ಗುರುವಾರ ರಾತ್ರಿ ನಡೆದ ಈ ರೋಚಕ ಪಂದ್ಯದಲ್ಲಿ, ಭಾರತೀಯ ಮಹಿಳಾ ತಂಡವು ಏಳು ಬಾರಿಯ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ತಜ್ಞರು ಆಸ್ಟ್ರೇಲಿಯಾ ಗೆಲ್ಲುತ್ತದೆ ಎಂದೇ ಊಹಿಸಿದ್ದರು. ಆದರೆ, ಭಾರತೀಯ ಆಟಗಾರ್ತಿಯರು ತಮ್ಮ ಅದ್ಭುತ ಪ್ರದರ್ಶನದಿಂದ ಎಲ್ಲರ ಊಹೆಗಳನ್ನು ತಲೆಕೆಳಗು ಮಾಡಿದರು. 339 ರನ್‌ಗಳ ಗುರಿ ಬೆನ್ನಟ್ಟುವಾಗ ಭಾರತದ ಗೆಲುವಿನ ನಿರೀಕ್ಷೆ ಕಡಿಮೆಯಾಗಿತ್ತು. ಆದರೂ, ನಾಯಕಿ ಹರ್ಮನ್‌ಪ್ರಿತ್ ಕೌರ್ ಮತ್ತು ಜೆಮಿಮಾ ರೋಡ್ರಿಗಸ್ ಅವರು ಧೃತಿಗೆಡದೆ, ನಿಧಾನವಾಗಿ ಇನಿಂಗ್ಸ್ ಕಟ್ಟುತ್ತಾ ಹೋದ ರೀತಿ ಕ್ರಿಕೆಟ್ ಜಗತ್ತೇ ನೆನಪಿಟ್ಟುಕೊಳ್ಳುವಂತಿದೆ. ಇದು ಭಾರತೀಯ ಕ್ರಿಕೆಟ್ ತಂಡಕ್ಕೆ ಅವಿಸ್ಮರಣೀಯ ಗೆಲುವಾಗಿದೆ.ಈ ಪಂದ್ಯದ ಹೀರೋ ಆಗಿ ಹೊರಹೊಮ್ಮಿದ ಜೆಮಿಮಾ ರೋಡ್ರಿಗಸ್, ತಮ್ಮ ಬ್ಯಾಟಿಂಗ್ ಮೂಲಕವೇ ತಮ್ಮ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್, ಡ್ಯಾನ್ಸ್, ಗಿಟಾರ್‌ಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಜೆಮಿಮಾ, ಕ್ರಿಕೆಟ್ ಬಿಟ್ಟು ಬೇರೆಡೆ ಗಮನ ಹರಿಸುತ್ತಿದ್ದಾರೆ ಎಂಬ ಟ್ರೋಲ್‌ಗಳಿಗೆ ಗುರಿಯಾಗಿದ್ದರು. ಆದರೆ, ತಮ್ಮ ಗುರಿ ಅತ್ಯುತ್ತಮ ಬ್ಯಾಟಿಂಗ್ ಮಾಡುವುದೇ ಎಂಬುದನ್ನು ಅವರು ಈ ಪಂದ್ಯದಲ್ಲಿ ಸಾಬೀತುಪಡಿಸಿದರು. ಅವರ ಬ್ಯಾಟಿಂಗ್ ಸಾಹಸದಿಂದಾಗಿ ಭಾರತ, ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಲು ಸಾಧ್ಯವಾಯಿತು. ಪಂದ್ಯ ಮುಗಿದ ನಂತರ ಅವರ ಕಣ್ಣಲ್ಲಿ ಹೊಮ್ಮಿದ ದುಃಖ, ಅವರ ಹೋರಾಟವನ್ನು ಜಗತ್ತಿಗೆ ತೋರಿಸಿತು.
ಭಾರತ ತಂಡದ ಈ ಐತಿಹಾಸಿಕ ಸಾಧನೆಗೆ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರ ಹರಿದುಬಂದಿದೆ. ರೋಹಿತ್ ಶರ್ಮ, ಕೊಹ್ಲಿ, ಗೌತಮ್ ಗಂಭೀರ್, ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಎಬಿ ಡಿವಿಲಿಯರ್ಸ್ ಮುಂತಾದ ಕ್ರಿಕೆಟಿಗರು ಭಾರತೀಯ ವನಿತೆಯರ ಆಟವನ್ನು ಕೊಂಡಾಡಿದ್ದಾರೆ. ಸಿನಿಮಾ ರಂಗದ ದಿಗ್ಗಜರಾದ ರಿಷಬ್ ಶೆಟ್ಟಿ, ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ವರುಣ್ ಧವನ್, ಕರೀನಾ ಕಪೂರ್ ಕೂಡ ತಂಡಕ್ಕೆ ಅಭಿನಂದನೆ ಸಲ್ಲಿಸಿ, ಫೈನಲ್‌ಗೆ ಶುಭ ಹಾರೈಸಿದ್ದಾರೆ.
