ಮೇಕೆದಾಟು ಯೋಜನೆ: ಡಿಕೆಶಿ ಹೇಳಿಕೆಗೆ ತಮಿಳುನಾಡು ಗರಂ

Contributed by: vijay.cheelange@timesgroup.com|Vijaya Karnataka•
tamil nadu reacts strongly against mekedatu project
** ಡ್ಯಾಂ ನಿರ್ಮಾಣಕ್ಕೆ ಅವಕಾಶವಿಲ್ಲಎಂದು ಎಚ್ಚರಿಕೆ

ಚೆನ್ನೈ: ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಿಸಲು ತಮಿಳುನಾಡಿನ ಒಪ್ಪಿಗೆ ಅಗತ್ಯವಿಲ್ಲಎಂಬ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ತಮಿಳುನಾಡು ಸರಕಾರವು ತೀವ್ರವಾಗಿ ಖಂಡಿಸಿದೆ. ‘‘ಯಾವುದೇ ಕಾರಣಕ್ಕೂ ಈ ಯೋಜನೆಗೆ ನಾವು ಅವಕಾಶ ನೀಡುವುದಿಲ್ಲ,’’ ಎಂದು ತಮಿಳುನಾಡು ಗ್ರಾಮೀಣಾಭಿವೃದ್ಧಿ ಮತ್ತು ಜಲಸಂಪನ್ಮೂಲ ಸಚಿವ ಎನ್ . ಆನಂದ್ ಗುರುವಾರ ಎಚ್ಚರಿಕೆ ನೀಡಿದ್ದಾರೆ. ಮೇಕೆದಾಟು ಯೋಜನೆಯನ್ನು ವಿರೋಧಿಸಿ ಮತ್ತು ಕೇಂದ್ರ ಸರಕಾರವು ಮಧ್ಯಪ್ರವೇಶಿಸುವಂತೆ ಕೋರಿ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಇತ್ತೀಚೆಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ ಡಿಕೆಶಿ, ‘‘ತಮಿಳುನಾಡಿಗೆ ವಾರ್ಷಿಕ 177 ಟಿಎಂಸಿ ನೀರು ಹರಿಸುವ ಷರತ್ತಿನ ಮೇಲೆ ಡ್ಯಾಂ ನಿರ್ಮಿಸಲು ಸುಪ್ರೀಂ ಕೋರ್ಟ್ ಈಗಾಗಲೇ ಒಪ್ಪಿಗೆ ನೀಡಿದೆ. ಹೀಗಾಗಿ ನಮಗೆ ಯಾರ ಅನುಮತಿಯೂ ಬೇಕಿಲ್ಲ. ಈ ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೈ ಹೆಚ್ಚು ಲಾಭವಿದೆ,’’ ಎಂದು ಸಮರ್ಥಿಸಿಕೊಂಡಿದ್ದರು.
ಇದಕ್ಕೆ ತಿರುಚಿರಾಪಳ್ಳಿಯಲ್ಲಿಸುದ್ದಿಗಾರರ ಎದುರು ಖಾರವಾಗಿ ಪ್ರತಿಕ್ರಿಯಿಸಿದ ಸಚಿವ ಆನಂದ್ , ‘‘ಡಿ.ಕೆ. ಶಿವಕುಮಾರ್ ಹೇಳುವಂತೆ ನಡೆಯಲು ನಾವು ಬಿಡುವುದಿಲ್ಲ,’’ಎಂದರು. ಡಿಎಂಕೆ ಹಿರಿಯ ನಾಯಕ ಹಾಗೂ ಮಾಜಿ ಜಲಸಂಪನ್ಮೂಲ ಸಚಿವ ದುರೈಮುರುಗನ್ ಮಾತನಾಡಿ, ‘‘ಕಾವೇರಿ ಒಂದು ಅಂತಾರಾಜ್ಯ ನದಿಯಾಗಿದ್ದು, ತಮಿಳುನಾಡಿನ ಒಪ್ಪಿಗೆಯಿಲ್ಲದೆ ಒಂದು ಬಕೆಟ್ ನೀರನ್ನೂ ತಡೆಹಿಡಿಯುವಂತಿಲ್ಲ. ಡ್ಯಾಂ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಯಾವುದೇ ಕಾನೂನಾತ್ಮಕ ಒಪ್ಪಿಗೆ ನೀಡಿಲ್ಲ. ನ್ಯಾಯಾಧೀಶರು ಕೇವಲ ತಮ್ಮ ಅಭಿಪ್ರಾಯವನ್ನಷ್ಟೇ ವ್ಯಕ್ತಪಡಿಸಿರಬಹುದು. ಮಾಸಿಕ ನೀರು ಬಿಡುವ ಹಿಂದಿನ ಸುಪ್ರೀಂ ಆದೇಶಗಳನ್ನೇ ಸರಿಯಾಗಿ ಪಾಲಿಸದ ಕರ್ನಾಟಕದ ಮೇಲೆ ಹೇಗೆ ನಂಬಿಕೆ ಇಡಲು ಸಾಧ್ಯ?,’’ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ, ಹೊಸ ಡ್ಯಾಂ ನಿರ್ಮಾಣಕ್ಕೆ ಕೇಂದ್ರ ಜಲ ಆಯೋಗ, ಅರಣ್ಯ ಮತ್ತು ಪರಿಸರ ಸಚಿವಾಲಯಗಳ ಕಡ್ಡಾಯ ಅನುಮತಿ ಪಡೆಯಬೇಕಿದೆ. ಈ ಹಿಂದೆ ಇಂತಹ ಪ್ರಯತ್ನಗಳನ್ನು ಅಧಿಕಾರಿಗಳು ತಿರಸ್ಕರಿಸಿದ್ದರು. ಹೀಗಿರುವಾಗ ಡಿಕೆಶಿ ಅವರ ಹೇಳಿಕೆ ಕೇವಲ ಉತ್ಸಾಹದ ಮಾತುಗಳಾಗಿವೆಯೇ ಹೊರತು ಇದೊಂದು ಅಸಾಧ್ಯವಾದ ಕಾರ್ಯ ಎಂದು ದುರೈಮುರುಗನ್ ಲೇವಡಿ ಮಾಡಿದ್ದಾರೆ.