---ಗೋರಖನಾಥರು ತಮ್ಮ ಗುರುಗಳನ್ನು ರಕ್ಷಿಸಲು ಪ್ರಯತ್ನಿಸಿದಾಗ ಏನಾಯಿತು?
------------
ಸದ್ಗುರು ಜಗ್ಗಿ ವಾಸುದೇವ್ | ಈಶ ಫೌಂಡೇಶನ್
-------------------------------
ಗೋರಖನಾಥರು ಇಂದಿಗೂ ಭಾರತದ ಅತ್ಯಂತ ಪ್ರಸಿದ್ಧ ಯೋಗಿಗಳಲ್ಲಿಒಬ್ಬರು. ಅವರ ಅನುಯಾಯಿಗಳನ್ನು ಸಾಮಾನ್ಯವಾಗಿ ‘ಕಾನ್ ಫಟ್ ್ಟ’ ಎಂದು ಕರೆಯಲಾಗುತ್ತದೆ - ಅವರ ಕಿವಿಯಲ್ಲಿರುವ ದೊಡ್ಡ ರಂಧ್ರದಿಂದ ಗುರುತಿಸಲ್ಪಡುತ್ತಾರೆ.
ಗೊರಖನಾಥರ ಗುರುಗಳು ಮತ್ಸ್ಯೇಂದ್ರನಾಥರು. ಜನರು ಸಾಕ್ಷಾತ್ ಶಿವನ ಅವತಾರವೆಂದೇ ಭಾವಿಸುತ್ತಿದ್ದ ಮತ್ಸ್ಯೇಂದ್ರನಾಥರು, ಅಪಾರ ಸಾಮರ್ಥ್ಯದ ಯೋಗಿ ಮತ್ತು ಅನುಭಾವಿಯಾಗಿದ್ದರು. ಅವರು ಕೇವಲ ಮನುಷ್ಯರಂತಿರಲಿಲ್ಲ; ಅವರು ಲೌಕಿಕಕ್ಕೆ ಮೀರಿದ ಸ್ಥಿತಿಯಲ್ಲಿದ್ದರು. ಗೊರಖನಾಥರೂ ಸೇರಿದಂತೆ ಅವರ ಕೆಲವು ಘೋರ ಶಿಷ್ಯರನ್ನು ಹೊರತುಪಡಿಸಿ, ಅವರು ಜನರಿಂದ ದೂರವಾಗಿ ಅತ್ಯಂತ ಏಕಾಂತ ಜೀವನವನ್ನು ನಡೆಸುತ್ತಿದ್ದರು. ಗೋರಖನಾಥರು ಭಾರತದ ಪಶ್ಚಿಮ ಕರಾವಳಿಯ ಮೂಲದವರಾಗಿದ್ದಾರೆ; ಮತ್ಸ್ಯೇಂದ್ರನಾಥರು ಕೂಡ ಅಲ್ಲೇ ಇದ್ದರು. ಇಂದಿಗು ಅವರ ಹೆಸರಿನಲ್ಲಿಒಂದು ಪರ್ವತವಿದೆ.
ಇದು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ನಡೆದ ಘಟನೆ: ಒಂದು ದಿನ, ಗೋರಖನಾಥರು ತಮ್ಮ ಗುರುಗಳಾದ ಮತ್ಸ್ಯೇಂದ್ರನಾಥರು ಯಾರನ್ನೋ ನೋಡಲು ಅಸ್ಸಾಂಗೆ ಹೋಗಿ ಹಿಂತಿರುಗಿ ಬರದೇ ಇದ್ದುದನ್ನು ಗಮನಿಸಿದರು. ತಮ್ಮ ದಿವ್ಯದೃಷ್ಟಿಯಲ್ಲಿ, ಅವರು ತಮ್ಮ ಗುರುಗಳು ದೈಹಿಕ ಸುಖಗಳಲ್ಲಿಮುಳುಗಿರುವುದನ್ನು ಕಂಡರು. ‘ನನ್ನ ಗುರುಗಳು ಈ ಸ್ಥಿತಿಯಲ್ಲಿರಲು ಹೇಗೆ ಸಾಧ್ಯ?’ ಎಂದು ಅವರು ದಿಗ್ಭ್ರಮೆಗೊಂಡರು. ಹೀಗಾಗಿ ಅವರು ಪಶ್ಚಿಮ ಕರಾವಳಿಯಿಂದ ಮೂರು ಸಾವಿರ ಕಿಲೋಮೀಟರ್ ಗಿಂತಲೂ ದೂರವಿರುವ ಅಸ್ಸಾಂಗೆ ಕಾಲ್ನಡಿಗೆಯಲ್ಲೇ ಹೊರಟರು. ಅವರು ಪೂರ್ತಿ ಹಾದಿಯನ್ನು ನಡೆದೇ ಸಾಗಿದರು, ಮತ್ತು ಅಲ್ಲಿತಮ್ಮ ಗುರುಗಳು ವೇಶ್ಯೆಯೊಬ್ಬಳ ಮನೆಯಲ್ಲಿಕುಳಿತು, ಇಬ್ಬರು ಮಹಿಳೆಯರನ್ನು ಮಡಿಲಿನಲ್ಲಿಟ್ಟುಕೊಂಡು ದೈಹಿಕ ಸುಖವನ್ನು ಅರಸುತ್ತಿರುವುದನ್ನು ಕಂಡರು. ಅವರಿಗೆ ಇದನ್ನು ನಂಬಲು ಸಾಧ್ಯವೇ ಆಗಲಿಲ್ಲ. ಅವರು, ‘ಮತ್ಸ್ಯೇಂದ್ರನಾಥರಿಗೆ ಇದು ಹೇಗೆ ಸಂಭವಿಸಲು ಸಾಧ್ಯ? ಅವರು ಸಾಕ್ಷಾತ್ ಶಿವನೇ ಆಗಿದ್ದಾರೆ,’ ಎಂದು ಯೋಚಿಸಿದರು. ಗೋರಖನಾಥರು ಮತ್ಸ್ಯೇಂದ್ರನಾಥರನ್ನು ಎಷ್ಟೋ ಶಕ್ತಿಶಾಲಿ ರೂಪಗಳಲ್ಲಿಕಂಡಿದ್ದರು, ಆದರೆ ಇಲ್ಲಿಈ ವ್ಯಕ್ತಿ ಇಬ್ಬರು ವೇಶ್ಯೆಯರೊಂದಿಗೆ ಕುಳಿತಿದ್ದರು!
ನಂತರ ಗೋರಖನಾಥರು ಅವರಿಗೆ, ‘ನೀವು ಬರಲೇಬೇಕು’ ಎಂದು ಹೇಳಿದರು ಮತ್ತು ತಮ್ಮ ಉಗ್ರತೆಯಿಂದ ಆ ವೇಶ್ಯೆಯರನ್ನು ಹೆದರಿಸಿ ಓಡಿಸಿದರು. ಅವರು ತಮ್ಮ ಗುರುಗಳನ್ನು ಅಲ್ಲಿಂದ ಹೊರಗೆ ಕರೆದುಕೊಂಡು ಬಂದರು. ದಾರಿಯಲ್ಲಿ, ಮತ್ಸ್ಯೇಂದ್ರನಾಥರು ಸ್ನಾನಕ್ಕೆ ಹೋದರು. ಅವರು ತಮ್ಮ ಕೈಚೀಲವನ್ನು ಗೊರಖನಾಥರಿಗೆ ನೀಡಿ, ‘ಇದರ ಬಗ್ಗೆ ಜಾಗ್ರತೆಯಿರಲಿ. ಇದರಲ್ಲಿತುಂಬಾ ಅಮೂಲ್ಯವಾದದ್ದು ಇದೆ,’ ಎಂದು ಹೇಳಿ ನದಿಯಲ್ಲಿಸ್ನಾನ ಮಾಡಲು ಹೋದರು. ಆ ಚೀಲ ತುಂಬಾ ತೂಕವಾಗಿತ್ತು, ಆದ್ದರಿಂದ ಗೋರಖನಾಥರು ಅದನ್ನು ತೆರೆದು ನೋಡಿದಾಗ ಅಲ್ಲಿಎರಡು ದೊಡ್ಡ ಚಿನ್ನದ ಗಟ್ಟಿಗಳಿದ್ದವು. ಅವರು ತುಂಬಾ ಹೃದಯವಿದ್ರಾವಕವಾಗಿ - ‘ನನ್ನ ಗುರುಗಳಿಗೆ ಏನಾಗಿದೆ? ಈ ಮೊದಲು ವೇಶ್ಯೆಯರ ಜೊತೆಗಿದ್ದರು, ಈಗ ಚಿನ್ನವನ್ನು ಸಂಗ್ರಹಿಸುತ್ತಿದ್ದಾರೆ! ಇವರು ಮನಸ್ಸು ಮಾಡಿದರೆ ಬಂಡೆಯ ಮೇಲೆ ಮೂತ್ರ ವಿಸರ್ಜಿಸಿ ಇಡೀ ಬಂಡೆಯನ್ನೇ ಚಿನ್ನವಾಗಿಸಬಹುದು; ಇವರಲ್ಲಿಅಷ್ಟೊಂದು ತಾಂತ್ರಿಕ ಶಕ್ತಿ ಇದೆ. ಆದರೆ ಎರಡು ಚಿನ್ನದ ಗಟ್ಟಿಗಳಿಗೆ ಆಕರ್ಷಿತರಾಗಿದ್ದಾರೆ. ಏಕೆ?’ ಎಂದುಕೊಂಡು ಅವರು ಆ ಎರಡು ಚಿನ್ನದ ಗಟ್ಟಿಗಳನ್ನು ತೆಗೆದುಕೊಂಡು ಕಾಡಿಗೆ ಎಸೆದರು, ನಂತರ ಅವರಿಬ್ಬರೂ ಮುಂದೆ ನಡೆದರು.
