ಅನುಪಮ ಹೆಗಡೆ
ಖಾರದ ಅವಲಕ್ಕಿ ಪೊಂಗಲ್
ಸಾಮಗ್ರಿ: 3/4 ಕಪ್ ಹೆಸರು ಬೇಳೆ, 1 ಕಪ್ ದಪ್ಪ ಅವಲಕ್ಕಿ, 3 ಹಸಿರು ಮೆಣಸಿನಕಾಯಿ, 1/2 ಇಂಚು ಶುಂಠಿ, ಕಾಯಿ ತುರಿ 1/4 ಬಟ್ಟಲು, 1 ಚಮಚ ಜೀರಿಗೆ, 1/4 ಚಮಚ ಕಾಳು ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಇಂಗು, ಚಿಟಿಕೆ ಅರಿಶಿಣ, ಗೋಡಂಬಿ 12, 4 ಚಮಚ ತುಪ್ಪ.
ವಿಧಾನ: ಮುಕ್ಕಾಲು ಬಟ್ಟಲು ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು ಹುರಿದುಕೊಳ್ಳಿ. ಅದಕ್ಕೆ 3ರಷ್ಟು ನೀರು ಸೇರಿಸಿ. ಚಿಟಿಕೆ ಅರಿಶಿಣ ಸೇರಿಸಿ, ತುರಿದ ಶುಂಠಿ, ಚಿಟಿಕೆ ಇಂಗು ಹಾಕಿ, ಕುಕ್ಕರ್ ಅಲ್ಲಿ2 ವಿಷಲ್ ಕೂಗಿಸಿಕೊಳ್ಳಿ. ಇತ್ತ ಕಡೆ ಅವಲಕ್ಕಿಯನ್ನು ಚೆನ್ನಾಗಿ ತೊಳೆದಿಡಿ. ಇನ್ನೊಂದು ದಪ್ಪ ತಳದ ಪಾತ್ರೆಯಲ್ಲಿ3 ಲೋಟ ನೀರು ಹಾಕಿ ಕುದಿಯಲು ಇಡಿ. ಅದಕ್ಕೆ ತೊಳೆದು ಇಟ್ಟ ಅವಲಕ್ಕಿಯನ್ನು ಹಾಕಿ ಅದಕ್ಕೆ ಉಪ್ಪು ಸೇರಿಸಿ ಚೆನ್ನಾಗಿ ಮೆತ್ತಗೆ ಆಗುವವರೆಗೆ ಬೇಯಿಸಿಕೊಳ್ಳಿ. ಈಗ ಕುಕ್ಕರ್ ನಲ್ಲಿಬೇಯಿಸಿದ ಹೆಸರುಬೇಳೆಯನ್ನು ಬೇಯುತ್ತಿರುವ ಅವಲಕ್ಕಿಗೆ ಸೇರಿಸಿ. ಒಗ್ಗರಣೆ ಸೌಟಿಗೆ 4 ಚಮಚ ತುಪ್ಪ, ಗೋಡಂಬಿ ಚೂರು, ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ, ಜೀರಿಗೆ ಹಾಕಿ ಕೆಂಪಗೆ ಹುರಿದು ಬೇಯುತ್ತಿರುವ ಅವಲಕ್ಕಿ ಹೆಸರುಬೇಳೆ ಮಿಶ್ರಣಕ್ಕೆ ಸೇರಿಸಿ, ಕಾಲು ಚಮಚ ಕಾಳು ಮೆಣಸಿನ ಪುಡಿ, ಕಾಲು ಬಟ್ಟಲು ತೆಂಗಿನತುರಿ, ಸಣ್ಣಗೆ ಹೆಚ್ಚಿಟ್ಟ ಕೊತ್ತಂಬರಿ ಸೇರಿಸಿ ಇನ್ನೊಂದು ಕುದಿ ಕುದಿಸಿದರೆ ರುಚಿಯಾದ ಖಾರದ ಅವಲಕ್ಕಿ ಪೊಂಗಲ್ ಸವಿಯಲು ಸಿದ್ಧ.
ನೈ ಪಾಯಸ
ಸಾಮಗ್ರಿ: 3/4 ಕಪ್ ಅಕ್ಕಿ, 4 ಕಪ್ ತೆಳ್ಳಗಿನ ಮಲೆನಾಡು ಬೆಲ್ಲ, ಏಲಕ್ಕಿ ಪುಡಿ, ತುಪ್ಪ 1/2 ಕಪ್ , ಗೋಡಂಬಿ 10-12, ಹಸಿ ತೆಂಗಿನಕಾಯಿ 1/4 ಭಾಗ.
ವಿಧಾನ: ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಒಂದಕ್ಕೆ 4 ರಷ್ಟು ನೀರು ಹಾಕಿ ಮೆತ್ತಗೆ ಕುಕ್ಕರ್ ಅಲ್ಲಿಇಟ್ಟು 3 ವಿಜಲ್ ಕೂಗಿಸಿ ಇಡಿ. ಒಂದು ದಪ್ಪ ತಳದ ಪಾತ್ರೆ ತೆಗೆದುಕೊಂಡು ಅದಕ್ಕೆ ಕುಕ್ಕರ್ ಅಲ್ಲಿಬೇಯಿಸಿಟ್ಟ ಗಂಜಿಯಂತಹ ಅನ್ನ, ತೆಗೆದಿಟ್ಟ ಬೆಲ್ಲಸೇರಿಸಿ ಅದಕ್ಕೆ, 2 ಚಮಚ ತುಪ್ಪ ಬದಿಯಲ್ಲಿಎತ್ತಿಟ್ಟು ಉಳಿದ ತುಪ್ಪವನ್ನು ಹಾಕಿ ಅನ್ನ ಮತ್ತು ಬೆಲ್ಲದ ಮಿಶ್ರಣವನ್ನು ಸಣ್ಣ ಉರಿಯಲ್ಲಿಇಟ್ಟು ಪಾಕ ಬರುವವರೆಗೂ ಸೌಟಾಡಿಸುತ್ತ ಇರಿ. ಚಿಟಿಕೆ ಏಲಕ್ಕಿ ಪುಡಿ ಸೇರಿಸಿಕೊಳ್ಳಿ.
ಈ ಮಿಶ್ರಣ ಪೂರ್ತಿ ಗಟ್ಟಿಯಾಗಬಾರದು. ಈಗ ಒಲೆಯಿಂದ ಇಳಿಸಿ ಸಣ್ಣಗೆ ಹೆಚ್ಚಿದ ಹಸಿ ತೆಂಗಿನಕಾಯಿ ಚೂರು, ಗೋಡಂಬಿ ಚೂರನ್ನು 2 ಚಮಚ ತುಪ್ಪದಲ್ಲಿಕೆಂಪಗೆ ಹುರಿದು ಮಾಡಿಟ್ಟ ಸಿಹಿ ಅನ್ನಕ್ಕೆ ಸೇರಿಸಿ.
ಸಿಹಿಗೆಣಸಿನ ರೈತಾ
ಸಾಮಗ್ರಿ: 2 ಬಟ್ಟಲು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಸಿಹಿ ಗೆಣಸು, 2 ಹಸಿಸು ಮೆಣಸಿನಕಾಯಿ, 1 1/2 ಕಪ್ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಹೆಚ್ಚಿದ ಕೊತ್ತಂಬರಿಸೊಪ್ಪು 1 ಚಮಚ, 2 ಚಮಚ ತುಪ್ಪ, 4 ಕರಿಬೇವಿನ ಎಲೆ, ಜೀರಿಗೆ 1/2 ಚಮಚ, ಚಿಟಿಕೆ ಇಂಗು.
ವಿಧಾನ: ಮೊದಲಿಗೆ ಹೆಚ್ಚಿಟ್ಟ ಸಿಹಿಗೆಣಸನ್ನು ನೀರಿನಲ್ಲಿಮೆತ್ತಗೆ ಬೇಯಿಸಿಕೊಳ್ಳಿ. ಬೇಯಿಸಿದ ಗೆಣಸನ್ನು ನೀರು ಬಗ್ಗಿಸಿ ಆರಿಸಿಕೊಳ್ಳಿ. ಈಗ ಅದಕ್ಕೆ ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ. ಸಣ್ಣಗೆ ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪನ್ನು ಕೂಡ ಸೇರಿಸಿಕೊಳ್ಳಿ. ಒಗ್ಗರಣೆ ಸೌಟಿಗೆ 2 ಚಮಚ ತುಪ್ಪ ಹಾಕಿ ಜೀರಿಗೆ, ಸಾಸಿವೆ, ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ, ಚಿಟಿಕೆ ಇಂಗು, ಕರಿಬೇವು ಹಾಕಿ ಒಗ್ಗರಿಸಿ ಗೆಣಸು ಮೊಸರಿನ ಮಿಶ್ರಣಕ್ಕೆ ಸೇರಿಸಿ. ಎಲ್ಲವೂ ಚೆನ್ನಾಗಿ ಹೊಂದಿಕೊಳ್ಳುವಂತೆ ಚೆನ್ನಾಗಿ ಕಲಕಿದರೆ ಸಿಹಿಗೆಣಸಿನ ರೈತಾ ಸವಿಯಲು ಸಿದ್ಧ.
ಎಳ್ಳು-ಶೇಂಗಾ-ಬೆಲ್ಲದ ಬರ್ಫಿ
ಸಾಮಗ್ರಿ: 1/2 ಕಪ್ ಎಳ್ಳು, 1/2 ಕಪ್ ಶೇಂಗಾ ಬೀಜ, 2 ಕಪ್ ಪುಡಿ ಬೆಲ್ಲ, 2 ಚಮಚ ತುಪ್ಪ.
ವಿಧಾನ: ಮೊದಲಿಗೆ ಎಳ್ಳನ್ನು ಕೆಂಪಗೆ ಹುರಿದು ಇರಿಸಿಕೊಳ್ಳಿ, ಶೇಂಗಾ ಬೀಜವನ್ನು ಕೂಡ ಚೆನ್ನಾಗಿ ಹುರಿದು ಇಡಿ. ಹುರಿದ ಬೀಜವನ್ನು ಬಟ್ಟೆಯಲ್ಲಿಹಾಕಿ ಚೆನ್ನಾಗಿ ತಿಕ್ಕಿ ಸಿಪ್ಪೆ ತೆಗೆದು ಹಸನ ಮಾಡಿಕೊಳ್ಳಿ. ಎರಡು ಆರಿದ ಮೇಲೆ ಮಿಕ್ಸಿಯಲ್ಲಿಪುಡಿಮಾಡಿಕೊಳ್ಳಿ. ಪುಡಿ ಬೆಲ್ಲಕ್ಕೆ 2 ಚಮಚ ತುಪ್ಪ ಹಾಕಿ ದಪ್ಪ ತಳದ ಪಾತ್ರೆಗೆ ಬಗ್ಗಿಸಿಕೊಳ್ಳಿ. ಒಲೆಯ ಮೇಲಿಟ್ಟು ಬೆಲ್ಲತುಪ್ಪದಲ್ಲಿಕರಗಿ ಒಂದೆಳೆ ಪಾಕ ಬಂದ ಮೇಲೆ ಮಿಕ್ಸಿಯಲ್ಲಿಪುಡಿ ಮಾಡಿದ ಎಳ್ಳು ಮತ್ತು ಶೇಂಗಾಪುಡಿಯನ್ನು ಸೇರಿಸಿ 3-4 ನಿಮಿಷ ಕಾಯಿಸಿ. ಮಿಶ್ರಣವೆಲ್ಲಸೇರಿ ಒಂದು ಮುದ್ದೆಯಾದಂತಾದಾಗ ಇಳಿಸಿ ತುಪ್ಪ ಸವರಿದ ಟ್ರೆ ಗೆ ಹಾಕಿ, ನಿಮಗೆ ಬೇಕಾದ ಆಕಾರದಲ್ಲಿಕತ್ತರಿಸಿ ಸವಿಯಿರಿ.

