ಶರಣ ಪರಂಪರೆ ಪು.6

Contributed byShridevi Ambekallu|Vijaya Karnataka

Sohaliya Somavve, a devoted Shiva follower, transformed her husband's animosity through her unwavering faith. Despite facing obstacles and her husband's initial suspicion, Somavve's pure devotion to Lord Shiva shone through. Her actions demonstrated that true devotion transcends religious and social barriers. The story highlights the power of faith to bring about profound change and understanding.

sharana traditions sohaliya somavve the amazing story of transforming her husbands hatred through shiva devotion

ಸೋಹಳಿಯ ಸೋಮವ್ವೆ

---------------

ಶಿವಭಕ್ತಿಯ ಮೂಲಕ ತನ್ನ ಪತಿಯ ದ್ವೇಷ ಭಾವನೆಯನ್ನೇ ಬದಲಾಯಿಸಿದ ಸೋಹಳಿಯ ಸೋಮವ್ವೆ ಅವರ ಬದುಕಿನ ಕಥನವಿದು.

---------------

‘ಎತ್ತೆತ್ತ ನೋಡಿದತ್ತ ಬಸವನೆಂಬ ಬಳ್ಳಿ, ಎತ್ತಿ ಹಿಡಿದರೆ ಲಿಂಗವೆಂಬ ಗೊಂಚಲು, ಒತ್ತಿ ಹಿಂಡಿದರೆ ಭಕ್ತಿ ಎಂಬ ರಸವಯ್ಯ’ ಎಂಬ ಮಡಿವಾಳ ಮಾಚಿದೇವನ ಲಿಂಗವಾಣಿಯಂತೆ ಕಲ್ಯಾಣ ರಾಜ್ಯದಲ್ಲಿಬಸವಭಕ್ತಿಯ ಬೆಳಕು ಪಸರಿಸಿತ್ತು. ಬಸವತತ್ತ್ವ ಪ್ರಸಾರ ಭರದಿಂದ ಸಾಗುತ್ತಿತ್ತು. ಚರಜಂಗಮರ ಮೂಲಕ ನಾಡಿನ ಮೂಲೆ ಮೂಲೆಗಳಲ್ಲಿಎಲ್ಲಿನೋಡಿದರಲ್ಲಿ ಲಿಂಗಪೂಜೆ ಲಿಂಗಪೂಜೆ ನಡೆಯುತ್ತಿತ್ತು. ಕಾಯಕದಲ್ಲಿತನ್ಮಯತೆ ಕಾಣುತಿತ್ತು. ದಾಸೋಹದ ಮನೆಗಳು ಅನ್ನ ಮತ್ತು ಅರಿವಿನ ಆಶ್ರಯ ಪೂರೈಸುತ್ತಿದ್ದವು. ಎಲ್ಲಿನೋಡಿದರಲ್ಲಿಬಸವಭಕ್ತಿ ತುಂಬಿ ತುಳುಕುತ್ತಿತ್ತು. ಇಂತಹ ಭಕ್ತಿಗೆ ಮಾರುಹೋಗಿದ ಶರಣೆ ಸೋಹಳಿಯ ಸೋಮವ್ವೆ.

