ಸೂರು ಕಳೆದುಕೊಳ್ಳುವ ಭೀತಿಯಲ್ಲಿ ಶ್ರೀಸಾಮಾನ್ಯರು | ಹೌಸಿಂಗ್ ಯೋಜನೆಗಳಿಗೇಕೆ ಈ ದುಸ್ಥಿತಿ?

Vijaya Karnataka

ಮನೆ ನಿರ್ಮಾಣಕ್ಕೆ ಸಿಗುವ ಸಹಾಯಧನ ಸಾಲದು. ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯರು ಮನೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಪ್ರವಾಹ ಹಾನಿ ಪರಿಹಾರವೂ ಕಡಿಮೆಯಾಗಿದೆ. ವಸತಿ ಯೋಜನೆಗಳಡಿ ಮನೆ ನಿರ್ಮಾಣ ಅರ್ಧಕ್ಕೆ ನಿಂತಿದೆ. ಸರ್ಕಾರ ಸಹಾಯಧನ ಹೆಚ್ಚಿಸಬೇಕು ಎಂಬುದು ಜನರ ಆಗ್ರಹವಾಗಿದೆ. ಮತ್ಸಾತ್ರ್ಯಶ್ರಯ ಯೋಜನೆಯಡಿ ಮನೆ ಹಂಚಿಕೆ ವಿಳಂಬವಾಗಿದೆ.

common people the fear of losing homes the condition of housing schemes
ಬೆಂಗಳೂರು: ರಾಜ್ಯದಲ್ಲಿ ಮನೆ ನಿರ್ಮಾಣಕ್ಕೆ ನೀಡುವ ಸಹಾಯಧನ ಹಲವು ವರ್ಷಗಳಿಂದ ಹೆಚ್ಚಳವಾಗದೆ, ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಮನೆ ನಿರ್ಮಾಣ ಯೋಜನೆಗಳು ಕುಂಠಿತಗೊಂಡಿವೆ. ನರೇಗಾ ಯೋಜನೆಯಡಿ ಸಿಗುತ್ತಿದ್ದ ಕೂಲಿಗೂ ಕತ್ತರಿ ಬಿದ್ದಿದೆ. ಪ್ರವಾಹದಿಂದ ಹಾನಿಯಾದ ಮನೆಗಳಿಗೂ ಸಿಗುವ ಪರಿಹಾರವೂ ಕಡಿಮೆಯಾಗಿದೆ. ಈ ಎಲ್ಲ ಕಾರಣಗಳಿಂದಾಗಿ ವಸತಿ ರಹಿತರ ಸಮಸ್ಯೆ ಇನ್ನಷ್ಟು ಉಲ್ಬಣಿಸಿದೆ.

ರಾಜ್ಯದಲ್ಲಿ 37.48 ಲಕ್ಷಕ್ಕೂ ಹೆಚ್ಚು ಜನ ವಸತಿ ಇಲ್ಲದೆ ಪರದಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅತಿವೃಷ್ಟಿ, ಪ್ರವಾಹದಿಂದ ಮೂರು ಲಕ್ಷಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ಇಂತಹ ಸಂತ್ರಸ್ತರಿಗೆ ಮತ್ತು ವಸತಿ ರಹಿತರಿಗೆ ಮನೆ ನಿರ್ಮಿಸಲು ಸರ್ಕಾರ ಸಹಾಯಧನ ನೀಡುತ್ತಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಈ ಸಹಾಯಧನ ಕೇವಲ 1.20 ಲಕ್ಷ ರೂ. ಮಾತ್ರ. ಇದು ಮನೆ ನಿರ್ಮಾಣಕ್ಕೆ ಖಂಡಿತಾ ಸಾಲುವುದಿಲ್ಲ. ಇದರ ಜೊತೆಗೆ, ಸ್ವಂತ ಮನೆ ಕಟ್ಟಿಕೊಳ್ಳಲು ನರೇಗಾ ಯೋಜನೆಯಡಿ 90 ದಿನಗಳ ಕೂಲಿ ರೂಪದಲ್ಲಿ 33,300 ರೂ. ಸಿಗುತ್ತಿತ್ತು. ಆದರೆ, ಹೊಸ ಕಾಯಿದೆಯಿಂದಾಗಿ ಈ ಕೂಲಿಯೂ ಸಿಗುವುದು ಕಷ್ಟವಾಗಿದೆ.
ಸರಕು, ಸಾಮಗ್ರಿಗಳ ಬೆಲೆ ವಿಪರೀತ ಏರಿಕೆಯಾಗಿರುವುದರಿಂದ, 1.20 ಲಕ್ಷ ರೂ. ಸಹಾಯಧನದಿಂದ ಮನೆ ನಿರ್ಮಿಸುವುದು ಅಸಾಧ್ಯವಾಗಿದೆ. ಹೀಗಾಗಿ, ಲಕ್ಷಾಂತರ ಮನೆಗಳು ಅರ್ಧಕ್ಕೆ ನಿಂತಿವೆ. ಈ ಸಹಾಯಧನವನ್ನು 1.20 ಲಕ್ಷ ರೂ. ನಿಂದ 3 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಜನ ಒತ್ತಾಯಿಸುತ್ತಿದ್ದಾರೆ. ನರೇಗಾ ಕೂಲಿಯೂ ಕೈತಪ್ಪುತ್ತಿರುವ ಈ ಸಂದರ್ಭದಲ್ಲಿ, ಸರ್ಕಾರ ವಾಸ್ತವಕ್ಕೆ ಹತ್ತಿರವಾದ ಸಹಾಯಧನವನ್ನು ನಿಗದಿ ಮಾಡಬೇಕು ಎಂದು ವಸತಿ ಯೋಜನೆ ಫಲಾನುಭವಿಗಳು ಆಶಿಸಿದ್ದಾರೆ.