ತಮ್ಮ ಗುರುಗಳು ದಾರಿ ತಪ್ಪುತ್ತಿದ್ದಾರೆ ಎಂಬ ದೊಡ್ಡ ಯಾತನೆ ಗೊರಖನಾಥರಲ್ಲಿತ್ತು. ಈಗ ತಮ್ಮ ಗುರುಗಳನ್ನು ರಕ್ಷಿಸಲು ತಾವು ಮೂರು ಸಾವಿರ ಕಿಲೋಮೀಟರ್ ನಡೆದು ಹೋಗಿದ್ದರ ಕುರಿತು ಹೆಮ್ಮೆ ಮೂಡಿತು. ಈ ಹೆಮ್ಮೆ ಅವರಲ್ಲಿಬಂದ ತಕ್ಷಣ, ಮತ್ಸ್ಯೇಂದ್ರನಾಥರು ಗೊರಖನಾಥರ ತಲೆಯ ಮೇಲೆ ಕೈ ಇಟ್ಟರು, ಮತ್ತು ಇದ್ದಕ್ಕಿದ್ದಂತೆ ಗೊರಖನಾಥರಿಗೆ ತಾವು ಅಲ್ಲೇ ಕುಳಿತಿರುವುದು ಅರಿವಾಯಿತು. ಅವರು ಅಸ್ಸಾಂಗೆ ನಡೆದುಕೊಂಡು ಹೋಗಿರಲಿಲ್ಲ, ವೇಶ್ಯೆಯರನ್ನು ನೋಡಿರಲಿಲ್ಲ, ಚಿನ್ನವನ್ನೂ ನೋಡಿರಲಿಲ್ಲ- ಏನೂ ನಡೆದಿರಲಿಲ್ಲ. ಅದೆಲ್ಲವೂ ಅವರ ಮನಸ್ಸಿನಲ್ಲೇ ನಡೆಯುತ್ತಿತ್ತು. ಆದರೆ ನಿಜವಾಗಿಯೂ ನಡೆದು ಹೋಗಿದ್ದು, ಅಲ್ಲಿಗೆ ತಲುಪಿ ಕಂಡಿದ್ದೆಲ್ಲವೂ ಅವರ ಪಾಲಿಗೆ ನಿಜವಾಗಿತ್ತು. ಇದೆಲ್ಲವೂ ಗುರುಗಳ ತಾಂತ್ರಿಕ ಶಕ್ತಿಯಿಂದ ನಡೆದಿತ್ತು. ಮತ್ಸ್ಯೇಂದ್ರನಾಥರು ತಮ್ಮ ಸುತ್ತಲೂ ಎಲ್ಲವನ್ನೂ ವಾಸ್ತವದಲ್ಲಿಸೃಷ್ಟಿಸಿದ್ದರು. ಮತ್ತು ಗೋರಖನಾಥರು ಸಂಪೂರ್ಣವಾಗಿ ನೊಂದುಹೋದರು - ‘ನಾನು ಇದೆಲ್ಲವನ್ನೂ ಮಾಡಿದೆ. ನನ್ನ ಗುರುಗಳು ವೇಶ್ಯೆಯರ ಜೊತೆಗಿದ್ದಾರೆ ಎಂದು ಊಹಿಸಿಕೊಂಡೆ. ನನ್ನ ಗುರುಗಳು ಚಿನ್ನಕ್ಕಾಗಿ ಹಂಬಲಿಸುತ್ತಿದ್ದಾರೆ ಎಂದು ಭಾವಿಸಿದೆ’ ಎಂದು ಅವರು ತೀವ್ರ ಯಾತನೆಯಲ್ಲಿದ್ದರು. ಆಗ ಮತ್ಸ್ಯೇಂದ್ರನಾಥರು, ‘ಪರವಾಗಿಲ್ಲ. ಕನಿಷ್ಠ ನನ್ನನ್ನು ರಕ್ಷಿಸಲು ನೀನು ಮೂರು ಸಾವಿರ ಕಿಲೋಮೀಟರ್ ನಡೆಯಲು ಸಿದ್ಧನಿದ್ದೆಯಲ್ಲ. ಅದು ನಿನ್ನ ಪಾಲಿಗೆ ದೊಡ್ಡದು; ಆ ಭಾವನೆಯನ್ನು ನಿನ್ನೊಳಗೆ ಹಾಗೆಯೇ ಉಳಿಸಿಕೊ’ ಎಂದು ಹೇಳಿದರು.