25ರಂದು ಈದ್ ಮಿಲಾದ್ ಮೆರವಣಿಗೆ

Contributed bymanjunatha.kp@timesgroup.com|Vijaya Karnataka
eid milad procession in vijayapura to convey message of unity and peace
ಭಾವೈಕ್ಯತೆ ಸಂದೇಶ ಸಾರೋಣ, ಶಾಂತಿ ಕಾಪಾಡೋಣ

25ರಂದು ಈದ್ ಮಿಲಾದ್ ಮೆರವಣಿಗೆ
ವಿಕ ಸುದ್ದಿಲೋಕ ವಿಜಯಪುರ

ನಗರದಲ್ಲಿಆ.25ರಂದು ನಡೆಯಲಿರುವ ಈದ್ ಮಿಲಾದ್ ಮೆರವಣಿಗೆ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ. ಇದು ವಿಜಯಪುರದ ಶತಮಾನಗಳ ಇತಿಹಾಸ, ಸೌಹಾರ್ದತೆ, ಸಹಬಾಳ್ವೆ ಹಾಗೂ ಸರ್ವಧರ್ಮೀಯ ಭಾವೈಕ್ಯತೆಯನ್ನು ಸಾರುವ ವಿಶೇಷತೆ ಹೊಂದಿದೆ. ಹೀಗಾಗಿ ಸರ್ವ ಧರ್ಮೀಯರು ಭಾಗವಹಿಸಬೇಕು ಎಂದು ಹಾಶಿಂಪೀರ ದರ್ಗಾದ ಜೈನುಲ್ ಆಬಿದಿನ್ ಹಾಶ್ಮಿ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘‘ಐತಿಹಾಸಿಕ ನಗರ ಆದಿಲ್ ಶಾಹಿ ಕಾಲದಿಂದಲೂ ಸೂಫಿ ಸಂತರು, ಧಾರ್ಮಿಕ ಪರಂಪರೆ ಹಾಗೂ ಸರ್ವಧರ್ಮೀಯ ಸಹಬಾಳ್ವೆಗೆ ಹೆಸರುವಾಸಿಯಾಗಿದೆ. ಸುಮಾರು 400 ವರ್ಷಗಳ ಹಿಂದೆ ಸೂಫಿ ಸಂತರು ಮಕ್ಕಾ-ಮದೀನಾದಿಂದ ಪ್ರವಾದಿ ಮೊಹಮ್ಮದರ ಮೂಹೆ ಮುಬಾರಕ್ , ಅಂದರೆ ಪವಿತ್ರ ಕೂದಲನ್ನು ಇಲ್ಲಿಗೆ ತಂದು ಆಸಾರ ಮಹಲ್ ನಲ್ಲಿಸಂರಕ್ಷಿಸಿದ್ದಾರೆ ಎಂಬುದು ಜನರ ನಂಬಿಕೆಯಾಗಿದೆ,’’ ಎಂದರು.

ಮೌಲಾನಾ ಯುಸುಫ್ ಖಾದ್ರಿ ಮಾತನಾಡಿ, ‘‘ಪವಿತ್ರ ಮೂಹೆ ಮುಬಾರಕ್ ನ ಜಿಯಾರತ್ ಮಾಡಲು ವರ್ಷದಲ್ಲಿಒಂದು ದಿನ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಈ ಬಾರಿ ಆ.25ರಂದು ಜಿಯಾರತ್ ನಡೆಯಲಿದ್ದು, ಇದರ ಅಂಗವಾಗಿ ಭವ್ಯ ಮೆರವಣಿಗೆ ನಡೆಯಲಿದೆ,’’ ಎಂದು ಹೇಳಿದರು.

ಜಮೀರ್ ಅಹ್ಮದ್ ಬಾಂಗಿ, ಇದ್ರೋಸ್ ಬಕ್ಷಿ, ನಿಜಾಮ್ ಸಿರಿಯಾಳ, ಜಿಯಾ ಪಠಾಣ್ , ಸೈಯದ್ ಗುಡಗುಂಟಿ ಇದ್ದರು.

---

ಮೆರವಣಿಗೆಯಲ್ಲಿಎಲ್ಲರೂ ಪರಸ್ಪರ ಗೌರವ ಮತ್ತು ಸಹೋದರತ್ವದಿಂದ ಭಾಗವಹಿಸಿ, ಭಾವೈಕ್ಯತೆಯ ಸಂದೇಶ ಸಾರಬೇಕು. ಯುವಕರು ಶಾಂತಿ, ಸೌಹಾರ್ದತೆ ಮತ್ತು ಶಿಸ್ತು ಕಾಪಾಡಬೇಕು. ಯಾವುದೇ ರೀತಿಯ ಪ್ರಚೋದನೆ, ವದಂತಿ ಅಥವಾ ಅನಗತ್ಯ ಚರ್ಚೆಗಳಿಗೆ ಅವಕಾಶ ನೀಡದೆ ಮೆರವಣಿಗೆಯಲ್ಲಿಪಾಲ್ಗೊಳ್ಳಬೇಕು.

-ಮಹಮ್ಮದ್ ರಫಿ ಕಾಣೆ ಅಧ್ಯಕ್ಷ, ಜೊಲುಸ್ ಕಮಿಟಿ

--

ಮೆರವಣಿಗೆಯಲ್ಲಿಭಾಗವಹಿಸುವ ಸಾರ್ವಜನಿಕರು ಪೊಲೀಸ್ ಇಲಾಖೆ ಹಾಗೂ ಆಯೋಜಕರು ನೀಡುವ ಸೂಚನೆಗಳನ್ನು ಪಾಲಿಸಬೇಕು. ಸಂಚಾರಕ್ಕೆ ತೊಂದರೆಯಾಗದಂತೆ, ಸಾರ್ವಜನಿಕರಿಗೆ ಯಾವುದೇ ರೀತಿಯ ಅನನುಕೂಲವಾಗದಂತೆ ಮತ್ತು ನಗರದ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ಬಾರದ ರೀತಿಯಲ್ಲಿಕಾರ್ಯಕ್ರಮ ಯಶಸ್ವಿಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

-ಇರ್ಫಾನ್ ಶೇಖ್ ಯುವ ಮುಖಂಡ