜನರಿಗೆ ಫ್ಲೋರೈಡ್ ಮುಕ್ತ ಶುದ್ಧ ಕುಡಿಯುವ ನೀರನ್ನು ಒದಗಿಸಲು ಸರಕಾರ 131 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿತ್ತು. ಆದರೆ ಅವುಗಳ ನಿರ್ವಹಣೆ ಕೊರತೆಯಿಂದ 30ಕ್ಕೂ ಹೆಚ್ಚಿನ ಘಟಕಗಳು ಕೆಟ್ಟು ನಿಂತು ಗ್ರಾಮಗಳಲ್ಲಿಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಅದರ ಬಗ್ಗೆ ಅ.28ರಂದು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ‘ ಶುದ್ಧ ಕುಡಿಯುವ ನೀರು ಮರೀಚಿಕೆ’ ಎಂಬ ಶೀರ್ಷಿಕೆಯ ಅಡಿಯಲ್ಲಿವರದಿಯನ್ನು ಪ್ರಕಟ ಮಾಡಲಾಗಿತ್ತು.
ವರದಿ ಪ್ರಕಟವಾದ ಬೆನ್ನಲ್ಲೇ ಹಾಗೂ ಜಿಪಂ ಸಿಇಒ ನಿರ್ದೇಶನದಂತೆ ಎಚ್ಚೆತ್ತುಕೊಂಡ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಸಂಪಂಗಿಪುರ, ಮುಸ್ಟ್ರಹಳ್ಳಿ, ಪೋಲೆನಹಳ್ಳಿ, ಹೀರೆಕರಪನಹಳ್ಳಿ, ಕೊಳಮೂರು ಸೇರಿದಂತೆ 15ಕ್ಕೂ ಹೆಚ್ಚಿನ ಗ್ರಾಮಗಳಲ್ಲಿನ ಘಟಕಗಳನ್ನು ದುರಸ್ತಿ ಮಾಡಿಸಿದ್ದಾರೆ. ಇದರಿಂದ ಶುದ್ಧ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಗ್ರಾಮೀಣದ ಪ್ರದೇಶದ ಜನತೆಗೆ ಶುದ್ಧ ನೀರು ಲಭ್ಯವಾದಂತಾಗಿದೆ.
ಇಲಾಖೆಯ ಜೆಇ ರಾಜಶೇಖರ್ ಹೀರೇಮಠ್ ಮಾತನಾಡಿ, ದುರಸ್ತಿಯಾಗಬೇಕಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 15 ಘಟಕಗಳನ್ನು ತಂತ್ರಜ್ಞರ ಸಹಕಾರದಿಂದ ಸರಿಪಡಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದ್ದ ಗುತ್ತಿಗೆದಾರರಿಗೆ ಅದರ ನಿರ್ವಹಣೆ ಜವಾಬ್ದಾರಿಯನ್ನು 5 ವರ್ಷಗಳಿಗೆ ನೀಡಲಾಗಿತ್ತು. ಅವಧಿ ಕಳೆದ ಫೆಬ್ರವರಿ ತಿಂಗಳಿಗೆ ಪೂರ್ಣಗೊಂಡಿದ್ದು, ಬಾಕಿ ಇರುವ ವಿದ್ಯುತ್ ಬಿಲ್ ಪಾವತಿಸಿ, ಘಟಕವನ್ನು ಉತ್ತಮ ಸ್ಥಿತಿಯಲ್ಲಿಪಂಚಾಯಿತಿಗೆ ಹಸ್ತಾಂತರ ಮಾಡುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಇದುವರೆಗೂ ಹಸ್ತಾಂತರ ಮಾಡಲು ಗುತ್ತಿಗೆದಾರರು ಮುಂದೆ ಬಂದಿಲ್ಲ. ಬೂದಿಕೋಟೆ, ದಿನ್ನಕೊತ್ತೂರು ಸೇರಿದಂತೆ ಕೆಲವು ಗ್ರಾಮಗಳಲ್ಲಿಘಟಕಗಳ ಕಾಮಗಾರಿಯನ್ನು ಪೂರ್ಣಗೊಳಿಸದೆ ಗುತ್ತಿಗೆದಾರರು ಕಡೆಗಣಿಸಿದ್ದಾರೆ. ಅವರಿಗೂ ನೋಟಿಸ್ ನೀಡಿ ಶೀಘ್ರವಾಗಿ ಘಟಕಗಳನ್ನು ಲೋಕಾರ್ಪಣೆ ಮಾಡಲು ಸೂಚಿಸಲಾಗಿದೆ. ತಾಲೂಕಿನಲ್ಲಿಇನ್ನೂ 15 ಘಟಕಗಳ ರಿಪೇರಿ ಕಾರ್ಯ ಆಗಬೇಕಿದ್ದು, ಅವುಗಳನ್ನೂ ದುರಸ್ತಿ ಮಾಡಿಸಿ, ಎಲ್ಲಾ131 ಘಟಕಗಳನ್ನೂ ಸಹ ಶೀಘ್ರವಾಗಿ ಸಂಬಂಧಪಟ್ಟ ಪಂಚಾಯಿತಿಗಳಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದರು.
ಸುಸ್ಥಿತಿಯಲ್ಲಿಪಂಚಾಯಿತಿಗೆ ಘಟಕಗಳನ್ನು ಹಸ್ತಾಂತರ ಮಾಡಿದ ನಂತರ ಅವುಗಳ ನಿರ್ವಹಣೆ ಹೊಣೆಯನ್ನು ಪಂಚಾಯಿತಿ ಅಧಿಕಾರಿಗಳೇ ಹೊಂದಿರುತ್ತಾರೆ. ಜತೆಗೆ ಪ್ರತಿ ವರ್ಷ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ನಿರ್ವಹಣೆಗಾಗಿ ಅನುದಾನವನ್ನೂ ಪಂಚಾಯಿತಿಗೆ ನೀಡಲಾಗುತ್ತದೆ. ಮುಂದೆ ಘಟಕಗಳ ನಿರ್ವಹಣೆಗೆ ಯಾವುದೇ ಸಮಸ್ಯೆ ಎದುರಾಗದಂತೆಪಂಚಾಯಿತಿ ಮತ್ತು ಇಲಾಖೆಯಿಂದ ನೋಡಿಕೊಳ್ಳಲಾಗುತ್ತದೆ ಎಂದರು.
31 ಬಂಗಾರಪೇಟೆ: ತಾಲೂಕಿನಲ್ಲಿಕೆಟ್ಟು ನಿಂತಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಿಸಲಾಗಿದೆ.

