ವಿಕ ಸುದ್ದಿಲೋಕ ಕಲಬುರಗಿ ಜನತಾದಳ (ಸಂಯುಕ್ತ) ಕರ್ನಾಟಕದಿಂದ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಪ್ರೊ.ಶಂಕರ ರೆಡ್ಡಿ ಪಾಟೀಲ್ ಅವರನ್ನು ಕಣಕ್ಕೆ ಇಳಿಸಲಾಗುವುದು ಎಂದು ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಜಿ.ಪಟೇಲ್ ಘೋಷಣೆ ಮಾಡಿದರು. ನಗರದ ಪತ್ರಿಕಾ ಭವನದಲ್ಲಿಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದರು. ಶಂಕರರೆಡ್ಡಿ ಪಾಟೀಲ್ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷರಾಗಿ ನೇಮಿಸುವುದರ ಜತೆಗೆ ಚುನಾವಣಾ ಕಣಕ್ಕೆ
ಇಳಿಸಲಾಗಿದೆ ಎಂದರು. ರಾಜ್ಯದ ನಾಲ್ಕು ಕ್ಷೇತ್ರಗಳಲ್ಲಿಅಭ್ಯರ್ಥಿಗಳ ನಿಲ್ಲಿಸಲು ಚಿಂತನೆ ನಡೆದಿದ್ದು, ಈಗಾಗಲೇ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಜೆಡಿಯು ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಡಾ.ಕೆ.ನಾಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು. ಆಗ್ನೇಯ ಪದವೀಧರ ಕ್ಷೇತ್ರವು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆ ಒಳಪಡಲಿದೆ. ಈಗಾಗಲೇ ಐದು ಜಿಲ್ಲೆಗಳಲ್ಲಿಸಂಚಾರ ಆರಂಭಿಸಿದ್ದು ತಾಲೂಕು, ಹೋಬಳಿ ಹಾಗೂ ಜಿಲ್ಲಾಮಟ್ಟಗಳಲ್ಲಿಪಕ್ಷದ ಸಿದ್ಧಾಂತಗಳ ಬಗ್ಗೆ ಪ್ರಚಾರ ಪಡಿಸಲಾಗುತ್ತಿದೆ ಎಂದರು. ಚುನಾವಣೆಗಳಲ್ಲಿಯಾವುದೇ ಹಣ, ಹೆಂಡಗಳನ್ನು ಬಳಕೆ ಮಾಡದೆ ಈಗಾಗಲೇ ಒಂದು ಬಾರಿ ನಾನು ಗೆದ್ದಿರುತ್ತೇನೆ. ಅದರಂತೆ, ಈ ವಿಧಾನ ಪರಿಷತ್ ಚುನಾವಣೆಯಲ್ಲಿಯಾವುದೇ ಆಮಿಷ ಆಕಾಂಕ್ಷಿಗಳಿಲ್ಲದೆ ಸ್ಪರ್ಧೆಗೆ ತಯಾರಾಗಬೇಕು. ಮಹಾಗಾಂವ್ ತಾಲೂಕು ರಚನೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ ಪಕ್ಷ ಬೆಂಬಲ ವ್ಯಕ್ತಪಡಿಸಿದೆ ಎಂದು ಒತ್ತಾಯಿಸಿದರು. ರಾಜ್ಯ ಉಪಾಧ್ಯಕ್ಷ ಸುಭಾಶ್ಚಂದ್ರ ಖಪಾಟೆ, ಜಿಲ್ಲಾಧ್ಯಕ್ಷ ಶಂಕರ ರೆಡ್ಡಿ ಪಾಟೀಲ್ ಇತರರಿದ್ದರು.

