(ಕಾನೂನು ಕನ್ನಡಿ) ಬಾಕಿ ಕೊಡದ ಬಾಡಿಗೆದಾರನಿಗೆ ಕಾನೂನು ಪಾಠ

Contributed by: keerthi.ks@timesofindia.com|Vijaya Karnataka•
tenants not paying rent know the legal steps
ನನ್ನ ವಾಣಿಜ್ಯ ಮಳಿಗೆಯನ್ನು ಬಾಡಿಗೆಗೆ ಪಡೆದಿರುವ ಬಾಡಿಗೆದಾರರು ಕಳೆದ 10 ತಿಂಗಳಿನಿಂದ ಬಾಡಿಗೆಯನ್ನು ಪಾವತಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿನಾನು ಕೈಗೊಳ್ಳಬೇಕಾದ ಕಾನೂನು ಕ್ರಮಗಳೇನು?

- ಪ್ರಾಣೇಶ್ , ಚಿಕ್ಕಮಗಳೂರು
ನಿಮ್ಮ ಪ್ರಕರಣಕ್ಕೆ ನಿಖರವಾದ ಕಾನೂನು ಕ್ರಮ ತಿಳಿಸಲು ಈ 3 ವಿವರಗಳು ಅಗತ್ಯ: 1. ಮಳಿಗೆಯ ಮಾಸಿಕ ಬಾಡಿಗೆ ಎಷ್ಟು? 2. ಮಳಿಗೆಯ ವಿಸ್ತೀರ್ಣ ಎಷ್ಟು ಚದರ ಅಡಿ? 3. ನೋಂದಾಯಿತ ಬಾಡಿಗೆ ಕರಾರು ಪತ್ರ ಇದೆಯೇ ಅಥವಾ ಸಾಮಾನ್ಯ ಬಾಡಿಗೆ ಕರಾರು ಪತ್ರವೇ?

1. ಸೆಕ್ಷನ್ 2(3)(ಇ)(ಐ)ಧಿ- 3,500 ರೂ. ಬಾಡಿಗೆ ಮಿತಿ

ಕರ್ನಾಟಕ ಬಾಡಿಗೆ ಕಾಯಿದೆ, 1999ರ ಪ್ರಕಾರ, ಕಾಯಿದೆಯು ಅನ್ವಯವಾಗದ ಕಟ್ಟಡಗಳ ಪೈಕಿ, ಮೊದಲನೇ ಅನುಸೂಚಿಯ ಭಾಗ- ‘ಎ’ನಲ್ಲಿನಮೂದಿಸಿರುವ ಪ್ರದೇಶಗಳಲ್ಲಿರುವ ಕಟ್ಟಡಗಳ ಪ್ರಮಾಣಿತ ಬಾಡಿಗೆ ಅಥವಾ ಕಾಯಿದೆ ಜಾರಿಗೆ ಬಂದ ದಿನಾಂಕದಂದು ಇದ್ದ ನಿರ್ಧಾರಿತ ಬಾಡಿಗೆ ತಿಂಗಳಿಗೆ 3,500 ರೂ. ಮೀರಿದ್ದರೆ, ಅಂಥ ಕಟ್ಟಡಗಳಿಗೆ ಈ ಕಾಯಿದೆ ಅನ್ವಯಿಸುವುದಿಲ್ಲ. ಇತರೆ ಪ್ರದೇಶಗಳಲ್ಲಿಈ ಮಿತಿ ತಿಂಗಳಿಗೆ 2,000 ರೂ. ಆಗಿರುತ್ತದೆ.