48ನೇ ಓವರ್‌ನ ಮೂರನೇ ಎಸೆತದಲ್ಲಿ ಅಮನ್‌ಜೋತ್ ಕೌರ್ ಚೆಂಡನ್ನು ಬೌಂಡರಿಗೆ ಅಟ್ಟುತ್ತಿದ್ದಂತೆಯೇ ಮೈದಾನದಲ್ಲಿದ್ದ ಭಾರತೀಯ ಪ್ರೇಕ್ಷಕರ ಸಂಭ್ರಮ ಮುಗಿಲುಮುಟ್ಟಿತ್ತು. ಗೆಲುವಿನ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದ ನಾಯಕಿ ಹರ್ಮನ್‌ಪ್ರಿತ್, ಪಕ್ಕದಲ್ಲಿದ್ದ ಕೋಚ್ ಅನಿಲ್ ಮಜುಂದಾರ್ ಅವರೊಂದಿಗೆ ಸಂಭ್ರಮ ಹಂಚಿಕೊಂಡರು. ಸ್ಮೃತಿ ಮಂಧಾನ ಸೇರಿದಂತೆ ಡಗ್‌ಔಟ್‌ನಲ್ಲಿದ್ದ ಆಟಗಾರ್ತಿಯರು ಪರಸ್ಪರ ಅಭಿನಂದಿಸಿಕೊಂಡರು. ಬಳಿಕ ಮೈದಾನದೊಳಗೆ ನುಗ್ಗಿದ ಕೌರ್, ಜೆಮಿಮಾರನ್ನು ಅಪ್ಪಿಕೊಂಡ ಕ್ಷಣ ಅತ್ಯಂತ ಭಾವನಾತ್ಮಕವಾಗಿತ್ತು. ಇಬ್ಬರ ಕಣ್ಣಲ್ಲೂ ಆನಂದಬಾಷ್ಪ ತುಂಬಿತ್ತು. ಜೆಮಿಮಾ ಮೈದಾನದ ಸುತ್ತಲೂ ನಡೆಯುತ್ತಾ, ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಫ್ಲೈಯಿಂಗ್ ಕಿಸ್ ನೀಡಿ ಧನ್ಯವಾದ ಅರ್ಪಿಸಿದರು.
ಸೆಮಿಫೈನಲ್‌ಗೂ ಮುನ್ನ ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ಭಾರತವನ್ನು 3 ವಿಕೆಟ್‌ಗಳಿಂದ ಸೋಲಿಸಿತ್ತು. ಆ ಗೆಲುವಿನಿಂದ ಆಸ್ಟ್ರೇಲಿಯಾ 16 ಪಂದ್ಯಗಳ ಸತತ ಸೋಲಿನ ಸರಣಿಯನ್ನು ಮುರಿಯಿತು. ವಿಶ್ವಕಪ್‌ನಲ್ಲಿ 7 ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ, ಸೆಮಿಫೈನಲ್‌ನಲ್ಲಿ ಗೆಲ್ಲುವ ಫೇವರೆಟ್ ತಂಡವಾಗಿತ್ತು. ಪ್ರಸಕ್ತ ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದೆ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಆ ತಂಡದ ನಿರೀಕ್ಷೆಗಳನ್ನು ಭಾರತೀಯ ಮಹಿಳಾ ತಂಡ ಹುಸಿಯಾಗಿಸಿದೆ.
ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ರೋಚಕ ಪಂದ್ಯಕ್ಕೆ ಪ್ರೇಕ್ಷಕರ ಹಾಜರಿ ಅಪಾರವಾಗಿತ್ತು. ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರಿತ್ ಅವರ ಮಾಸ್ಟರ್ ಸ್ಟ್ರೋಕ್‌ಗಳು, ಕೊನೆಯ ಹಂತದಲ್ಲಿ ರಿಚಾ ಘೋಷ್ ಸಿಡಿಸಿದ ಸಿಕ್ಸರ್‌ಗಳು, ಫೋರ್‌ಗಳು ಪ್ರೇಕ್ಷಕರ ಹೃದಯ ಬಡಿತವನ್ನು ಹೆಚ್ಚಿಸಿದ್ದವು. "ಭಾರತ್ ಮಾತಾ ಕೀ ಜೈ", "ವಂದೇ ಮಾತರಂ" ಘೋಷಣೆಗಳು ಮೈದಾನದಲ್ಲಿ ಪ್ರತಿಧ್ವನಿಸಿದವು. ಐಸಿಸಿ ಮುಖ್ಯಸ್ಥ ಜಯ್ ಶಾ, ಆಸ್ಟ್ರೇಲಿಯಾ ಪುರುಷರ ತಂಡದ ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಮೈದಾನದಲ್ಲಿ ಉಪಸ್ಥಿತರಿದ್ದು ತಂಡವನ್ನು ಹುರಿದುಂಬಿಸಿದರು. ಕಿಕ್ಕಿರಿದ ಗ್ಯಾಲರಿಗಳಲ್ಲಿ ಕ್ರಿಡಾಭಿಮಾನಿಗಳು ತಂಡಕ್ಕೆ ಅಭೂತಪೂರ್ವ ಪ್ರೋತ್ಸಾಹ ನೀಡಿದರು. ಕೊನೆಗೆ ಭಾರತ ಜಯಗಳಿಸಿದಾಗ, ಜೆಮಿಮಾ ರೋಡ್ರಿಗಸ್ ಪ್ರೇಕ್ಷಕರಿಗೆ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ತಮ್ಮ ಕೃತಜ್ಞತೆ ಸಲ್ಲಿಸಿದರು.