ಸೋಮವ್ವೆಯ ಶಿವಭಕ್ತಿ

ಸೋಹಳಿಯ ಎಂಬ ಗ್ರಾಮದಲ್ಲಿಅನ್ಯಧರ್ಮದ ಪಾರಿಸನಾಥನೆಂಬವನು ಇದ್ದನು. ಅವನು ತನ್ನ ಸೋದರಮಾವನ ಮಗಳು ಸೋಮವ್ವೆಯನ್ನು ಮದುವೆಯಾಗಿದ್ದನು. ಸೋಮವ್ವೆಯು ತವರು ಮನೆಯಲ್ಲಿದ್ದಾಗಲೇ ಚರಜಂಗಮರ ಪ್ರವಚನ ಕೇಳಿ ಬಸವಣ್ಣನವರ ಸಮತೆ ಮತ್ತು ಭಕ್ತಿ ಚಳವಳಿಯ ಪ್ರಭಾವದಿಂದ ಇಷ್ಟಲಿಂಗ ದೀಕ್ಷೆ ಪಡೆದು ಲಿಂಗಭಕ್ತಳಾಗಿದ್ದಳು. ಮದುವೆಯಾದ ನಂತರ ಗಂಡನ ಮನೆಯವರಿಗೆ ಹೆದರಿ ಆಕೆ ಯಾರಿಗೂ ಕಾಣದಂತೆ ಗುಪ್ತವಾಗಿ ಊರಿನ ಶಿವಾಲಯಕ್ಕೆ ಹೋಗಿ ಇಷ್ಟಲಿಂಗ ಪೂಜೆ ಮಾಡಿಕೊಂಡು ಬರುತ್ತಿದ್ದಳು. ತನಗೆ ಬಳಸಲು ನೀಡಿದ ಎಣ್ಣೆಯನ್ನು ಉಳಿಸಿ ದೀಪ ಹಚ್ಚುತ್ತಿದ್ದಳು. ತನಗೆ ಮುಡಿಯಲು ಪತಿ ತಂದು ಕೊಟ್ಟ ಮಲ್ಲಿಗೆ ಹೂವುಗಳನ್ನೇ ಉಳಿಸಿ ಲಿಂಗಕ್ಕೆ ಧರಿಸುತ್ತಿದ್ದಳು. ತನಗೆ ತಿನ್ನಲು ಕೊಟ್ಟ ಹಣ್ಣುಗಳನ್ನು ಹಾಗೆ ಇಟ್ಟುಕೊಂಡು ಲಿಂಗಕ್ಕೆ ನೈವೇದ್ಯವಾಗಿ ಅರ್ಪಿಸುತ್ತಿದ್ದಳು. ಭಕ್ತಿಯಿಂದ ಪೂಜೆ ಮಾಡಿ ನನಗೆ ರಕ್ಷಿಸು ಲಿಂಗದೇವಾ ಎಂದು ಬೇಡಿಕೊಂಡು ಮನೆಗೆ ಬಂದು ಪ್ರಸಾದ ಮಾಡುತ್ತಿದ್ದಳು.

ಪತಿಗೆ ಮೂಡಿದ ಸಂಶಯ:

ಸೋಮವ್ವೆ ಪ್ರತಿದಿನ ಎಲ್ಲಿಗೆ ಹೋಗಿ ಬರುತ್ತಾಳೆ ? ಎಂಬ ಸಂಶಯ ಆಕೆಯ ಪತಿಗೆ ಮೂಡಿತು. ಇದನ್ನು ತಿಳಿಯಲು ಆಕೆಗೆ ಗೊತ್ತಾಗದಂತೆ ಹಿಂಬಾಲಿಸಿದನು. ಸೋಮವ್ವೆ ಶಿವ ದೇವಾಲಯಕ್ಕೆ ಹೋಗಿ ಏನು ಮಾಡುತ್ತಾಳೆ ನೋಡೋಣ ಎಂದುಕೊಂಡು, ಆಕೆಗೆ ತಿಳಿಯದದಂತೆ ದೇಗುಲದ ಒಳಗೆ ಮರೆಯಲ್ಲಿನಿಂತನು.

ಆಕೆ ದೇಗುಲದೊಳಕ್ಕೆ ಬಂದು ಲಿಂಗಪೂಜೆ ಪ್ರಾರಂಭಿಸಿದಳು. ಆಕೆ ವಚನಗಳನ್ನು ಹಾಡುತ್ತಾ ಭಕ್ತಿಯಿಂದ ಲಿಂಗಪೂಜೆ ಮಾಡುವುದನ್ನು ನೋಡಿದ. ದೀಪ ಬೆಳಗುವುದು, ಮಲ್ಲಿಗೆ ಹೂವುಗಳನ್ನು ಧರಿಸಿ ಫಲಗಳ ನೈವೇದ್ಯ ಮಾಡಿ ‘ನಮಃಶಿವಾಯ’ ಜಪ ಮಾಡತೊಡಗಿದಳು. ಆ ಜಪದ ಭಕ್ತಿಯ ಧ್ವನಿಯ ತರಂಗಗಳು ಶಿವಾಲಯದ ತುಂಬಾ ಮೊಳಗಿದವು. ಇದನ್ನು ಕಂಡು, ಮನೆಗೆ ಬಂದು ತನ್ನ ತಾಯಿಗೆ ನಿಜಸಂಗತಿ ತಿಳಿಸಿ ‘ನಾಳೆಯಿಂದ ಆಕೆಗೆ ಎಣ್ಣೆ, ತುಪ್ಪ ಕೊಡಬೇಡ’ ಎಂದು ಹೇಳಿದನು. ನಂತರದ ದಿನಗಳಲ್ಲಿಉಣಲು ಅನ್ನವನ್ನು ಮಾತ್ರ ನೀಡುತ್ತಿದ್ದರು. ಎಣ್ಣೆ, ತುಪ್ಪ, ಮಲ್ಲಿಗೆ ಹೂವು ನೀಡವುದನ್ನು ನಿಲ್ಲಿಸಿದರು.

