ವಿಕ ಸುದ್ದಿಲೋಕ ತೆರಕಣಾಂಬಿಜಗಜ್ಯೋತಿ ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆಗಳು ಹಾಗೂ ಬರಹಗಳನ್ನು ಪ್ರಕಟಿಸಿರುವುದು ಖಂಡನೀಯ ಎಂದು ಮುಖಂಡ ಕಡಬೂರು ಮಂಜುನಾಥ್ ಆಕ್ರೋಶ ವ್ಯಕ್ತಪಡಿದ್ದಾರೆ.
ಬಸವ ಮಂಟಪ ಕೃತಿ ಹಾಗೂ ಲೇಖಕ ರವಿ ಹಂಜ್ ಅವರ ಹೇಳಿಕೆಗಳ ಸುತ್ತ ಉಂಟಾಗಿರುವ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ‘‘ಸಂಶೋಧನೆ ಹೆಸರಿನಲ್ಲಿಸಮಾಜದ ಮಹನೀಯರ ಘನತೆಗೆ ಧಕ್ಕೆ ತರುವ ಹಾಗೂ ಜನರ ಭಾವನೆಗಳಿಗೆ ನೋವುಂಟು ಮಾಡುವ ರೀತಿಯಲ್ಲಿವಿಚಾರಗಳನ್ನು ಮಂಡಿಸುವುದನ್ನು ಸಹಿಸಲು ಸಾಧ್ಯವಿಲ್ಲ,’’ಎಂದರು.
‘‘ಬಸವಣ್ಣನವರು ಕೇವಲ ಒಂದು ಸಮುದಾಯದ ನಾಯಕರು ಮಾತ್ರವಲ್ಲ, ಸಮಾನತೆ, ಕಾಯಕ, ದಾಸೋಹ, ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯದ ಸಂದೇಶ ಸಾರಿದ ವಿಶ್ವಮಾನವ. 12ನೇ ಶತಮಾನದಲ್ಲಿಯೇ ಜಾತಿ ವ್ಯವಸ್ಥೆ ಮತ್ತು ಸಾಮಾಜಿಕ ಅಸಮಾನತೆಗಳ ವಿರುದ್ಧ ಧ್ವನಿ ಎತ್ತಿ ಸಮಾಜದಲ್ಲಿಹೊಸ ಚಿಂತನೆಗೆ ನಾಂದಿ ಹಾಡಿದ ಮಹಾನ್ ಚಿಂತಕರಾಗಿದ್ದಾರೆ. ಇಂತಹ ವ್ಯಕ್ತಿತ್ವದ ಕುರಿತು ಮಾತನಾಡುವಾಗ ಜವಾಬ್ದಾರಿ ಮತ್ತು ಗೌರವ ಇರಬೇಕು,’’ ಎಂದರು.
‘‘ಇತಿಹಾಸದ ಕುರಿತು ಸಂಶೋಧನೆ ನಡೆಸಲು ಹಾಗೂ ಅಭಿಪ್ರಾಯ ವ್ಯಕ್ತಪಡಿಸಲು ಸ್ವಾತಂತ್ರ್ಯವಿದೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿಮಹನೀಯರ ಘನತೆಗೆ ಧಕ್ಕೆ ತರುವುದು ಹಾಗೂ ಸಮುದಾಯದ ಭಾವನೆಗಳನ್ನು ಕೆರಳಿಸುವುದು ಸರಿಯಲ್ಲ. ಸಂಶೋಧನೆ ಸತ್ಯಾಂಶ ಮತ್ತು ದಾಖಲೆಗಳ ಆಧಾರದಲ್ಲಿರಬೇಕು,’’ ಎಂದು ಹೇಳಿದರು.
‘‘ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಿರುವುದು ಹಾಗೂ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ವಿಚಾರವನ್ನು ಸ್ವಾಗತಿಸಿದ ಅವರು, ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು,’’ ಎಂದು ಕಡಬೂರು ಮಂಜುನಾಥ್ ಆಗ್ರಹಿಸಿದರು.