ಚಿತ್ರ:12ಬಿಡಿಆರ್ 5: ಬೀದರ್ ನ ಬ್ರಿಮ್ಸ್ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಅಪಘಾತದಲ್ಲಿಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
* ಭೀಕರ ರಸ್ತೆ ಅಪಘಾತ ಪ್ರಕರಣ | ಅಪಘಾತದ ಸಂತ್ರಸ್ತರಿಗೆ ಬೆಲ್ದಾಳೆ ಸಾಂತ್ವನರಾಜಗೀರಾ ಗ್ರಾಮಕ್ಕೆ ಬೆಲ್ದಾಳೆ ಭೇಟಿ
ವಿಕ ಸುದ್ದಿಲೋಕ ಬೀದರ್
ತೆಲಂಗಾಣದ ಜಹೀರಾಬಾದ್ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿಬೀದರ್ ದಕ್ಷಿಣ ಕ್ಷೇತ್ರದ ರಾಜಗೀರಾ ಗ್ರಾಮದ ಆರು ಜನ ಮೃತಪಟ್ಟಿರುವ ಘಟನೆಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಸಂತಾಪ ವ್ಯಕ್ತಪಡಿಸಿದರು.
ಅಪಘಾತದಲ್ಲಿಮೃತಪಟ್ಟವರ ಕುಟುಂಬಸ್ಥರನ್ನು ಬುಧವಾರ ಭೇಟಿ ಮಾಡಿದ ಅವರು, ಕುಟುಂಬದವರ ದುಃಖದಲ್ಲಿಭಾಗಿಯಾಗಿ ಸಾಂತ್ವನ ಹೇಳಿದರು. ಒಂದೇ ಗ್ರಾಮದ ಆರು ಜೀವಗಳನ್ನು ಕಳೆದುಕೊಂಡಿರುವುದು ಅತ್ಯಂತ ದುಃಖಕರ ಹಾಗೂ ಹೃದಯವಿದ್ರಾವಕ ಘಟನೆ ಎಂದು ತಿಳಿಸಿದರು.
ಮೃತರ ಕುಟುಂಬಗಳಿಗೆ ಸರಕಾರದಿಂದ ದೊರೆಯಬೇಕಾದ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಿಹಾರ ಪ್ರಕ್ರಿಯೆ ಶೀಘ್ರವಾಗಿ ಪೂರ್ಣಗೊಳಿಸಲು ಪ್ರಯತ್ನಿಸುವುದಾಗಿ ಡಾ.ಶೈಲೇಂದ್ರ ಬೆಲ್ದಾಳೆ ಅವರು ಕುಟುಂಬಸ್ಥರಿಗೆ ಭರವಸೆ ನೀಡಿದರು.
ಬಳಿಕ ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು, ಅಪಘಾತದಲ್ಲಿಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಗಾಯಾಳುಗಳ ಕುಟುಂಬಸ್ಥರೊಂದಿಗೆ ಮಾತನಾಡಿ, ಅವರ ಆರೋಗ್ಯ ಸ್ಥಿತಿ ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡರು. ಗಾಯಾಳುಗಳ ಆರೋಗ್ಯ ಪರಿಸ್ಥಿತಿ,
ನೀಡಲಾಗುತ್ತಿರುವ ಚಿಕಿತ್ಸೆ, ಅಗತ್ಯ ಔಷಧೋಪಚಾರ ಮತ್ತು ವೈದ್ಯಕೀಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದ ಶಾಸಕರು, ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.