ಮೂವರು ರೈತರಿಗೆ ರಾಷ್ಟ್ರೀಯ ಮನ್ನಣೆ| ಬೀಜ ಸಂರಕ್ಷಣೆ , ಕೃಷಿ ಜೈವಿಕ ವೈವಿಧ್ಯ ರಕ್ಷಣೆಗೆ ಗೌರವ
ವಿಕ ಸುದ್ದಿಲೋಕ ಹೊಸದಿಲ್ಲಿಕೃಷಿ ಜೈವಿಕ ವೈವಿಧ್ಯ ಮತ್ತು ಸ್ಥಳೀಯ ಬೀಜ ಸಂರಕ್ಷಣೆಯಲ್ಲಿಕರ್ನಾಟಕದ ಕೊಡುಗೆಗೆ ರಾಷ್ಟ್ರೀಯ ಮನ್ನಣೆ ದೊರೆತಿದೆ. ರಾಜ್ಯದ ಎರಡು ಗ್ರಾಮೀಣ ಸಮುದಾಯ ಸಂಘಟನೆಗಳು ಪ್ರತಿಷ್ಠಿತ ಪ್ಲಾಂಟ್ ಜೀನೋಮ್ ಸೇವಿಯರ್ ಸಮುದಾಯ ಪ್ರಶಸ್ತಿಗೆ ಭಾಜನವಾಗಿದ್ದು, ಮೂವರು ರೈತರಿಗೆ ಪ್ಲಾಂಟ್ ಜೀನೋಮ್ ಸೇವಿಯರ್ ರೈತ ಮನ್ನಣೆ ನೀಡಲಾಗಿದೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ತೀರ್ಥ ಗ್ರಾಮದ ಬೀಬಿ ಫಾತಿಮ ಸ್ವಸಹಾಯ ಸಂಘ ಮತ್ತು ದೇಸಿ ಸೀಡ್ ಪ್ರೊಡ್ಯೂಸರ್ಸ್ ಕಂಪನಿ ಲಿಮಿಟೆಡ್ (ಸಹಜ ಸೀಡ್ಸ್ ) ಸಂಸ್ಥೆಗಳು ಸ್ಥಳೀಯ ಬೆಳೆ ತಳಿಗಳ ಸಂರಕ್ಷಣೆ, ಕೃಷಿ ಜೈವಿಕ ವೈವಿಧ್ಯ ರಕ್ಷಣೆ ಹಾಗೂ ರೈತರ ಸಾಂಪ್ರದಾಯಿಕ ಜ್ಞಾನ ಉಳಿಸುವಲ್ಲಿನೀಡಿದ ಕೊಡುಗೆಗಾಗಿ ಪ್ರಶಸ್ತಿ ಪಡೆದಿವೆ. ಪ್ರತಿ ಸಮುದಾಯ ಪ್ರಶಸ್ತಿಯು 10 ಲಕ್ಷ ರೂ. ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದೆ.
ಧಾರವಾಡ ಜಿಲ್ಲೆಯ ತೀರ್ಥ ಗ್ರಾಮದ ಈಶ್ವರಗೌಡ ಪಾಟೀಲ, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುಲೂರ್ದೊಡ್ಡಿ ಗ್ರಾಮದ ಸಿ.ಪಿ. ಕೃಷ್ಣ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾನೂರು ಗ್ರಾಮದ ಅಸ್ಮಾ ಬಾನು ಅವರಿಗೆ ಪ್ಲಾಂಟ್ ಜೀನೋಮ್ ಸೇವಿಯರ್ ರೈತ ಮನ್ನಣೆ ನೀಡಲಾಗಿದೆ. ಪ್ರತಿ ರೈತರಿಗೆ 1ಲಕ್ಷ ರೂ. ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಹೊಸದಿಲ್ಲಿಯಲ್ಲಿಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ 22ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಪ್ರಶಸ್ತಿ ವಿತರಿಸಿದರು. ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ- 2001 ಜಾರಿಗೆ ಬಂದು 25 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿಕಾರ್ಯಕ್ರಮಕ್ಕೆ ವಿಶೇಷ ಮಹತ್ವ ದೊರೆಯಿತು.
ತೀರ್ಥ ಗ್ರಾಮದ ಬೀಬಿ ಫಾತಿಮ ಸ್ವಸಹಾಯ ಸಂಘವು ಸ್ಥಳೀಯ ಬೆಳೆ ತಳಿಗಳು, ಸಾಂಪ್ರದಾಯಿಕ ಬೀಜಗಳು ಮತ್ತು ಆಹಾರ ಸಂಸ್ಕೃತಿಯ ಸಂರಕ್ಷಣೆಯಲ್ಲಿಸಕ್ರಿಯವಾಗಿದೆ. ಗ್ರಾಮೀಣ ಮಹಿಳೆಯರ ಸಾಮೂಹಿಕ ಪ್ರಯತ್ನದ ಮೂಲಕ ಕೃಷಿ ಜೈವಿಕ ವೈವಿಧ್ಯ ಹಾಗೂ ಸ್ಥಳೀಯ ಆಹಾರ ವ್ಯವಸ್ಥೆಗಳನ್ನು ಬಲಪಡಿಸಬಹುದು ಎಂಬುದನ್ನು ಸಂಘ ತೋರಿಸಿಕೊಟ್ಟಿದೆ.
ಸಹಜ ಸಮೃದ್ಧ ಸಂಸ್ಥೆಯ ಪ್ರೇರಣೆಯಿಂದ ಸ್ಥಾಪನೆಯಾದ ಸಹಜ ಸೀಡ್ಸ್ , ಭಾರತದ ಮೊದಲ ರೈತ ಮಾಲೀಕತ್ವದ ಸಾವಯವ ಬೀಜ ಕಂಪನಿಯಾಗಿದೆ. ರೈತರ ಬೀಜ ಹಕ್ಕುಗಳನ್ನು ಬಲಪಡಿಸುವುದು, ಸ್ಥಳೀಯ ತಳಿಗಳನ್ನು ಉತ್ತೇಜಿಸುವುದು ಹಾಗೂ ಸಮುದಾಯ ಆಧಾರಿತ ಬೀಜ ಉತ್ಪಾದನೆ ಮತ್ತು ವಿತರಣಾ ವ್ಯವಸ್ಥೆ ರೂಪಿಸುವುದು ಸಂಸ್ಥೆಯ ಉದ್ದೇಶವಾಗಿದೆ.
ಫೋಟೋ ಶೀರ್ಷಿಕೆ
ಹೊಸದಿಲ್ಲಿಯಲ್ಲಿನಡೆದ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ 22ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.