ಗೋಡೆ
---
ಇತ್ತೀಚಿಗೆ ನಮ್ಮ ನೆಚ್ಚಿನ ಮೇಷ್ಟು್ರ ನಿವೃತ್ತರಾದರು. ನಾವು ಅವರ ಹಳೆಯ ವಿದ್ಯಾರ್ಥಿಗಳು. ಒಂದು ಕಾಲದಲ್ಲಿನಮ್ಮನ್ನು ಪಾಠಪುಸ್ತಕಗಳಿಗಿಂತಲೂ ಹೆಚ್ಚು ಪೋಷಿಸಿದವರು ಅವರು.
ನಾವು ನಾಲ್ಕೈದು ಗೆಳೆಯರು ಆಗಾಗ ಅವರ ಮನೆಗೆ ಹೋಗುತ್ತಿದ್ದೆವು. ಅವರ ಜೊತೆ ಗಂಟೆಗಟ್ಟಲೆ ಹರಟೆ. ಸಾಹಿತ್ಯ, ಸಂಗೀತ, ಕ್ರೀಡೆ, ರಾಜಕೀಯ... ಮಾತಾಡದ ವಿಷಯವೇ ಇರಲಿಲ್ಲ. ಅವರ ಹೆಂಡತಿ ನಮ್ಮನ್ನು ತುಂಬಾ ಪ್ರೀತಿಯಿಂದ ಕಾಣುತ್ತಿದ್ದರು. ಕಾಫಿ, ತಿಂಡಿ ಕೊಡದೇ ಬಿಡುತ್ತಿರಲಿಲ್ಲ.
ಮೇಷ್ಟರಿಗೆ ಒಬ್ಬಳೇ ಮಗಳು. ನಾವು ಓದುವಾಗ ಅವಳಿಗೆ ಆರು-ಏಳು ವರ್ಷ. ತುಂಬಾ ಮುದ್ದಾಗಿದ್ದಳು. ಅವಳ ಜೊತೆ ಆಡಿದ ಚೆಂಡಾಟ ಪಗಡೆಯಾಟದ ನೆನಪು ಮಾಸಿಲ್ಲ. ವರ್ಷಗಳು ಉರುಳಿದವು. ಕಾಲೇಜು ಮುಗಿಸಿ ನಾವು ಕೆಲಸಕ್ಕೆ ಸೇರಿ ಬೇರೆಯಾದರೂ, ಆರೇಳು ತಿಂಗಳಿಗೆ ಒಮ್ಮೆಯಾದರೂ ಮೇಷ್ಟರ ಮನೆಗೆ ಹೋಗಿಬರುತ್ತಿದ್ದೆವು. ಹಾಗಾಗಿ ನಂಟು ಉಳಿಯಿತು.
ಹೀಗಿದ್ದಾಗ, ಹೋದ ವರ್ಷ ಒಂದು ಆಘಾತಕರ ಸುದ್ದಿ ಬಂತು. ಮೇಷ್ಟರ ಮಗಳು ನೇಣು ಹಾಕಿಕೊಂಡು ಸತ್ತಳು ಅಂತ. ಯಾಕೆ ಗೊತ್ತಾಗಲಿಲ್ಲ. ಮೇಷ್ಟರನ್ನು ಭೇಟಿಯಾದಾಗ ಕೇಳುವ ಮನಸ್ಸಾಗಲಿಲ್ಲ.
*
ಮೇಷ್ಟರ ಬೀಳ್ಕೊಡುಗೆ ಸಮಾರಂಭ ಭರ್ಜರಿಯಾಗಿ ನಡೆಯಿತು. ನಮ್ಮನ್ನು ನೋಡಿ ಅವರಿಗೆ ಬಹಳ ಸಂತೋಷವಾಯಿತು. ಮೇಷ್ಟರು ಮತ್ತು ಅವರ ಪತ್ನಿಯನ್ನು ಒಟ್ಟಿಗೆ ಕೂಡಿಸಿ ನಾನು ನಾಲ್ಕಾರು ಫೋಟೋ ತೆಗೆದೆ. ಅವುಗಳಲ್ಲಿಒಂದನ್ನು ಆಯ್ಕೆ ಮಾಡಿ, ದೊಡ್ಡದಾಗಿ ಮುದ್ರಿಸಿ, ಚೆನ್ನಾದ ಫ್ರೇಮ್ ಹಾಕಿಸಿ, ಸಪ್ರೈರ್ ಸ್ ಕೊಡೋಣ ಅಂತ ಅವರ ಮನೆಗೆ ಹೋದೆ.
ಇನ್ನೇನು ಬಾಗಿಲು ತಟ್ಟಬೇಕು ಅನ್ನುವಾಗ ಒಳಗಿನಿಂದ ಪಾತ್ರೆ ಬಿದ್ದ ಸದ್ದು ಕೇಳಿಸಿತು. ಸೀದುಹೋದ ಒಗ್ಗರಣೆಯ ಘಾಟು ಮೂಗಿಗೆ ಬಡಿಯಿತು. ಜೊತೆಗೆ, ಮೇಷ್ಟರ ಹೆಂಡತಿಯ ದನಿ ಸ್ಪಷ್ಟವಾಗಿ ಕೇಳಿಸಿತು. ‘ನಿಮ್ಮನ್ನು ಕಟ್ಟಿಕೊಂಡು ಜೀವನಾನೇ ಹಾಳಾಯಿತು. ಒಂದು ದಿನ ಸುಖವಾಗಿರಲು ಬಿಡಲಿಲ್ಲ. ಕೂತರೆ ತಪುತ್ರ್ಪ, ನಿಂತರೆ ತಪುತ್ರ್ಪ. ನಿಮ್ಮ ಕಾಟ ತಡೆಯಲಾರದೆ ಮಗಳೂ ಹೋದಳು.’
ನನ್ನ ಕೈಯಲ್ಲಿದ್ದ ಫೋಟೋ ಫ್ರೇಮ್ ಭಾರವಾಯಿತು. ಅದನ್ನು ಬಾಗಿಲ ಪಕ್ಕದ ಗೋಡೆಗೆ ಆನಿಸಿ ಮೆಟ್ಟಿಲು ಇಳಿದೆ...

