ಒಳಮೀಸಲು ತೀರ್ಮಾನ ನಾಳೆ

Contributed byKeerthi Prasad|Vijaya Karnataka

ಖಾಲಿ ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಯ ಒಳ ಮೀಸಲು ಅಳವಡಿಕೆ ಬಗ್ಗೆ ನಾಳೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಮುಖ್ಯಮಂತ್ರಿಗಳು ಈ ಬಗ್ಗೆ ಭರವಸೆ ನೀಡಿದ್ದಾರೆ. ಒಳ ಮೀಸಲು ಕಲ್ಪಿಸಲು ಸರಕಾರ ಬದ್ಧವಾಗಿದೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಎಂದು ಸಚಿವರು ತಿಳಿಸಿದ್ದಾರೆ. ಸಮುದಾಯದವರು ಗಲಾಟೆ ಮಾಡಬೇಕಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

decision on internal reservation tomorrow chief ministers assurance
ಬೆಂಗಳೂರು: ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಯ ಶೇ.15ರಷ್ಟು ಮೀಸಲಾತಿಯಲ್ಲಿ ಒಳ ಮೀಸಲಾತಿ ಅಳವಡಿಕೆ ಸಂಬಂಧ ಇದೇ 5ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದ್ದಾರೆ. ಎಡಗೈ ಸಮುದಾಯದ ಮುಖಂಡರೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿ ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು, ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು.

ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ.15ರಿಂದ ಶೇ.17ಕ್ಕೆ, ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿದ್ದರಿಂದ ಒಟ್ಟು ಮೀಸಲಾತಿ ಪ್ರಮಾಣ ಶೇ.50ರಿಂದ ಶೇ.56ಕ್ಕೆ ಏರಿಕೆಯಾಗಿದೆ. ಈ ಹೆಚ್ಚಳವಾದ ಮೀಸಲಾತಿಗೆ ಅನುಗುಣವಾಗಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ರೂಪಿಸಿದ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದರು. ಆದರೆ, ಒಟ್ಟಾರೆ ಮೀಸಲಾತಿ ಶೇ.56ಕ್ಕೆ ಹೆಚ್ಚಿಸಿರುವುದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಸಾಮಾನ್ಯ ವರ್ಗದ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ ಪರಿಣಾಮ, ಕಳೆದ ಫೆ.26ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಿಂದಿನಂತೆ ಶೇ.50ರಷ್ಟು ಮೀಸಲಾತಿ ಅನ್ವಯಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಒಪ್ಪಿಗೆ ನೀಡಲಾಗಿತ್ತು. ಒಳ ಮೀಸಲಾತಿ ಅಳವಡಿಸಿ, ಕೋರ್ಟ್‌ನ ಅಂತಿಮ ತೀರ್ಪಿಗೆ ಒಳಪಟ್ಟು ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಸಂಪುಟ ಸಭೆಯಲ್ಲಿ ಬೇಡಿಕೆ ಇಡಲಾಗಿತ್ತು. ಆದರೆ, ನೇಮಕಾತಿ ಸಂಬಂಧ ಡಿಪಿಎಆರ್ ಹೊರಡಿಸಿದ ಆದೇಶದಲ್ಲಿ ಒಳ ಮೀಸಲಾತಿ ಅಳವಡಿಸುವ ಪ್ರಸ್ತಾವವಿರಲಿಲ್ಲ. ಈ ಆದೇಶದಿಂದ ತಮಗೆ ಆಘಾತವಾಗಿದೆ ಎಂದು ಸಚಿವರು ಹೇಳಿದರು.

ಈ ವಿಚಾರವಾಗಿ ಅಡ್ವೊಕೇಟ್ ಜನರಲ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದು, ಒಳ ಮೀಸಲಾತಿ ಅನುಷ್ಠಾನಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿಗಳೊಂದಿಗೂ ಚರ್ಚಿಸಲಾಗಿದೆ. ಮುಂದಿನ ಸಂಪುಟ ಸಭೆಯಲ್ಲಿ ಆದೇಶ ಪರಿಷ್ಕರಿಸುವ ಬಗ್ಗೆ ಚರ್ಚಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಸಚಿವ ಮುನಿಯಪ್ಪ ಉತ್ತರಿಸಿದರು.

ಸಚಿವ ಆರ್‌.ಬಿ.ತಿಮ್ಮಾಪುರ ಮಾತನಾಡಿ, ನೇಮಕಾತಿ ಆರಂಭಿಸುವ ಕುರಿತು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಒಳ ಮೀಸಲಾತಿ ಅಂಶವಿಲ್ಲ. ಈ ಬಗ್ಗೆ ಗೊಂದಲ ನಿವಾರಣೆ ಸಂಬಂಧ ಚರ್ಚಿಸಿ ತೀರ್ಮಾನಿಸೋಣ ಎಂಬುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಸಮುದಾಯದವರು ಗಲಾಟೆ, ಗೊಂದಲ ಮಾಡಬೇಕಿಲ್ಲ. ಸಮುದಾಯದ ಪರವಾಗಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಚ್‌.ಆಂಜನೇಯ, ರಾಜ್ಯ ಸರ್ಕಾರ ಒಳ ಮೀಸಲಾತಿ ಅಳವಡಿಸಿಕೊಳ್ಳದೆ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದರೆ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಲಿದೆ. ಸಮುದಾಯಕ್ಕೆ ನ್ಯಾಯ ಸಿಗಬೇಕಿದೆ ಎಂದು ಹೇಳಿದರು. ಮಾಜಿ ರಾಜ್ಯಸಭಾ ಸದಸ್ಯ ಎಲ್‌.ಹನು­ಮಂತಯ್ಯ, ಒಳ ಮೀಸಲಾತಿ ಕಲ್ಪಿಸದೆ ಯಾವುದೇ ಕಾರಣಕ್ಕೂ ಖಾಲಿ ಹುದ್ದೆಗಳ ನೇಮಕಾತಿ ಕಾರ್ಯ ನಡೆಯಬಾರದು ಎಂಬುದು ನಮ್ಮೆಲ್ಲರ (ಎಡಗೈ ಸಮುದಾಯ) ಒಕ್ಕೊರಲ ಆಗ್ರಹ ಎಂದು ಪುನರುಚ್ಚರಿಸಿದರು.

ಓದಲೇ ಬೇಕಾದ ಸುದ್ದಿ