ವಿಕ ಸುದ್ದಿಲೋಕ ಬೆಂಗಳೂರು
ಬೆಂಗಳೂರು ಪೂರ್ವ ತಾಲೂಕಿನ ವರ್ತೂರು ಹೋಬಳಿಯ ದೇವರಬೀಸನ ಹಳ್ಳಿಯಲ್ಲಿಸಾಫ್ಟ್ ವೇರ್ ಕಂಪನಿಯೊಂದಕ್ಕೆ ನೀಡಿದ್ದ 36 ಗುಂಟೆ ಜಮೀನಿನ ಅಧಿಸೂಚನೆಯನ್ನು ಡಿ-ನೋಟಿಫೈ ಮಾಡಿದ್ದ ಸರಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಈ ಸಂಬಂಧ ಮೂಲ ಭೂ ಮಾಲೀಕ ದಿ.ಪಟೇಲ್ ಜೇತಲಾಲ್ ರಾಮ್ ಜಿ ಅವರ ವಾರಸುದಾರರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಡಿ.ಕೆ.ಸಿಂಗ್ ನೇತೃತ್ವದ ವಿಭಾಗೀಯಪೀಠ ಪುರಸ್ಕರಿಸಿದೆ.
ಏಕಸದಸ್ಯಪೀಠದ ಆದೇಶ ರದ್ದುಗೊಳಿಸಿರುವ ವಿಭಾಗೀಯಪೀಠ ಮುಂದೆ ಅರ್ಜಿ ಸಲ್ಲಿಸಿದ್ದ ರಾಯಲ್ ಫ್ರಾಗ್ರೆನ್ಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು, ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗೆ ಕಾರಣವಾಗಬಹುದಾದ ಗುಟ್ಕಾ ತಯಾರಿಕೆಯಲ್ಲಿತೊಡಗಿರುವ ಕಂಪನಿ ಎಂಬುದು ಆಘಾತಕಾರಿ ವಿಚಾರ ಎಂದು ಕಳವಳವ್ಯಕ್ತಪಡಿಸಿದೆ. ಅಂತೆಯೇ, ಇದು ಬಡ ರೈತರ ಭೂಮಿಯಲ್ಲಿಅಧಿಕಾರಿಗಳು ಭೂ ಹಿತಾಸಕ್ತಿಗಳ ಪರ ನಡೆಸಿದ ಹಗಲು ದರೋಡೆಯಂತಿದೆ. ಸರಿಯಾದ ಕಾನೂನು ಪ್ರಕ್ರಿಯೆ ಪಾಲನೆ ಮಾಡದೆ ಯಾವುದೇ ವ್ಯಕ್ತಿಯ ಆಸ್ತಿಯನ್ನು ಅವರಿಂದ ವಂಚಿತಗೊಳಿಸಲು ಆಗುವುದಿಲ್ಲ. ಸಾರ್ವಜನಿಕ ಉದ್ದೇಶಕ್ಕಾಗಿ ಮಾತ್ರವೇ ಆಸ್ತಿ ಸ್ವಾಧೀನಕ್ಕೆ ಪಡೆಯಬಹುದು ಎಂದು ಸ್ಪಷ್ಟಪಡಿಸಿದೆ.
ಕೆಐಎಡಿಬಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿರುವ ವರದಿಯನ್ನು ಗಮನಿಸಿದಾಗ ಕ್ಷೇತ್ರ ಪರಿಣತಿ ಇಲ್ಲದ ಕಂಪನಿಗಳಿಗೆ ಭೂಮಿ ನೀಡುತ್ತಿರುವುದನ್ನು ಸ್ಥಳೀಯ ರೈತರು ವಿರೋಧಿಸುತ್ತಿದ್ದ ಕಾರಣ ನೈಜ ಸಾಫ್ಟ್ ವೇರ್ ಕಂಪನಿಯಾದ ಇನ್ಫೋಸಿಸ್ ನಂತವರಿಗೂ ಭೂಮಿ ಹಂಚಿಕೆ ಮಾಡಲು ಸಾಧ್ಯವಾಗಲಿಲ್ಲಎಂಬುದು ಗಮನಾರ್ಹ ಎಂದು ಆದೇಶದಲ್ಲಿಉಲ್ಲೇಖಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ವಿವಾದಿತ ಜಮೀನನ್ನು ಸಾಫ್ಟ್ ವೇರ್ ಪಾರ್ಕ್ ಸ್ಥಾಪಿಸಲು ಹೊಸದಿಲ್ಲಿಮೂಲದ ರಾಯಲ್ ಫ್ರಾಗ್ರೆನ್ಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಕೆಐಎಡಿಬಿ (ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ) ಮುಖಾಂತರ ಹಂಚಿಕೆ ಮಾಡಲಾಗಿತ್ತು. ತದನಂತರ ಸರಕಾರ ಪರಿಶೀಲನೆ ನಡೆಸಿದಾಗ, ರಾಯಲ್ ಫ್ರಾಗ್ರೆನ್ಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸಾಫ್ಟ್ ವೇರ್ ಉತ್ಪಾದನೆ ಅಥವಾ ಕಂಪ್ಯೂಟರ್ ಸಂಬಂಧಿತ ಉತ್ಪಾದನಾ ಕ್ಷೇತ್ರದಲ್ಲಿಯಾವುದೇ ಅನುಭವ ಹೊಂದಿಲ್ಲ. ಆದರೂ, ಜಮೀನು ಮಂಜೂರು ಮಾಡಲಾಗಿದೆ ಎಂಬ ವರದಿಯ ಆಧಾರದ ಮೇಲೆ, 2009ರಲ್ಲಿ36 ಗುಂಟೆ ಜಮೀನಿನ ಅಧಿಸೂಚನೆಯನ್ನು ಡಿ-ನೋಟಿಫೈ ಮಾಡಿತ್ತು. ಇದನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯಪೀಠ, ಕಂಪನಿ ಅರ್ಜಿಯನ್ನು ಪುರಸ್ಕರಿಸಿ ಡಿ-ನೋಟಿಫಿಕೇಶನ್ ಆದೇಶವನ್ನು 2013ರಲ್ಲಿರದ್ದುಗೊಳಿಸಿತ್ತು. ಏಕಸದಸ್ಯಪೀಠದ ಆದೇಶವನ್ನು ಪ್ರಶ್ನಿಸಿ ಜಮೀನಿನ ಮೂಲ ಮಾಲೀಕರಾದ ದಿವಂಗತ ಪಟೇಲ್ ಜೇತಲಾಲ್ ರಾಮ್ ಜಿ ಅವರ ಕುಟುಂಬದ ಸದಸ್ಯರು ವಿಭಾಗೀಯಪೀಠದಲ್ಲಿಮೇಲ್ಮನವಿ ಸಲ್ಲಿಸಿದ್ದರು.