2. ಸೆಕ್ಷನ್ 2(3)(ಜಿ) ವಾಣಿಜ್ಯ ಕಟ್ಟಡಗಳಿಗೆ ಸಂಬಂಧಿಸಿದ ವಿನಾಯಿತಿ

ವಾಣಿಜ್ಯ ಉದ್ದೇಶಕ್ಕಾಗಿ ಬಳಸುವ ಕಟ್ಟಡಗಳಿಗೂ ಈ ಸೆಕ್ಷನ್ ಅನ್ವಯ. ಸಾಮಾನ್ಯವಾಗಿ 14 ಚ.ಮೀ.ಗಿಂತ ಹೆಚ್ಚಿನ ಪ್ಲಿಂಥ್ ಏರಿಯಾ ಹೊಂದಿರುವ ವಾಣಿಜ್ಯ ಕಟ್ಟಡಗಳು ಕಾಯಿದೆಯ ವ್ಯಾಪ್ತಿಯಿಂದ ಹೊರಗಿರುತ್ತವೆ. ಕರ್ನಾಟಕ ಬಾಡಿಗೆ ಕಾಯಿದೆ, 1999ರ ಸೆಕ್ಷನ್ 2(3)ರ ಪ್ರಕಾರ, ಸಾಮಾನ್ಯವಾಗಿ 14 ಚ.ಮೀ.ಗಿಂತ ಹೆಚ್ಚಿನ ವಿಸ್ತೀರ್ಣದ ವಾಣಿಜ್ಯ ಮಳಿಗೆಗಳಿಗೆ ಈ ಕಾಯಿದೆ ಅನ್ವಯಿಸುವುದಿಲ್ಲ. ಆದ್ದರಿಂದ, ನಿಮ್ಮ ವಾಣಿಜ್ಯ ಮಳಿಗೆಗೆ ಈ ಕಾಯಿದೆ ಅನ್ವಯಿಸುತ್ತದೆಯೇ ಅಥವಾ ಆಸ್ತಿಯ ವರ್ಗಾವಣೆ ಕಾಯಿದೆ, 1882 ಅನ್ವಯಿಸುತ್ತದೆಯೇ ಎಂಬುದನ್ನು ಮೊದಲು ನಿರ್ಧರಿಸಬೇಕು.

ಇನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಾಡಿಗೆಗೆ ನೀಡಿರುವ ಮಳಿಗೆಯ ಬಾಡಿಗೆದಾರರು ಕಳೆದ 10 ತಿಂಗಳಿನಿಂದ ಬಾಡಿಗೆ ಪಾವತಿಸದಿದ್ದರೆ, ಆಸ್ತಿಯ ಮಾಲೀಕರಾಗಿ ನೀವು ಕಾನೂನುಬದ್ಧವಾಗಿ ಈ ಕ್ರಮಗಳನ್ನು ಕೈಗೊಳ್ಳಬಹುದು.

1. ಬಾಕಿ ಬಾಡಿಗೆ ಪಾವತಿಸುವಂತೆ ಕಾನೂನು ನೋಟಿಸ್ ಜಾರಿ

- ಬಾಡಿಗೆದಾರರಿಗೆ ವಕೀಲರ ಮೂಲಕ ಕಾನೂನು ನೋಟಿಸ್ ಕಳುಹಿಸಬೇಕು.

- ಕಳೆದ 10 ತಿಂಗಳ ಬಾಕಿ ಬಾಡಿಗೆಯ ಸಂಪೂರ್ಣ ವಿವರ ನೀಡಬೇಕು.

- ಬಾಕಿ ಬಾಡಿಗೆಯನ್ನು 15 ದಿನಗಳೊಳಗೆ ಅಥವಾ ಅನ್ವಯವಾಗುವ ಕಾನೂನಿನ ಪ್ರಕಾರ ನಿಗದಿಪಡಿಸಿದ ಅವಧಿಯೊಳಗೆ ಪಾವತಿಸುವಂತೆ ತಿಳಿಸಬೇಕು.

- ನಿಗದಿತ ಅವಧಿಯಲ್ಲಿಬಾಡಿಗೆ ಪಾವತಿಸದಿದ್ದರೆ ಬಾಡಿಗೆ ಒಪ್ಪಂದವನ್ನು ಮುಕ್ತಾಯಗೊಳಿಸಿ, ಮಳಿಗೆಯ ಖಾಲಿ ಸ್ವಾಧೀನವನ್ನು ಹಸ್ತಾಂತರಿಸುವಂತೆ ಬೇಡಿಕೆ ಇಡಬೇಕು.

2. ಬಾಡಿಗೆ ಒಪ್ಪಂದವನ್ನು ಮುಕ್ತಾಯಗೊಳಿಸುವುದು

- ಬಾಡಿಗೆ ಒಪ್ಪಂದದಲ್ಲಿರುವ ಷರತ್ತುಗಳನ್ನು ಪರಿಶೀಲಿಸಬೇಕು.

- ನಿರಂತರವಾಗಿ ಬಾಡಿಗೆ ಪಾವತಿಸದಿರುವುದು ಒಪ್ಪಂದದ ಉಲ್ಲಂಘನೆಯಾಗಿದ್ದರೆ, ಒಪ್ಪಂದದ ಷರತ್ತುಗಳ ಪ್ರಕಾರ ಮುಕ್ತಾಯ ನೋಟಿಸ್ ನೀಡಬಹುದು.

