ಐತಿಹಾಸಿಕ ಮುದಗಲ್ ಪಟ್ಟಣದ ಪೊಲೀಸ್ ಠಾಣೆಗೆ ನೂತನ ಪಿಎಸ್ ಐ ಆಗಿ ಸದ್ದಾಂ ಹುಸೇನ್ ಎಚ್ . ಅವರು ಕಳೆದ ನಾಲ್ಕು ದಿನಗಳಿಂದ ಅಧಿಕಾರ ವಹಿಸಿಕೊಂಡಿದ್ದು, ಪಟ್ಟಣ ಸೇರಿ ಸುತ್ತಲಿನ 58 ಗ್ರಾಮಗಳಲ್ಲಿಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಹಲವು ಸವಾಲುಗಳನ್ನು ಎದುರಿಸಬೇಕಿದೆ.
ಪಟ್ಟಣದಲ್ಲಿಮಟ್ಕಾ, ಜೂಜಾಟ, ಅಕ್ರಮ ಮದ್ಯ ಮಾರಾಟ, ಅಕ್ರಮ ಮರಳು ಸಾಗಣೆ ಸೇರಿ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣವೂ ಸವಾಲಾಗಿದೆ. ಕಳ್ಳತನ ಪ್ರಕರಣಗಳ ಪತ್ತೆ, ರಾತ್ರಿ ಪೊಲೀಸ್ ಗಸ್ತು ಹೆಚ್ಚಳ, ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಸಾರ್ವಜನಿಕರ ದೂರುಗಳಿಗೆ ತ್ವರಿತ ಸ್ಪಂದನೆ ನೀಡಬೇಕಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಬಡವರಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಣೆ ಮಾಡುವ ದಂಧೆಯ ಮೇಲೆ ನಿಗಾ ವಹಿಸುವುದು ಪ್ರಮುಖ ಸವಾಲಾಗಿದೆ. ಅಕ್ರಮ ಪಡಿತರ ಅಕ್ಕಿ ಸಂಗ್ರಹಣೆ ಮತ್ತು ಸಾಗಣೆ ಬಗ್ಗೆ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿಸಂಬಂಧಪಟ್ಟ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.
ಇನ್ನೊಂದೆಡೆ, ಅಗತ್ಯ ಪರವಾನಗಿ ಪಡೆಯದೆ ಕಲ್ಲುಸಾಗಣೆ ಮಾಡುವ ವಾಹನಗಳ ಸಂಚಾರಕ್ಕೂ ಕಡಿವಾಣ ಹಾಕಬೇಕಿದೆ. ನಿಯಮಬಾಹಿರವಾಗಿ ಕಲ್ಲುಸಾಗಣೆ ನಡೆಯುತ್ತಿದ್ದರೆ ಅಂತಹ ವಾಹನಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಹಕಾರದೊಂದಿಗೆ ಕ್ರಮ ಜರುಗಿಸುವ ಅಗತ್ಯವಿದೆ. ಪ್ರತಿಯೊಂದು ಗ್ರಾಮಗಳಲ್ಲಿಹೋಟೆಲ್ , ಪಾನ ಬೀಡಾ ಅಂಗಡಿ, ಮನೆಗಳಲ್ಲಿಅನಧಿಕೃತವಾಗಿ ಅಕ್ರಮ ಮದ್ಯ ಮಾರಾಟದಿಂದ ಯುವಕರು ಮದ್ಯ ಸೇವಿಸಿ ಸಾವನ್ನಪ್ಪಿರುವ ಘಟನೆಗಳು ನಡೆದಿವೆ. ಮತ್ತೊಂದಡೆ ಶಾಂತಿ ಕದಡುವಂತಾಗಿದ್ದು, ಕೆಲ ಬಡ ಕುಟುಂಬಗಳು ಬೀದಿಗೆ ಬಂದಿವೆ. ಮಟ್ಕಾ, ಇಸ್ಪೀಟ್ ಆಟ ರಾಜಾ ರೋಷವಾಗಿ ನಡೆಯುತ್ತಿವೆ. ಕೆಲ ಯುವಕರು ಜೂಜಾಟಕ್ಕೆ ಬಿದ್ದು ಮನೆ, ಜಮೀನು ಮಾರಾಟ ಮಾಡಿರುವ ಉದಾಹರಣೆಗಳು ನಡೆದಿವೆ. ಠಾಣೆಯ ವ್ಯಾಪ್ತಿಯಲ್ಲಿರುವ ಈ ಜ್ವಲಂತ ಸಮಸ್ಯೆಗಳಿಗೆ ನೂತನ ಪಿಎಸ್ ಐ ಸದ್ದಾಂ ಹುಸೇನ್ ಅವರು ಯಾವ ರೀತಿಯ ಕಾರ್ಯಾಚರಣೆ ಮೂಲಕ ಕಡಿವಾಣ ಹಾಕಲಿದ್ದಾರೆ ಎಂಬುವುದರ ಕುರಿತು ಸಾರ್ವಜನಿಕರು ಕಾತುರರಾಗಿದ್ದಾರೆ.
* ಕೋಟ್
ಪೊಲೀಸ್ ಠಾಣೆಗೆ ಬರುವ ಸಾಮಾನ್ಯ ಜನರಿಗೆ ನ್ಯಾಯಯುತ ಸ್ಪಂದನೆ ದೊರೆಯಬೇಕು. ಅಕ್ರಮ ಚಟುವಟಿಕೆಗಳಿಗೆ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಂಡು ಪಟ್ಟಣದಲ್ಲಿಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕು.
-ಸಂಜೀವ್ ಚಲವಾದಿ, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷರು, ಮುದಗಲ್
* ಕೋಟ್
ನಾನು ಮುದಗಲ್ ಠಾಣೆಗೆ ಹೊಸದಾಗಿ ಬಂದಿದ್ದು, ಪಟ್ಟಣ ಸೇರಿ ನಾನಾ ಗ್ರಾಮಗಳಲ್ಲಿಅಕ್ರಮ ಚಟುವಟಿಕೆ ಕುರಿತು ಮಾಹಿತಿ ಪಡೆದು, ಪರಿಶೀಲನೆ ಮಾಡುತ್ತೇನೆ. ಸಾರ್ವಜನಿಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲಾಗುವುದು.