ವಿಕ ಸುದ್ದಿಲೋಕ ಬೆಳಗಾವಿ ಕಪ್ಪು ಕಾಗದದಲ್ಲಿನೋಟು ಮುದ್ರಿಸಬಹುದು ಎಂದು ನಂಬಿಸಿ ಜನರನ್ನು ವಂಚಿಸುತ್ತಿದ್ದ ಜಾಲವೊಂದನ್ನು ಹಾಗೂ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ವೃತ್ತಿಪರ ಅಂತಾರಾಜ್ಯ ಕಳ್ಳರ ತಂಡವನ್ನು ಭೇದಿಸಿರುವ ಬೆಳಗಾವಿ ಜಿಲ್ಲಾಪೊಲೀಸರು, ಮಹಾರಾಷ್ಟ್ರದ ಇಬ್ಬರು ಪೊಲೀಸ್ ಕಾನ್ಸ್ ಟೆಬಲ್ ಗಳು ಸೇರಿದಂತೆ ಒಟ್ಟು 14 ಜನರನ್ನು ಬಂಧಿಸಿದ್ದಾರೆ. ಎಸ್ ಪಿ ಕಚೇರಿಯಲ್ಲಿಸೋಮವಾರ ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದ ಜಿಲ್ಲಾಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ , ಗೋಕಾಕ ನಗರದಲ್ಲಿನೋಟು ತಯಾರಿಸಿಕೊಳ್ಳುವ ಯಂತ್ರ ಹಾಗೂ ನೀವು ಕೊಡುವ ಹಣದ ನಾಲ್ಕು ಪಟ್ಟು ಕಪ್ಪು ಕಾಗದ ಕೊಡುತ್ತೇವೆ ಎಂದು ಜನರಿಗೆ ವಂಚಿಸುತ್ತಿದ್ದ 7 ಜನರನ್ನು ಬಂಧಿಸಲಾಗಿದೆ. ಇದೇ ವೇಳೆ ಹಾರೂಗೇರಿ ಠಾಣೆ ವ್ಯಾಪ್ತಿಯಲ್ಲಿನಡೆದಿದ್ದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮೂಲದ 7 ಅಂತಾರಾಜ್ಯ ಕಳ್ಳರನ್ನು ಬಂಧಿಸಿ 36.11 ಲಕ್ಷ ರೂ. ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ,’’ ಎಂದು ತಿಳಿಸಿದ್ದಾರೆ. ವಂಚನೆ ಪ್ರಕರಣದಲ್ಲಿಗೋಕಾಕದ ಪರಶುರಾಮ ಬಡಕರಿ, ಇಮ್ರಾನ್ ಜುನೇದಿ, ಮಹಾರಾಷ್ಟ್ರದ ಜಯಶ್ರೀ ಕಾಂಬಳೆ, ಮನಿಷಾ ಗಾಯಕವಾಡ, ಉಜ್ವಲಾ ಬಿಲಾನೆ, ಪೊಲೀಸ್ ಕಾನ್ಸ್ ಟೆಬಲ್ ಅನಂತ ನರವಾಡೆ ಹಾಗೂ ಹೆಡ್ ಕಾನ್ಸ್ ಟೆಬಲ್ ದಿಲದಾರ್ ಶೇಖ್ ಆರೋಪಿಗಳು. ಆರೋಪಿ ಮೆಹಬೂಬ ದೇಸಾಯಿ ಪರಾರಿಯಾಗಿದ್ದು, ಉಳಿದ ಏಳು ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರಿಂದ ನೋಟು ಬಿಸಿ ಮಾಡುವ ಯಂತ್ರಗಳು, ನೋಟಿನ ಗಾತ್ರದ ಖಾಲಿ ಹಾಳೆಗಳ ಬ್ಯಾಗ್ , ಕೆಮಿಕಲ್ ಬಾಟಲಿಗಳು, ನಾಲ್ಕು ಅಸಲಿ ನೋಟುಗಳು, 8 ಮೊಬೈಲ್ ಹಾಗೂ 2,520 ನಗದು ವಶಪಡಿಸಿಕೊಳ್ಳಲಾಗಿದೆ. ಇವರಿಂದ ಎಷ್ಟು ಜನ ಯಂತ್ರಗಳನ್ನು ಖರೀದಿಸಿದ್ದಾರೆ? ಮೋಸಕ್ಕೆ ಒಳಗಾದವರು ಯಾರು ಹಾಗೂ ಮತ್ತೆ ಎಲ್ಲೆಲ್ಲಿಈ ರೀತಿ ವಂಚನೆ ನಡೆಸಿದ್ದಾರೆ ಎಂಬುದು ಹೆಚ್ಚಿನ ತನಿಖೆಯಿಂದ ಬೆಳಕಿಗೆ ಬರಬೇಕಿದೆ,’’ ಎಂದು ತಿಳಿಸಿದರು. ತಪ್ಪಿಸಿಕೊಳ್ಳಲು ಪೊಲೀಸರ ಸಾಥ್ !: ‘‘ ಪ್ರಕರಣದ ಪ್ರಮುಖ ಆರೋಪಿಗಳು ಮಹಾರಾಷ್ಟ್ರ ಮೂಲದವರಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿಸುಲಭವಾಗಿ ಸಂಚರಿಸಲು ಹಾಗೂ ಎಲ್ಲಿಯಾದರೂ ಸಿಲುಕಿಕೊಂಡರೆ ತಪ್ಪಿಸಿಕೊಳ್ಳಲು ಇಬ್ಬರು ಪೊಲೀಸ್ ಕಾನ್ಸ್ ಟೆಬಲ್ ಗಳು ತಮ್ಮ ಗುರುತಿನ ಚೀಟಿ ತೋರಿಸಿ ಸಹಾಯ ಮಾಡುತ್ತಿದ್ದರು. ಮೊದಲಿಗೆ ಗೋಕಾಕಕ್ಕೆ ಬಂದ ಜಯಶ್ರೀ ಕಾಂಬಳೆ ಎಂಬಾಕೆ ಮೆಹಬೂಬ ದೇಸಾಯಿಯನ್ನು ಪರಿಚಯ ಮಾಡಿಕೊಂಡು ಆತನ ಮೂಲಕ ಸ್ಥಳೀಯ ಇನ್ನಿಬ್ಬರನ್ನು ಈ ಜಾಲದಲ್ಲಿಸೇರಿಸಿಕೊಂಡಿದ್ದಳು. ಬಳಿಕ ಮಹಾರಾಷ್ಟ್ರದ ಇತರರು ಇಲ್ಲಿಗೆ ಬಂದು ವಂಚನೆ ನಡೆಸುತ್ತಿದ್ದರು,’’ ಎಂದು ಎಸ್ ಪಿ ವಿವರಿಸಿದರು. ವಂಚನೆ ಹೇಗೆ?: ಆರೋಪಿಗಳು ’ಐನೂರು ರೂಪಾಯಿ ನೋಟಿನ ಗಾತ್ರದ ಕಪ್ಪು ಬಣ್ಣದ ಖಾಲಿ ಹಾಳೆಗಳನ್ನು ಕೆಮಿಕಲ್ ನಲ್ಲಿಹಾಕಿ ಯಂತ್ರದಲ್ಲಿಸ್ವಲ್ಪ ಬಿಸಿ ಮಾಡಿ ಬಳಿಕ ಬಿಳಿ ಪುಡಿಯಿಂದ ತೊಳೆದರೆ 500 ರೂ. ನೋಟುಗಳು ಮೂಡುತ್ತವೆ ಎಂದು ಡೆಮೋ ತೋರಿಸುತ್ತಿದ್ದರು. ಆದರೆ, ಡೆಮೋ ವೇಳೆ ನಿಜವಾದ 500 ರೂ. ಮುಖಬೆಲೆಯ ನೋಟಿಗೆ ಮೊದಲೇ ಕಪ್ಪು ಮಸಿ ಹಚ್ಚಿ ಅದನ್ನೇ ಕೆಮಿಕಲ್ ನಲ್ಲಿಹಾಕಿ ತೊಳೆದು ನೋಟು ಮೂಡಿಬಂದಂತೆ ತೋರಿಸುತ್ತಿದ್ದರು. ನಂತರ ಖರೀದಿಸಿದವರಿಗೆ ಕಪ್ಪು ಹಾಳೆಗಳ ಬಂಡಲ್ ನೀಡುತ್ತಿದ್ದರು. ನಾಲ್ಕು ಪಟ್ಟ ಹಣ ಸುಲಭವಾಗಿ ಸಿಗುತ್ತದೆ ಎಂದು ಕಂತೆ ಕಂತೆ ಹಣ ಕೊಟ್ಟು ಕಪ್ಪು ಬಣ್ಣದ ಹಾಳೆ ಹೊತ್ತೊಯ್ದವರು ಮನೆಯಲ್ಲಿಕೆಮಿಕಲ್ ನಲ್ಲಿಹಾಳೆ ತೊಳೆದು, ಬಿಸಿ ಮಾಡಲು ಹೋದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಹೀಗೆ, ಮೋಸ ಹೋದವರಲ್ಲಿಹಲವರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರಿಂದ ವಂಚನೆ ಬಯಲಿಗೆ ಬಂದಿದೆ. ಸುದ್ದಿಗೋಷ್ಠಿಯಲ್ಲಿಹೆಚ್ಚುವರಿ ಎಸ್ ಪಿ ಬಿ.ಆರ್ .ಬಸರಗಿ, ಡಿಎಸ್ ಪಿಗಳಾದ ರವಿ ನಾಯ್ಕ ಹಾಗೂ ಪ್ರಶಾಂತ ಮುನ್ನೋಳಿ ಇದ್ದರು.

