ಮನರೇಗಾ ಬಚಾವೋ ಆಂದೋಲನ

Contributed byKENCHE GOWDA|Vijaya Karnataka

ಕಾಂಗ್ರೆಸ್ ಪಕ್ಷವು ಮನರೇಗಾ ಯೋಜನೆಯನ್ನು ಮರು ಜಾರಿ ಮಾಡುವಂತೆ ಒತ್ತಾಯಿಸಿ ಹೋರಾಟ ನಡೆಸಲು ನಿರ್ಧರಿಸಿದೆ. ಜನವರಿ 26 ರಿಂದ ಬ್ಲಾಕ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಈ ಹೋರಾಟ ನಡೆಯಲಿದೆ. ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸೂಚಿಸಲಾಗಿದೆ. ಈ ಹೋರಾಟದಲ್ಲಿ ಆಸಕ್ತಿ ತೋರದವರಿಗೆ ಪದಾಧಿಕಾರಿ ಹುದ್ದೆಗಳಿಂದ ಗೇಟ್‌ಪಾಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

mahatma gandhis echo mnrega save movement
ಬೆಂಗಳೂರು: ಕೇಂದ್ರ ಸರ್ಕಾರದ 'ವಿಬಿ- ಜಿ ರಾಮ್‌ ಜಿ' ಯೋಜನೆಯನ್ನು ರದ್ದುಪಡಿಸಿ, ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿದ್ದ ಮನರೇಗಾ ಯೋಜನೆಯನ್ನು ಮರು ಜಾರಿ ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷವು 'ಮನರೇಗಾ ಬಚಾವೋ' ಹೋರಾಟವನ್ನು ಜನವರಿ 26 ರಿಂದ ರಾಜ್ಯಾದ್ಯಂತ ಹಮ್ಮಿಕೊಂಡಿದೆ. ಈ ಹೋರಾಟದಲ್ಲಿ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸೂಚನೆ ನೀಡಲಾಗಿದೆ. ಈ ಕುರಿತು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಸಚಿವರು, ಶಾಸಕರು, ಸಂಸದರು, ಪದಾಧಿಕಾರಿಗಳು ಭಾಗವಹಿಸಿ ಹೋರಾಟದ ರೂಪುರೇಷೆಗಳನ್ನು ಅಂತಿಮಗೊಳಿಸಿದರು.

ಈ ಹೋರಾಟವು ಬ್ಲಾಕ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ನಡೆಯಲಿದ್ದು, ಜನವರಿ 26 ರಿಂದ ಪಂಚಾಯಿತಿ, ತಾಲೂಕು, ಜಿಲ್ಲಾ ಮಟ್ಟದಲ್ಲೂ ಪ್ರತಿಭಟನೆಗಳು ನಡೆಯಲಿವೆ. ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದ ಮುಖಂಡರಿಗೆ ಪದಾಧಿಕಾರಿ ಹುದ್ದೆಗಳಿಂದ ಗೇಟ್‌ಪಾಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದ ಮನರೇಗಾ ಯೋಜನೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಅಂತ್ಯಗೊಳಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಕುರಿತು ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತಾಲೂಕು ಮಟ್ಟದ ನಾಲ್ಕೈದು ಪಾದಯಾತ್ರೆಗಳಲ್ಲಿ ತಾವೂ ಭಾಗವಹಿಸುವುದಾಗಿ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, " ಮಹಾತ್ಮ ಗಾಂಧಿ ಅವರ ಹೆಸರನ್ನೇ ಹೇಳಲು ಬಿಜೆಪಿಗೆ ಅಲರ್ಜಿ. ಅವರ ಹೆಸರಿನಲ್ಲಿದ್ದ ಬಡವರ ಪರವಾದ ಮನರೇಗಾ ಯೋಜನೆಯನ್ನು ರದ್ದುಪಡಿಸಿ ಹೊಸ ಕಾಯಿದೆ ಜಾರಿಗೊಳಿಸಿದೆ. ಇದರ ವಿರುದ್ಧ ಜನಜಾಗೃತಿ ಮೂಡಿಸಿ, ಜನಾಂದೋಲನ ಆಗಬೇಕು. ಉತ್ತರ ಭಾರತದ ರೈತರ ಹೋರಾಟದಂತೆ ನಮ್ಮ ಹೋರಾಟ ಮುಂದುವರಿಯಬೇಕು" ಎಂದು ಕರೆ ನೀಡಿದರು. ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ಗ್ರಾಮೀಣ ಬಡವರಿಗೆ ಕೆಲಸದ ಹಕ್ಕು ಕಲ್ಪಿಸುವ ಮನರೇಗಾ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಇದು ನಿರುದ್ಯೋಗ, ಆಹಾರ, ಅರಣ್ಯವಾಸಿಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿತ್ತು. ಆಹಾರ ಭದ್ರತಾ ಕಾಯಿದೆ, ಉದ್ಯೋಗ ಖಾತರಿ , ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು, ಅರಣ್ಯವಾಸಿಗಳ ಹಕ್ಕು ಮುಂತಾದ ಐತಿಹಾಸಿಕ ಕಾಯ್ದೆಗಳನ್ನು ಜಾರಿಗೆ ತಂದಿದ್ದರು. 20 ವರ್ಷಗಳಿಂದ ಜಾರಿಯಲ್ಲಿದ್ದ ಮನರೇಗಾ ಯೋಜನೆಯಡಿ 6.21 ಕೋಟಿ ಮಹಿಳೆಯರು ಸೇರಿದಂತೆ 12.16 ಕೋಟಿ ಕಾರ್ಮಿಕರಿಗೆ ದುಡಿಯುವ ಅವಕಾಶ ಸಿಕ್ಕಿತ್ತು. ಈ ಕೆಲಸದ ಹಕ್ಕು ಕಸಿದುಕೊಳ್ಳುವ ಮೂಲಕ ಕೇಂದ್ರ ಸರ್ಕಾರ ಗಾಂಧೀಜಿಯವರನ್ನು ಮತ್ತೊಮ್ಮೆ ಹತ್ಯೆ ಮಾಡುವ ಕೆಲಸ ಮಾಡಿದೆ ಎಂದು ಅವರು ದೂರಿದರು.