ಭಕ್ತಿಪ್ರಿಯ ನಮ್ಮ ದೇವರು

‘ನಾದಪ್ರಿಯನು ಅಲ್ಲ, ವೇದಪ್ರಿಯನು ಅಲ್ಲಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವಾ’ ಎಂಬ ಬಸವವಾಣಿಯಂತೆ ಸೋಮವ್ವೆ ಕತ್ತಲಲ್ಲಿಯೇ ಲಿಂಗಪೂಜೆ ಮಾಡತೊಡಗಿದಳು. ದೇವಾ ಕ್ಷಮಿಸು ನಿನಗೆ ನಿತ್ಯವು ದೀಪದ ಬೆಳಕಿನಲ್ಲಿಪೂಜೆ ಮಾಡುತ್ತಿದ್ದೆ. ಹೂವುಗಳಿಂದ ಅಲಂಕರಿಸುತ್ತಿದ್ದೆ. ಇಂದು ನನ್ನ ಹತ್ತಿರ ಏನೂ ಇಲ್ಲ. ನನ್ನ ಅಂತರಂಗದ ಭಕ್ತಿ ಮಾತ್ರ ಇದೆ. ಅದನ್ನೇ ಸ್ವೀಕರಿಸು ತಂದೆ ಎಂದು ದುಃಖಿಸತೊಡಗಿದಳು. ಆಗ ಅಲ್ಲಿಶಿವಧ್ವನಿ ಕೇಳಿಸಿತು- ‘ತಾಯಿ ಅಂಜಬೇಡ... ನಿನ್ನ ಅಂತರಂಗದ ಭಕ್ತಿಯೇ ಸಾಕು. ನಿನಗೆ ಬೆಳಕು ಬೇಕಾದರೆ ಲಿಂಗಕ್ಕೆ ಮಜ್ಜನ ಮಾಡಿದ ನೀರನ್ನು ಪ್ರಣತಿಯಲ್ಲಿಹಾಕು. ದೀಪ ಬೆಳಗಿಸು ನಿನ್ನ ಭಕ್ತಿಗೆ ದೀಪ ಉರಿಯುತ್ತದೆ. ಇತರ ಭಕ್ತರು ಧರಿಸಿದ ನನ್ನ ಸುತ್ತಮುತ್ತ ಬಿದ್ದ ಹೂವುಗಳನ್ನೇ ನಿನ್ನ ಲಿಂಗಕ್ಕೆ ಧರಿಸು. ನನಗೆ ನೀನು ಕೊಡುವ ವಸ್ತುಗಳು ಮುಖ್ಯವಲ್ಲ. ನಿನ್ನ ಅಂತರಂಗದ ಪರಿಶುದ್ಧ ಭಕ್ತಿಯೇ ಮುಖ್ಯ ತಾಯಿ. ನೀನು ದುಃಖಿಸಬೇಡ ನಿನ್ನ ಭಕ್ತಿಯೇ ಸಾಕು’ ಎಂದು.

