ವಿಕ ಸುದ್ದಿಲೋಕ ಕುಂಬಳೆಕುಂಬಳೆ ದೇವಿ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಸೇವಾ ರಸ್ತೆಗೆ ಹೊಂದಿಕೊಂಡಂತೆ ನಿರ್ಮಿಸಲಾಗಿರುವ ಬಸ್ ನಿಲ್ದಾಣವು ಸಂಪೂರ್ಣವಾಗಿ ಗಿಡಗಂಟಿಗಳಿಂದ ಆವೃತವಾಗಿದೆ. ಇಲ್ಲಿ ಹಾವು-ಚೇಳುಗಳ ಹಾವಳಿ ಹೆಚ್ಚಾಗಿದ್ದು, ಬಸ್ ಗಾಗಿ ಕಾಯುವವರ ಜೀವಕ್ಕೆ ಇದು ಗಂಭೀರ ಬೆದರಿಕೆಯೊಡ್ಡಿದೆ. ಮಳೆಗಾಲದಲ್ಲಿಕಳೆ ಕತ್ತರಿಸಿ ಸ್ವಚ್ಛಗೊಳಿಸಲು ಯಾವುದೇ ಕ್ರಮ ಕೈಗೊಳ್ಳದೇ ಇರುವುದು, ಬಸ್ ನಿಲ್ದಾಣದಲ್ಲಿಕಾಯುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟುಮಾಡಿದೆ.
ರಾಷ್ಟ್ರೀಯ ಹೆದ್ದಾರಿಗಳು, ಸೇವಾ ರಸ್ತೆಗಳು ಮತ್ತು ಅಂಡರ್ ಪಾಸ್ ಗಳನ್ನು ಸ್ವಚ್ಛಗೊಳಿಸುವ ಜವಾಬ್ದಾರಿಯನ್ನು ನಿರ್ಮಾಣ ಕಂಪನಿಯೊಂದು ಗುತ್ತಿಗೆ ಪಡೆದುಕೊಂಡಿದೆ. ಸ್ವಚ್ಛತಾ ಕಾರ್ಮಿಕರು ತಿಂಗಳಿಗೊಮ್ಮೆ ಕಸ-ಕಡ್ಡಿಗಳನ್ನು ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ತೆಗೆದು ಗುಡಿಸಿ ಸ್ವಚ್ಛಗೊಳಿಸುತ್ತಿದ್ದಾರೆ. ಆದರೆ, ಸೇವಾ ರಸ್ತೆ ಬದಿಯ ಬಸ್ ನಿಲ್ದಾಣಗಳ ಸಮೀಪ ಬೆಳೆದಿರುವ ಕಳೆ ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿಇವರ ಕಡೆಯಿಂದ ಯಾವುದೇ ಕ್ರಮ ಜರುಗುತ್ತಿಲ್ಲ.
ಇದಲ್ಲದೆ, ಬಸ್ ನಿಲ್ದಾಣಗಳ ಮೂಲಸೌಕರ್ಯದ ಕೊರತೆಯೂ ಎಲ್ಲೆಡೆ ಕಾಡುತ್ತಿದೆ. ಕೆಲವು ಕಡೆಗಳಲ್ಲಿಬಲವಾದ ಮಳೆಯಾದಾಗ ನಿಲ್ದಾಣದ ಆಸನಗಳ ಮೇಲೆ ಮಳೆನೀರು ಸೋರಿಕೆಯಾಗುತ್ತದೆ. ಇದು ಹಿರಿಯ ನಾಗರಿಕರಿಗೆ ಹಾಗೂ ಹಸುಗೂಸುಗಳೊಂದಿಗೆ ಬಸ್ ಗಾಗಿ ಕಾಯುವ ತಾಯಂದಿರಿಗೆ ತೀವ್ರ ಯಾತನೆಗೆ ಕಾರಣವಾಗಿದೆ.
ಬಸ್ ನಿಲ್ದಾಣಗಳನ್ನು ಸ್ವಚ್ಛವಾಗಿ ನಿರ್ವಹಿಸಬೇಕು ಹಾಗೂ ಮಳೆಗಾಲದಲ್ಲಿಮಳೆನೀರು ಸೋರದಂತೆ ತಡೆಯಲು ಕೂಡಲೇ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಮತ್ತು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
21ಕೆಯು
ಗಿಡಗಂಟಿಗಳಿಂದ ಆವೃತವಾಗಿರುವ ಕುಂಬಳೆ ದೇವಿ ನಗರ ಸೇವಾ ರಸ್ತೆ ಬದಿಯ ಬಸ್ ನಿಲ್ದಾಣ.