ವೃದ್ಧರ ಮನೆಬಾಗಿಲಿಗೆ ಬಂದು ಆಧಾರ್ ಅಪ್ ಡೇಟ್

Contributed bymambadynews@gmail.com|Vijaya Karnataka
aadhar service delivered to elderly at their doorstep in bantwal
ಒಂದು ಕಿ.ಮೀ. ದೂರ ಬಯೋಮೆಟ್ರಿಕ್ ವ್ಯವಸ್ಥೆ ಹೊತ್ತೊಯ್ದು ಸೇವೆ ನೀಡಿದ ಸಿಬ್ಬಂದಿ

ವಿಕ ಸುದ್ದಿಲೋಕ ಬಂಟ್ವಾಳ
ವೃದ್ಧಾಪ್ಯದಿಂದ ನಡೆದಾಡಲು ಅಸಾಧ್ಯ, ರಸ್ತೆ ಸಮಸ್ಯೆಯಿಂದ ವಾಹನವೂ ತೆರಳದ ಸ್ಥಿತಿ. ಪರಿಣಾಮ ಅಂಚೆ ಇಲಾಖೆಯ ಆಧಾರ್ ಸಿಬ್ಬಂದಿ ಕಂಪ್ಯೂಟರ್ ನ್ನು 1 ಕಿ.ಮೀ. ದೂರ ಹೊತ್ತು ಸಾಗಿ ವೃದ್ಧೆಯೊಬ್ಬರಿಗೆ ಆಧಾರ್ ಸೇವೆ ಒದಗಿಸಿದ ಘಟನೆ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದಲ್ಲಿನಡೆದಿದೆ.

ಅಮ್ಟಾಡಿ ಗ್ರಾಮದ 87 ವರ್ಷದ ವೃದ್ಧೆ ಜೂಲಿಯಾನ ಎಂಬವರ ಆಧಾರ್ ನವೀಕರಣ ಆಗದೇ ಸರಕಾರದ ಸವಲತ್ತು ಸಿಗಲು ಅಡಚಣೆಯಾಗಿತ್ತು. ಆಧಾರ್ ನವೀಕರಣ ಸೇವೆ ಮಾಡಿಸಲು ವೃದ್ಧೆಗೆ ಆಧಾರ್ ಸೇವಾ ಕೇಂದ್ರಕ್ಕೆ ತೆರಳುವುದು ಕಷ್ಟಕರವಾದ ಸ್ಥಿತಿ ಇತ್ತು. ವೃದ್ದಾಪ್ಯದಿಂದ ನಡೆದಾಡಲು ಸಾಧ್ಯವಿರಲಿಲ್ಲ. ವಾಹನದಲ್ಲಿಹೋಗೋಣ ಎಂದರೆ ರಸ್ತೆ ಸಂಪರ್ಕ ಸಮಸ್ಯೆ ಅಲ್ಲಿತ್ತು. ಸಮಸ್ಯೆ ಅರಿತ ಮೊಡಂಕಾಪು ಅಂಚೆ ಶಾಖಾ ಕಚೇರಿಯ ಅಂಚೆ ವಿತರಕಿ ಸವಿತಾ ಅವರು ಅಂಚೆ ಇಲಾಖೆಯ ಆಧಾರ್ ಸೇವಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

ಕಂಪ್ಯೂಟರ್ ಹೊತ್ತೊಯ್ದರು:

ಸ್ಪಂದಿಸಿದ ಪುತ್ತೂರು ವಿಭಾಗದ ಸಿಸ್ಟಮ್ ಆಡಳಿತಾಧಿಕಾರಿ ನೂತನ್ ಬಂಗೇರ ಅವರು ವೃದ್ಧೆಯ ಮನೆಯವರ ಸಹಕಾರದಲ್ಲಿಸುಮಾರು 1 ಕಿ.ಮೀ. ದೂರದವರೆಗೆ ಗುಡ್ಡದ ಪ್ರದೇಶಕ್ಕೆ ಆಧಾರ್ ಮಾಡಿಸುವ ಕಂಪ್ಯೂಟರ್ ಮತ್ತಿತರ ಸೊತ್ತುಗಳನ್ನು ಹೊತ್ತು ಸಾಗಿ ವೃದ್ಧೆಯ ಮನೆಗೆ ತೆರಳಿ ಆಧಾರ್ ನವೀಕರಣ (ಬಯೋ ಮೆಟ್ರಿಕ್ ಅಪ್ ಡೇಟ್ , ಮೊಬೈಲ್ ನಂಬರ್ ಅಪ್ ಡೇಟ್ ) ಕಾರ್ಯವನ್ನು ಸ್ಥಳದಲ್ಲೇ ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಅಂಚೆ ಇಲಾಖೆ-ಆಧಾರ್ ಸೇವಾ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಇಲಾಖೆಯ ಮೇಲಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

100ಕ್ಕೂ ಅಧಿಕ ಮನೆ ಭೇಟಿ:

ನಡೆದಾಡಲು ಅಸಾಧ್ಯವಾಗಿರುವವರ ಬಳಿಗೆ, ವಿಶೇಷ ಚೇತನರ ಆಶ್ರಮಗಳಿಗೆ, ಮನೆಗಳಿಗೆ ತೆರಳಿಗೆ ಅವರಿಗೆ ಆಧಾರ್ ಸೇವೆ ಒದಗಿಸುವ ಕೆಲಸವನ್ನು ಅಂಚೆ ಇಲಾಖೆಯ ಆಧಾರ್ ಸೇವಾ ವಿಭಾಗ ನಡೆಸುತ್ತಿದ್ದಾರೆ. ಪುತ್ತೂರು ವಿಭಾಗ ವ್ಯಾಪ್ತಿಯಲ್ಲಿಈವರೆಗೆ 100ಕ್ಕೂ ಅಧಿಕ ಕಡೆಗಳಿಗೆ ಮನೆಗೆ ತೆರಳಿ ಆಧಾರ್ ಸೇವೆ ನೀಡಲಾಗಿದೆ.

ಚಿತ್ರ: 22ಬಿಎಚ್ ಆಧಾರ್

ವೃದ್ಧೆ ಜೂಲಿಯಾನಾ ಅವರ ಮನೆಗೆ ತೆರಳಿ ಆಧಾರ್ ಮಾಡಿಸುತ್ತಿರುವ ಸಿಬ್ಬಂದಿ

ಚಿತ್ರ: 22ಬಿಎಚ್ ಕಾಂಪ್

ಕಂಪ್ಯೂಟರ್ ಹೊತ್ತೊಯ್ದ ಸಿಬ್ಬಂದಿ