ಸೋಮವ್ವೆ ಆನಂದಭರಿತಳಾದಳು. ಉತ್ಸಾಹದಿಂದ ವಚನಗಳನ್ನು ಹಾಡುತ್ತ ಲಿಂಗಪೂಜೆ ಮಾಡತೊಡಗಿದಳು. ನೀರನ್ನೇ ಹಣತೆಗೆ ಹಾಕಿ ದೀಪ ಹಚ್ಚಿದಳು. ಲಿಂಗದ ಸುತ್ತಮುತ್ತ ಇದ್ದ ಹೂವುಗಳನ್ನೆ ಧರಿಸಿ ಭಕ್ತಿ ಸಮರ್ಪಣೆ ಮಾಡತೊಡಗಿದಳು. ‘ಎನ್ನ ವಾಮಕ್ಷೇಮ ನಿನ್ನದು, ಎನ್ನ ಹಾನಿವೃದ್ಧಿ ನಿನ್ನದು, ಎನ್ನ ಮಾನ ಅಪಮಾನ ನಿನ್ನದು ತಂದೆ, ಕಾಯೊಕೊಲ್ಲುನಿನ್ನ ಧರ್ಮ’ ಹೀಗೆ ತನ್ನನ್ನೇ ತಾನು ಶಿವನಿಗೆ ಅರ್ಪಿಸಿಕೊಂಡು ಭಕ್ತಿ ಮಾಡತೊಡಗಿದಳು.

ಸತಿಯ ಕೀರ್ತಿಯಿಂದ ವ್ಯಥೆ:

ಅನ್ಯಧರ್ಮದವಳಾದ ಸೋಮವ್ವೆಯ ಭಕ್ತಿಯ ಲಿಂಗಪೂಜೆ ಊರಿಡೀ ಹರಡಿತು. ಶಿವಾಲಯಕ್ಕೆ ಬಂದವರು ನೀರು ಹಾಕಿ ದೀಪ ಬೆಳಗಿಸುವುದು ಕಂಡು ಆಶ್ಚರ್ಯಗೊಂಡರು. ಸೋಮವ್ವೆಯ ಶಿವಭಕ್ತಿ ಕಂಡು ಆಕೆಗೆ ದೂರದಿಂದಲೇ ‘ಶಿವಾ ಶಿವಾ’ ಎಂದು ವಂದಿಸಿತೊಡಗಿದರು. ಜನರೆಲ್ಲಆಕೆಯ ಭಕ್ತಿ, ಮಹಿಮೆ ಕಂಡು ಹೊಗಳತೊಡಗಿದರು. ಸೋಮವ್ವೆಯ ಪತಿ ಪಾರಿಸನಾಥನ ಮುಂದೆ ಸೋಮವ್ವೆಯನ್ನು ಕೊಂಡಾಡಿದರು. ಲಿಂಗಪೂಜೆಯಲ್ಲಿನಿರತಳಾದರೂ ತನ್ನ ಪತಿಭಕ್ತಿಯನ್ನು ಕಡಿಮೆ ಮಾಡಲಿಲ್ಲ. ಆದರೆ ಪತಿಗೆ ಮಾತ್ರ ತನ್ನ ಸತಿಯ ಕೀರ್ತಿವಾರ್ತೆ ಸಹಿಸಲಾಗಲಿಲ್ಲ.

ದಿನದಿನಕ್ಕೆ ಆಕೆಯ ಕೀರ್ತಿವಾರ್ತೆ ಹರಡುವುದು ಶಿವಭಕ್ತಿಯ ಮಹಿಮೆ ಕಂಡು ಗಂಡ ಸಂತಸಪಡಲಿಲ್ಲ. ತನಗಿಂತ ನನ್ನ ಹೆಂಡತಿಯ ಕೀರ್ತಿವಾರ್ತೆ ಹೆಚ್ಚುವುದು ಸಹಿಸಲಾಗಲಿಲ್ಲ. ದಿನ ದಿನಕ್ಕೂ ಆಕೆಯ ಮೇಲೆ ದ್ವೇಷ ಮಾಡತೊಡಗಿದನು. ‘ದಯವೇ ಧರ್ಮದ ಮೂಲವಯ್ಯ’, ‘ಅಹಿಂಸಾ ಪರಮಧರ್ಮ’ ಎಂಬುದನ್ನು ಮರೆತ. ತನ್ನ ಪತ್ನಿಯನ್ನೇ ಮುಗಿಸಬೇಕೆಂದು ತೀರ್ಮಾನಿಸಿದ.

