*ರೈತರು-ಸಕ್ಕರೆ ಕಾರ್ಖಾನೆ ಸಭೆ ವಿಫಲ | ಸಕ್ಕರೆ ಕಾರ್ಖಾನೆ ಮಾಲೀಕರೇ ಉಪಸ್ಥಿತರಿರಲು ಡಿಸಿ ಸೂಚನೆ
ನಾಳೆ ಮತ್ತೊಂದು ಸಭೆ-ರೈತರ ಬೇಡಿಕೆ: ಟನ್ ಕಬ್ಬಿಗೆ 3600 ರೂ.
-ಸಕ್ಕರೆ ಕಾರ್ಖಾನೆ ದರ: 3000 ರೂ.
-ಪಟ್ಟು ಬಿಡದ ರೈತ ಮುಖಂಡರು
-ಕಾರ್ಖಾನೆಗಳ ಅಸಹಾಯಕತೆ
ವಿಕ ಸುದ್ದಿಲೋಕ ಹಾವೇರಿ
ಕಬ್ಬಿನ ದರ ನಿಗದಿ ಕುರಿತಂತೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರ ಅಧ್ಯಕ್ಷತೆಯಲ್ಲಿರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ನಡುವೆ ಗುರುವಾರ ನಡೆದ ಎರಡನೇ ಸುತ್ತಿನ ಸಭೆಯೂ ಯಾವುದೇ ನಿರ್ಧಾರಕ್ಕೆ ಬರದೆ ವಿಫಲವಾಗಿದೆ. ಹೀಗಾಗಿ ನ.14ರಂದು ಸಕ್ಕರೆ ಕಾರ್ಖಾನೆಗಳ ಮಾಲೀಕರೇ ಖುದ್ದಾಗಿ ಉಪಸ್ಥಿತರಿರುವಂತೆ ಸೂಚಿಸಿರುವ ಜಿಲ್ಲಾಧಿಕಾರಿ, ಅಂದು ಮತ್ತೊಂದು ಸುತ್ತಿನ ಸಭೆ ನಡೆಸಲು ನಿರ್ಧರಿಸಿದ್ದಾರೆ.
ಹಾವೇರಿ ಜಿಲ್ಲೆಯ ರೈತರಿಗೆ ಪ್ರತಿ ಟನ್ ಕಬ್ಬಿಗೆ ಕನಿಷ್ಠ 3600 ರೂ. ನೀಡುವಂತೆ ಒತ್ತಾಯಿಸಿ ಡಿಸಿ ಅಧ್ಯಕ್ಷತೆಯಲ್ಲಿಯೇ ನ.3 ರಂದು ರೈತ ಮುಖಂಡರು ಮತ್ತು ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆ ನಡೆದಿತ್ತು. ಆಗ ಒಂದು ಕಾರ್ಖಾನೆಯವರು ಗರಿಷ್ಠ 2700 ರೂ. ಹಾಗೂ ಮತ್ತೊಂದು ಕಾರ್ಖಾನೆಯವರು ಗರಿಷ್ಠ 2900 ರೂ. ನೀಡುವುದಾಗಿ ತಿಳಿಸಿದ್ದರು. ರೈತ ಮುಖಂಡರು ಇದಕ್ಕೆ ಒಪ್ಪದ ಕಾರಣ ಸಭೆ ವಿಫಲವಾಗಿತ್ತು.
