ವಿಕ ಸುದ್ದಿಲೋಕ ಸುರಪುರ ಭಾರತ್ ಜೋಡೊ ಯುವ ಸಂಘ (ಬಿಜೆವೈಎಸ್ ) ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾ ಗಿದೆ. ಯುವಶಕ್ತಿಯನ್ನು ಸಬಲೀಕರಣ ಗೊಳಿಸಲು ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿತೊಡಗಿಸಿಕೊಳ್ಳುವ ವಿಶಿಷ್ಟ ಯೋಜನೆಯಾಗಿದೆ ಎಂದು ತಾಲೂಕು ಪಂಚಾಯಿತಿ ಇಒ ಬಸವರಾಜ ಸಜ್ಜನ್ ಹೇಳಿದರು. ಇಲ್ಲಿನ ತಾಪಂ ಸಭಾಂಗಣದಲ್ಲಿಏರ್ಪಡಿಸಿದ್ದ ಭಾರತ್ ಜೋಡೊ ಯುವ ಸಂಘಗಳ ಮಾರ್ಗದರ್ಶಕರ ಸಭೆಯಲ್ಲಿಮಾತನಾಡಿದ ಅವರು, ಭಾರತ್ ಜೋಡೋ ಯುವ ಸಂಘಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಯುವಕರನ್ನು ಒಗ್ಗೂಡಿಸಿ ಅವರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳಬೇಕೆಂದು ಮಾರ್ಗದರ್ಶಕರಿಗೆ ತಿಳಿಸಿದರು. ಯುವ ಸಂಘಗಳ ಮೂಲಕ ಗ್ರಾಮೀಣ ಯುವ ಜನರಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸುವುದರ ಜತೆಗೆ ಕ್ರೀಡೆ, ಶಿಕ್ಷಣ, ಕೌಶಲಾಭಿವೃದ್ಧಿ ಚಟುವಟಿಕೆಗಳಲ್ಲಿಯುವಕರ ಪಾಲ್ಗೊಳ್ಳುವಿಕೆಯನ್ನು ಸಕ್ರಿಯವಾಗಿ ಹೆಚ್ಚಿಸಬೇಕು. ಸಂಘಗಳ ಮೂಲಕ ಸ್ವಚ್ಛತೆ, ಪರಿಸರ ಸಂರಕ್ಷಣೆ, ಸಾಮಾಜಿಕ ಜಾಗೃತಿ, ಸರಕಾರಿ ಯೋಜನೆಗಳ ಕುರಿತು ಅರಿವು ಮೂಡಿಸುವುದು, ಸ್ವಯಂಸೇವಾ ಚಟುವಟಿಕೆಗಳಲ್ಲಿತೊಡಗುವಂತೆ ಯುವಕರನ್ನು ಉತ್ತೇಜಿಸಬೇಕು ಎಂದು ಕರೆ ನೀಡಿದರು. ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಗ್ರಾಮಮಟ್ಟದಲ್ಲಿಕ್ರೀಡಾಕೂಟಗಳನ್ನು ಆಯೋಜಿಸಬೇಕು. ಯುವಕರಲ್ಲಿನ ಪ್ರತಿಭೆ ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಬೇಕು. ಯುವಕರಲ್ಲಿಆರೋಗ್ಯಕರ ಜೀವನಶೈಲಿಯ ಮಹತ್ವ ತಿಳಿಸಬೇಕು ಎಂದು ತಿಳಿಸಿದರು. ಭಾರತ ಜೋಡೊ ಯುವ ಸಂಘಗಳ ಮಾರ್ಗದರ್ಶಕರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.