"ಈ ಯೋಜನೆಯ ರಾಮನು ದಶರಥ ರಾಮ, ಸೀತಾರಾಮ ಅಥವಾ ಕೌಶಲ್ಯಾ ರಾಮನಲ್ಲ. ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ. ಇದನ್ನು ಎಐಸಿಸಿ ವರಿಷ್ಠರು ಗಂಭೀರವಾಗಿ ಪರಿಗಣಿಸಿ ಹೋರಾಟ ಕೈಗೆತ್ತಿಕೊಂಡಿದ್ದು, ಅದನ್ನು ರಾಜ್ಯದಲ್ಲಿ ಜನಾಂದೋಲನವಾಗಿ ರೂಪಿಸುವ ಕೆಲಸಕ್ಕೆ ಎಲ್ಲ ಕಾಂಗ್ರೆಸ್ಸಿಗರೂ ಕೈಜೋಡಿಸಬೇಕು" ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಮನರೇಗಾ ಯೋಜನೆಯಿಂದ ರಾಜ್ಯದ ಪ್ರತಿ ಪಂಚಾಯಿತಿಗಳಿಗೆ ಪ್ರತಿ ವರ್ಷ ಕನಿಷ್ಠ 1 ರಿಂದ 2 ಕೋಟಿ ರೂ. ಸರಾಸರಿ ಅನುದಾನ ಸಿಗುತ್ತಿತ್ತು. ಇದನ್ನು ಬಳಸಿ ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯ ಬಲಪಡಿಸುವ ಕೆಲಸ ಆಗುತ್ತಿತ್ತು. ಬಡವರಿಗೆ ಕೂಲಿ ಸಿಗುತ್ತಿತ್ತು. ಪಂಚಾಯತ್‌ಗಳು ಕಾಮಗಾರಿಗಳನ್ನು ತೀರ್ಮಾನಿಸುತ್ತಿದ್ದವು. ಈ ಯೋಜನೆಯನ್ನು ನಾಶಪಡಿಸುವ ದುಷ್ಟ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ಹೇಳಿದರು. ಪಕ್ಷದ ಹೈಕಮಾಂಡ್ ನಿರ್ದೇಶನದಂತೆ ಮನರೇಗಾ ಮರು ಜಾರಿಗೆ ಒತ್ತಾಯಿಸಿ ಹೋರಾಟ ನಡೆಸಲಾಗುತ್ತಿದ್ದು, ಎಲ್ಲ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಎಂಎಲ್ಸಿಗಳು ನೇತೃತ್ವ ವಹಿಸಿಕೊಳ್ಳಬೇಕು. ಶಾಸಕರಿಲ್ಲದ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಲಾಗುತ್ತಿದೆ. ಜಿಲ್ಲಾಧ್ಯಕ್ಷರ ಕ್ರಿಯಾಶೀಲತೆಯೂ ಈ ವೇಳೆ ಗೊತ್ತಾಗಲಿದ್ದು, ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸದ ಪದಾಧಿಕಾರಿಗಳನ್ನು ಮುಂದುವರಿಸುವುದಿಲ್ಲ. ಸ್ಥಳೀಯ ಮಟ್ಟದಲ್ಲಿ ಪ್ರತಿಭಟನೆ ವೇಳೆ ಎಲ್‌ಇಡಿ ಪರದೆ ಅಳವಡಿಸಿ ಸೋನಿಯಾ ಗಾಂಧಿ ಅವರ ಸಂದೇಶವನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಕೆ.ಜೆ.ಜಾರ್ಜ್, ಚಲುವರಾಯಸ್ವಾಮಿ, ಸುಧಾಕರ್, ಮುನಿಯಪ್ಪ, ಕೃಷ್ಣಭೈರೇಗೌಡ, ಶಿವರಾಜ್ ತಂಗಡಗಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.