2017 ರಿಂದ 2023 ರವರೆಗೆ ಸುಮಾರು 8 ಲಕ್ಷ ಫಲಾನುಭವಿಗಳಿಗೆ ವಸತಿ ಯೋಜನೆಯಡಿ ಮನೆ ಮಂಜೂರಾಗಿತ್ತು. ಆದರೆ, ಆರ್ಥಿಕ ಸಮಸ್ಯೆಯಿಂದಾಗಿ ಅವರೆಲ್ಲರೂ ಮನೆ ಕಟ್ಟಲು ಸಾಧ್ಯವಾಗಿಲ್ಲ. ಮನೆ ನಿರ್ಮಿಸದ ಫಲಾನುಭವಿಗಳ ಮಂಜೂರಾತಿಯನ್ನು ರದ್ದು ಮಾಡಿ, ಅದರಲ್ಲಿ 7.38 ಲಕ್ಷ ಮನೆಗಳನ್ನು 2024-25ನೇ ಸಾಲಿಗೆ ಮರು ವಿತರಿಸಲಾಗಿದೆ. ಆದರೆ, 2022-23 ರಿಂದ 2024-25 ರವರೆಗೆ ರಾಜ್ಯ ಸರ್ಕಾರದ ವಸತಿ ಯೋಜನೆಗೆ ಬಜೆಟ್‌ನಲ್ಲಿ ಹೊಸ ಗುರಿ ನಿಗದಿ ಮಾಡಿಲ್ಲ ಎಂದು ರಾಜ್ಯ ಸರ್ಕಾರವೇ ತಿಳಿಸಿದೆ. ಕಳೆದ ವರ್ಷ ಮಂಜೂರಾದ 2.70 ಲಕ್ಷ ಮನೆಗಳ ನಿರ್ಮಾಣ ಕೆಲಸ ಇನ್ನೂ ಆರಂಭವಾಗಿಲ್ಲ.

ಕಾಂಗ್ರೆಸ್ ಸರ್ಕಾರ, ಪಂಚ ಗ್ಯಾರಂಟಿಗಳ ಜೊತೆಗೆ ಮೀನುಗಾರಿಕೆ ಇಲಾಖೆಯಿಂದ ಹತ್ತು ಸಾವಿರ ಮನೆಗಳನ್ನು ಮಂಜೂರು ಮಾಡುವುದಾಗಿ ಘೋಷಿಸಿತ್ತು. 2024-25ನೇ ಸಾಲಿನಲ್ಲಿ 'ಮತ್ಸಾತ್ರ್ಯಶ್ರಯ' ಯೋಜನೆಯಡಿ 9 ಸಾವಿರ ಮತ್ತು ವಿವೇಚನಾ ಕೋಟಾದಡಿ 1 ಸಾವಿರ ಮನೆಗಳನ್ನು ವಿತರಿಸುವ ಗುರಿ ಇತ್ತು. 2025ರ ಡಿಸೆಂಬರ್ ವರೆಗೆ 8914 ಮನೆಗಳನ್ನು ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆ ಮಾಡಿದ್ದರೂ, ಕೇವಲ 656 ಮನೆಗಳಿಗೆ ಮಾತ್ರ ಅನುಮೋದನೆ ಸಿಕ್ಕಿದೆ. 1121 ಮನೆಗಳಿಗೆ ಅನುಮೋದನೆ ಬಾಕಿ ಇದೆ. ಇನ್ನುಳಿದ ಮನೆಗಳಿಗೆ ಫಲಾನುಭವಿಗಳ ಆಯ್ಕೆ ನಡೆಯಬೇಕಿದೆ.

2023-24ನೇ ಸಾಲಿನಿಂದ ಈವರೆಗೆ ವಿವಿಧ ವಸತಿ ಯೋಜನೆಗಳಡಿ ಪ್ರಗತಿಯಲ್ಲಿರುವ ಮನೆಗಳಿಗಾಗಿ ರಾಜ್ಯ ಸರ್ಕಾರದ ಯೋಜನೆಗಳಡಿ 4362 ಫಲಾನುಭವಿಗಳಿಗೆ 26.56 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ (PM Awas Yojana) ಅಡಿ ಗ್ರಾಮೀಣ ಭಾಗದ 2.13 ಲಕ್ಷ ಫಲಾನುಭವಿಗಳಿಗೆ 800 ಕೋಟಿ ರೂ. ಮತ್ತು ಪಿಎಂ ಜನ್‌ಮನ್ (PM JANMAN) ಯೋಜನೆಯಡಿ 828 ಫಲಾನುಭವಿಗಳಿಗೆ 6.60 ಕೋಟಿ ರೂ. ಬಿಡುಗಡೆಯಾಗಿದೆ. ಒಟ್ಟಾರೆಯಾಗಿ, 2.18 ಲಕ್ಷ ಫಲಾನುಭವಿಗಳಿಗೆ 833.31 ಕೋಟಿ ರೂ. ಬಿಡುಗಡೆಯಾಗಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.