- ಒಪ್ಪಂದದಲ್ಲಿಯಾವುದೇ ವಿಶೇಷ ಷರತ್ತು ಇಲ್ಲದಿದ್ದರೆ, ಆಸ್ತಿಯ ವರ್ಗಾವಣೆ ಕಾಯಿದೆ, 1882ರ ಸೆಕ್ಷನ್ 106 ಮತ್ತು 111ರ ಅನ್ವಯ ಮುಕ್ತಾಯದ ಕ್ರಮವನ್ನು ಪರಿಶೀಲಿಸಬೇಕು.

3. ಕರ್ನಾಟಕ ಬಾಡಿಗೆ ಕಾಯಿದೆ ಅನ್ವಯವಾಗುತ್ತದೆಯೇ ಎಂಬುದನ್ನು ಪರಿಶೀಲಿಸುವುದು ಅತ್ಯಂತ ಮುಖ್ಯವಾದ ಅಂಶ.

ಇನ್ನು ಬಾಡಿಗೆದಾರರು ನೋಟಿಸ್ ಗೆ ಸ್ಪಂದಿಸದಿದ್ದರೆ, ಸೂಕ್ತ ನ್ಯಾಯಾಲಯದಲ್ಲಿಪರಿಹಾರಗಳನ್ನು ಕೋರಿ ದಾವೆ ಹೂಡಬಹುದು.

- - -

(ತಗೋ ಕನ್ನಡ)

ಬಜ್ಜರ

ಇದು ನವರತ್ನಗಳಲ್ಲಿಒಂದಾದ ‘ವಜ್ರ’. ವಜ್ರಪಡಿ ವ್ಯಾಪಾರಿಗಳ ಬೀದಿ ‘ಬಜ್ಜರಕೇರಿ’. ಇನ್ನು ವಜ್ರದಿಂದ ಅಲಂಕೃತವಾದ ಮಹಲುಗಳಲ್ಲಿಬಜ್ಜರಕವಾಟ: ವಜ್ರದ ಬಾಗಿಲು, ಬಜ್ಜರಗಂಬ: ವಜ್ರದ ಸ್ತಂಭಗಳು ಇರುತ್ತವೆ. ಮುದ್ದಣನು ತನ್ನ ರಾಮಾಶ್ವಮೇಧಂ ಕಾವ್ಯದಲ್ಲಿ‘ಬಜ್ಜರ’ದ ಜಂತೆ (ತೊಲೆಗಳ ಮೇಲಿನ ವಜ್ರದ ಅಡ್ಡಪಟ್ಟಿ) ಇರುವ ದೇಗುಲವನ್ನು ಚಿತ್ರಿಸಿದ್ದಾನೆ. ಬಜ್ಜರಕ್ಕೆ ‘ಇಂದ್ರನ ವಜ್ರಾಯುಧ’ ಎನ್ನುವ ಅರ್ಥವೂ ಇದೆ. ಚೆನ್ನವೀರ ಕಣವಿ ಅವರು ಕಿತ್ತೂರು ಚೆನ್ನಮ್ಮನ ಕೈಯಲ್ಲಿವಜ್ರಾಯುಧವನ್ನು ಹಿಡಿಸಿದ್ದಾರೆ. ‘ಕಿತ್ತೂರಿನ ಕಿಡಿಗಳು’ ಕವಿತೆಯ ಸಾಲುಗಳು: ‘‘ಗುಣದಲ್ಲಿಗೌರಿ, ಕೆಚ್ಚೆದೆಯಲ್ಲಿಚಾಮುಂಡಿ,/ ಕ್ರೂರ ದಬ್ಬಾಳಿಕೆಗೆ ಬಿಚ್ಚುಗತ್ತಿಯ ಹಿಡಿದು/ ಕಿತ್ತೂರ ರಾಣಿ, ‘ಬಜ್ಜರ’ದ ಕಿಡಿ! ಮಾರ್ಪೊಳೆದು/ ಉಬ್ಬರಂಬರಿದು ಬಡಿದೆಬ್ಬಿಸಿದ ಕಾವಿನಲಿ’’. ಇಲ್ಲಿ‘ಬಡಿದೆಬ್ಬಿಸಿದ ಕಾವು’ ಮಾರ್ಪೊಳೆಯುವುದು- ವಜ್ರಾಯುಧದ ಕಿಡಿಯಂತೆ ‘ಪ್ರತಿಫಲಿಸಿ’ ರಾಣಿಯ ವೀರವು ಕಣ್ಣಿಗೆ ಕಟ್ಟುತ್ತದೆ.

- ಜಿ.ವಿ. ಅರುಣ

- ಪದ ಸೂಚಿಸಿದವರು: ರವೀಶ್ ಮೂಲಿಮನಿ, ಧಾರವಾಡ