ಭಕ್ತಿ ಮಹಿಮೆ ಮರೆತ ಗ್ರಾಮದ ಎಲ್ಲಭಕ್ತರು, ಎಲ್ಲಧರ್ಮದವರು ಸೋಮವ್ವೆಯ ಬಗ್ಗೆ ಗೌರವ ಭಾವ ಬೆಳೆಸಿಕೊಂಡಿದ್ದರು. ನಡೆ-ನುಡಿ, ಎಲ್ಲರ ಜೊತೆ ನಗು ನಗುತ್ತ ಮಾತನಾಡುತ್ತಿದ್ದರು. ಆಕೆಯು ವಚನಗಳನ್ನು ಹಾಡುತ್ತಿದ್ದರೆ ವಾತಾವರಣವೆಲ್ಲಶಿವಮಯವಾಗುತಿತ್ತು.

ಪಶ್ಚಾತ್ತಾಪ-ಪರಿವರ್ತನೆ

ಒಂದು ರಾತ್ರಿ ಸೋಮವ್ವೆ ಮಲಗುವ ಕೋಣೆಯಲ್ಲಿಧ್ಯಾನ ಮಾಡುತ್ತ ತನ್ಮಯಳಾಗಿದ್ದಳು. ಇದೇ ಸಂದರ್ಭ ಸೂಕ್ತವೆಂದು ಖಡ್ಗ ತೆಗೆದುಕೊಂಡು ಬಂದು ಹೊಡೆಯಬೇಕು ಎನ್ನುವಷ್ಟರಲ್ಲಿಆಕೆಯ ಅಂತರಂಗದಿಂದ ಬೆಳಕೊಂದು ಬಂತು. ಅದು ಶಿವರೂಪ ತಾಳಿ ‘ಹೊಡೆಯಬೇಡ’ ಎಂದು ಧ್ವನಿಸಿ ತಕ್ಷಣ ಮಾಯವಾಯಿತು. ತನಗೆ ಅರಿವಿಲ್ಲದಂತೆ ಖಡ್ಗ ಕೆಳಗೆ ಬಿತ್ತು. ಅವನ ಅಂತರಂಗದಲ್ಲಿಪ್ರೀತಿಯ ಹೊನಲು ಮೂಡಿತು. ‘ಸೋಮವ್ವೆ.... ಕ್ಷಮಿಸು... ನಿನ್ನ ಭಕ್ತಿ ಜ್ಞಾನ ನನಗೆ ತಿಳಿಯಲಿಲ್ಲ. ಇನ್ನು ಮುಂದೆ ನೀನು ನಿರ್ಭಯವಾಗಿ ಪೂಜೆ ಮಾಡು. ನಾನು ಎಂದೂ ತೊಂದರೆ ಕೊಡುವುದಿಲ್ಲ. ಭಕ್ತಿಗೆ ಧರ್ಮ, ಜಾತಿ ಯಾವುದೂ ಅಡ್ಡ ಬರುವುದಿಲ್ಲ. ಎಲ್ಲರ ಅಂತರಂಗದಲ್ಲಿಯೂ ದೈವೀ ಬೆಳಕು ಇರುತ್ತದೆ ಎಂಬುದು ಇಂದು ನನಗೆ ಅರಿವಾಯಿತು’ ಎಂದು ಹೇಳಿದ.

ಭಕ್ತಿ ಎಂದರೆ ಪರಿಶುದ್ಧವಾಗಿ ಭಗವಂತನ ಮೇಲೆ ಇಡುವ ಪ್ರೀತಿ. ಭಕ್ತಿಗೆ ಧರ್ಮ, ಜಾತಿಯ ಹಂಗಿಲ್ಲಎಂಬುದನ್ನು ತೋರಿಸಿಕೊಟ್ಟ ಸೋಮವ್ವೆಯ ಚರಿತ್ರೆ ಡಾ. ಫ.ಗು.ಹಳಕಟ್ಟಿಯವರ ಸಮಗ್ರ ಸಂಪುಟ ಭಾಗ 10ರಲ್ಲಿದಾಖಲಾಗಿದೆ.

-ನಾಡೋಜ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಹಿರೇಮಠ ಸಂಸ್ಥಾನ, ಭಾಲ್ಕಿ ಮೊ: 9448115404