ನಂತರ ನಡೆದ ಬೆಳವಣಿಗೆಯಲ್ಲಿಬೆಳಗಾವಿ ಜಿಲ್ಲೆಯ ರೈತರಿಗೆ ಪ್ರತಿ ಟನ್ ಕಬ್ಬಿಗೆ ಗರಿಷ್ಠ 3600 ರೂ. ನೀಡಲು ಅಲ್ಲಿನ ಸಕ್ಕರೆ ಕಾರ್ಖಾನೆಗಳು ಒಪ್ಪಿವೆ. ಈ ಹಿನ್ನೆಲೆಯಲ್ಲಿಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಗೂ ಬೆಳಗಾವಿಯಲ್ಲಿಒಪ್ಪಂದವಾಗಿರುವಂತೆ ಪ್ರತಿ ಟನ್ ಕಬ್ಬಿಗೆ ರೂ.3600 ದರ ನೀಡಬೇಕು ಎಂದು ರೈತ ಮುಖಂಡರು ಸಭೆಯಲ್ಲಿಪಟ್ಟು ಹಿಡಿದರು. ಆದರೆ, ಒಂದು ಸಕ್ಕರೆ ಕಾರ್ಖಾನೆಯ ಪ್ರತಿನಿಧಿಗಳು ಗರಿಷ್ಠ ರೂ.3000 ಹಾಗೂ ಮತ್ತೊಂದು ಕಾರ್ಖಾನೆಯ ಪ್ರತಿನಿಧಿಗಳು ರೂ.3100 ನೀಡಲು ಮಾತ್ರ ಸಾಧ್ಯ ಎಂದು ತಿಳಿಸಿದರು. ಇದಕ್ಕಿಂತ ಹೆಚ್ಚಿನ ದರ ನೀಡಲು ಸಾಧ್ಯವಿಲ್ಲಎಂದು ಕಾರ್ಖಾನೆಗಳ ಪ್ರತಿನಿಧಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಇದರಿಂದ ರೈತ ಮುಖಂಡರು ಮತ್ತು ಕಾರ್ಖಾನೆಗಳ ಪ್ರತಿನಿಧಿಗಳ ನಡುವೆ ಒಮ್ಮತ ಮೂಡಲಿಲ್ಲ. ಈ ಹಿನ್ನೆಲೆಯಲ್ಲಿಕಾರ್ಖಾನೆಗಳ ಪ್ರತಿನಿಧಿಗಳ ಬದಲಿಗೆ ಮಾಲೀಕರೇ ಸಭೆಗೆ ಹಾಜರಾದರೆ ದರ ನಿಗದಿ ಕುರಿತು ನೇರ ಚರ್ಚೆ ನಡೆಸಲು ಅನುಕೂಲವಾಗುತ್ತದೆ ಎಂದು ರೈತ ಮುಖಂಡರು ಒತ್ತಾಯಿಸಿದರು.
ರೈತರ ಬೇಡಿಕೆ ಹಾಗೂ ಕಾರ್ಖಾನೆಗಳ ನಿಲುವಿನ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿನ.14ರಂದು ಕಾರ್ಖಾನೆ ಮಾಲೀಕರ ಉಪಸ್ಥಿತಿಯಲ್ಲಿಮತ್ತೊಂದು ಸಭೆ ನಡೆಸಲು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದ್ದಾರೆ. ಸಭೆಯಲ್ಲಿರೈತ ಮುಖಂಡರಾದ ಚೂನಪ್ಪ ಪೂಜೇರಿ, ಶಶಿಕಾಂತ ಗುರೂಜಿ, ಭುವನೇಶ್ವರ ಶಿಡ್ಲಾಪುರ, ಅಶೋಕ ಮರ್ಚರೆಡ್ಡಿ, ಜಿಎಂ ಶುಗರ್ಸ್ ಹಾಗೂ ಹೆಬ್ಬಾರ ಶುಗರ್ಸ್ ನ ಪ್ರತಿನಿಧಿಗಳು ಸೇರಿದಂತೆ ಹಲವರು ಇದ್ದರು.
-
ಕ್ವೋಟ್
ನ.14ರಂದು ನಿಗದಿಪಡಿಸಿರುವ ಸಭೆಗೆ ಕಾರ್ಖಾನೆಗಳ ಮಾಲೀಕರು ಖುದ್ದಾಗಿ ಹಾಜರಾಗಲೇಬೇಕು. ಇಲ್ಲದಿದ್ದರೆ ಸಕ್ಕರೆ ಕಾರ್ಖಾನೆಗಳನ್ನು ಶಾಶ್ವತವಾಗಿ ಬಂದ್ ಮಾಡಿಸಲಾಗುವುದು.
-ಚೂನಪ್ಪ ಪೂಜೇರಿ, ರೈತ ಮುಖಂಡ
ಫೋಟೊ: 12 ಗುರುದತ್ತ 3: ಹಾವೇರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆ ನಡೆಯಿತು.